ಲಾಕ್‌ಡೌನ್ ಎಫೆಕ್ಟ್: ದುಡಿಮೆಯೂ ಇಲ್ಲ, ದುಡ್ಡೂ ಇಲ್ಲ, ಗರ್ಭಕೋಶ ಚಿಕಿತ್ಸೆಗೆ ಬಡ ಮಹಿಳೆಯ ಪರದಾಟ
ಗರ್ಭಕೋಶ ಚಿಕಿತ್ಸೆಗೆ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಮಹಿಳೆ| ಅಂಧ ಪುತ್ರನೊಂದಿಗೆ ಜೀವನ ನಿರ್ವಹಣೆಗೆ ಪರದಾಟ| ತೀವ್ರ ಅನಾರೋಗ್ಯಕ್ಕೆ ಒಳಗಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ವೆಂಕಟಲಕ್ಷ್ಮೀ| ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ, ಸಂಘ-ಸಂಸ್ಥೆಯವರಾಗಲಿ ಈ ಕುಟುಂಬಕ್ಕೆ ಸಹಾಯಹಸ್ತ ಚಾಚಬೇಕಿದೆ|
ಗಂಗಾವತಿ(ಮೇ.10): ಕಳೆದ ಎರಡು ತಿಂಗಳಿನಿಂದ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್‌ಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ ಈಗ ಗರ್ಭಕೋಶ ಚಿಕಿತ್ಸೆಗೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾಳೆ.
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ವೆಂಕಟಲಕ್ಷ್ಮೀ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇವರ ಜತೆ ಅಂಧ ಪುತ್ರ ತಿಪ್ಪಯ್ಯನಾಯ್ಡು ಇದ್ದು ಕುಟುಂಬದ ನಿರ್ವಹಣೆಗೆ ಸಂಕಷ್ಟ ಪಡುವಂತಾಗಿದೆ. ವೆಂಕಟಲಕ್ಷ್ಮೀಯ ಪತಿ ವಿಜಯಕುಮಾರ ಆಂಧ್ರಪ್ರದೇಶದ ಕಲ್ಲೋಳಿಯಲ್ಲಿ ಚಾಲಕನಾಗಿದ್ದು, ಲಾಕ್‌ಡೌನ್‌ನಿಂದ ಮನೆಗೆ ಬಾರದೆ ಎರಡು ತಿಂಗಳಾಗಿದೆ. ವೆಂಕಟಲಕ್ಷ್ಮೀ ತಾಯಿ ಅನುಸೂಯಮ್ಮ ದೋಸೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಳು. ಈಗ ಲಾಕ್‌ಡೌನ್ ಆಗಿದ್ದರಿಂದ ದೋಸೆ ಮಾರಾಟ ಸ್ಥಗಿತಗೊಂಡಿದೆ.
ನೇಕಾರರಿಗೆ ಸಿಎಂ BSY ವಿಶೇಷ ಪ್ಯಾಕೇಜ್ ಘೋಷಣೆ: ಕೆಲವರಿಗೆ ಮಾತ್ರ ಸೀಮಿತ..!
ಗರ್ಭಕೋಶ ಚಿಕಿತ್ಸೆಗೆ ತೊಂದರೆ:
ಲಾಕ್‌ಡೌನ್ ಪೂರ್ವದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ವೆಂಕಟಲಕ್ಷ್ಮೀ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಳು. ಆಗ ಮಹಿಳೆಗೆ ಗರ್ಭಕೋಶ ಆಪರೇಷನ್ ಮಾಡಬೇಕೆಂದು ವೈದ್ಯರು ದಿನಾಂಕ ನಿರ್ಧರಿಸಿದ್ದರು. ಅದೇ ಸಂದರ್ಭದಲ್ಲಿ ಲಾಕ್‌ಡೌನ್ ಆಗಿದ್ದ ಪರಿಣಾಮ ಮಹಿಳೆ ಮನೆಗೆ ಹಿಂತಿರುಗಿದ್ದಳು. ಅಲ್ಲದೇ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಹಿಳೆ ಈಗ ಆನಾರೋಗ್ಯಕ್ಕೆ ಒಳಗಾಗಿದ್ದಾಳೆ. ಒಂದಡೆ ಲಾಕ್‌ಡೌನ್, ಇನ್ನೊಂದಡೆ ಅಂಧ ಪುತ್ರನ ಜೊತೆಗೆ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ, ಸಂಘ-ಸಂಸ್ಥೆಯವರಾಗಲಿ ಈ ಕುಟುಂಬಕ್ಕೆ ಸಹಾಯಹಸ್ತ ಚಾಚಬೇಕಿದೆ.