ದೋಟಿಹಾಳ(ಮೇ.10):ರಾಜ್ಯ ಸರಕಾರ ನೇಕಾ​ರ​ರಿಗೆ ಘೋಷಿ​ಸಿದ ವಿಶೇಷ ಪ್ಯಾಕೇ​ಜ್‌ನಿಂದ ದೋಟಿ​ಹಾಳ ಗ್ರಾಮದ ಸುಮಾರು 300ಕ್ಕೂ ಅಧಿ​ಕ ಜನ ವಂಚಿತರಾಗಿದ್ದಾರೆ. ಕೈಮಗ್ಗ ನೇಕಾರಿಕೆಗೆ ಕೊಪ್ಪಳ ಜಿಲ್ಲೆಯಲ್ಲಿ ಹೆಸರಾಗಿರುವ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸುಮಾರು 450ಕ್ಕೂ ಹೆಚ್ಚು ಕೈ ಮಗ್ಗ ನೇಕಾರರಿದ್ದಾರೆ. ಲಾಕ್‌ಡೌನ್‌ ಎಫೆಕ್ಟ್‌ನಿಂದ ಅತಂತ್ರಗೊಂಡ ನೇಕಾರರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್‌ ನೀಡಿದೆ. ಆದರೆ, ಈ ಸೌಲಭ್ಯ ಕೆಲವರಿಗೆ ಮಾತ್ರ ದೊರೆತಿದೆ.

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಕೈಮಗ್ಗ ನೇಕಾರ ಸಂಘದ ಸುಮಾರು 457 ಸದಸ್ಯರಲ್ಲಿ ಕೇವಲ 150 ಜನ ಸದಸ್ಯರಿಗೆ ಮಾತ್ರ ಇದರ ಸೌಲಭ್ಯ ದೊರಕಿದೆ. ಉಳಿದ 300ಕ್ಕೂ ಹೆಚ್ಚು ನೇಕಾರರ ಕುಟುಂಬಗಳು ಈ ವಿಶೇಷ ಪ್ಯಾಕೇಜ್‌ನಿಂದ ವಂಚಿತಗೊಂಡಿದ್ದಾರೆ.

ಹುಲಿಗೆಮ್ಮ ದೇವಿಗೂ ಕೊರೋನಾ ಕಾಟ: ರಥೋತ್ಸವ ರದ್ದು

ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ರಾಜ್ಯದಲ್ಲಿ 2 ಲಕ್ಷ ಕೈಮಗ್ಗ ನೇಕಾರರು ಮತ್ತು 4 ಲಕ್ಷ ವಿದ್ಯುತ್‌ ಮಗ್ಗಗಳ ಬಡ ನೇಕಾರರಿದ್ದಾರೆ. ಇದರಲ್ಲಿ ಕೇವಲ ಶೇ. 10 ನೇಕಾರರಿಗೆ ಮಾತ್ರ ರಾಜ್ಯ ಸರ್ಕಾ​ರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಉಳಿದ ನೇಕಾರರ ಸ್ಥಿತಿ ಅತಂತ್ರವಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಗಮನಕ್ಕೂ ತರಲಾಗಿದೆ. ಸರ್ವ ಪಕ್ಷ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಲಾಗಿದೆ. ಉಳಿದವರಿ​ಗೆ ಹಾಗೂ ವಿದ್ಯುತ್‌ ಮಗ್ಗಗಳ ನೇಕಾರರಿಗೂ ಈ ಸೌಲಭ್ಯ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.

ಜಿಲ್ಲಾ ಜವಳಿ ಇಲಾಖೆಯ ಅಧಿಕಾರಿ ಬೆಣಕಲ್‌ ಮಾತನಾಡಿ, 2017ನೇ ಸಾಲಿನಲ್ಲಿ ಖಾಸಗಿ ಎನ್‌ಜಿಒ ಮಾಡಿದ ಸಮೀಕ್ಷೆಯ ಪ್ರಕಾರ ರಾಜ್ಯ ಸರಕಾರ ನೇಕಾರರ ಪಟ್ಟಿ ನೀಡಿದೆ. ಇದರಲ್ಲಿ ಇರುವ ನೇಕಾರಿಗೆ ಮಾತ್ರ ಇದರ ಸೌಲಭ್ಯ ಸಿಗುತ್ತದೆ ಎಂದ​ರು.

ಲಾಕ್‌ಡೌನ್‌ ಎಫೆಕ್ಟ್: ಸಂಕಷ್ಟದಲ್ಲಿರುವವರಿಗೆ ಸಿಎಂ ಸ್ಪಂದನೆ, ವಿಶೇಷ ಪ್ಯಾಕೇಜ್‌ ಘೋಷಣೆ

ಗ್ರಾಮದ ಕೈಮಗ್ಗ ನೇಕಾರ ಸಂಘದ ಅಧ್ಯಕ್ಷ ಹನಮಂತಗೌಡ ಬಾದಾ ಮಾತನಾಡಿ, ನಮ್ಮ ಸಂಘದಲ್ಲಿ 457 ಸದಸ್ಯರಿದ್ದಾರೆ. ಇದರಲ್ಲಿ ಕೆಲವರಿಗೆ ಮಾತ್ರ ಇದರ ಸೌಲಭ್ಯ ಸಿಕ್ಕಿದೆ. ಬಹುತೇಕ ನೇಕಾರರು ಇದರಿಂದ ವಂಚಿತರಾಗಿದ್ದಾರೆ. ಇದರ ಬಗ್ಗೆ ಜಿಲ್ಲಾ ಜವಳಿ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿ​ಸಿ​ದ​ರು.

ಶ್ರೀನಿವಾಸ ಕಂಟ್ಲಿ ಸಾಮಾಜಿಕ ಹೋರಾಟಗಾರ ಮಾತನಾಡಿ ಜವಳಿ ಇಲಾಖೆಯವರು ಗ್ರಾಮದಲ್ಲಿ ಮೂಲ ನೇಕಾರರನ್ನು ಗುರುತಿಸಲು ಮತ್ತೊಮ್ಮೆ ಸರ್ವೇ ಮಾಡಿ ಸಮೀಕ್ಷೆಯ ಮೂಲಕ ಕುಟುಂಬಕ್ಕೆ ಒಬ್ಬರಂತೆ ಆಯ್ಕೆ ಮಾಡುವುದು ಸೂಕ್ತವಾಗುತ್ತದೆ. ಅಂದಾಗ ಮಾತ್ರ ಎಲ್ಲ ನೇಕಾರರಿಗೂ ಸೌಲಭ್ಯ ದೊರಕುತ್ತದೆ ಎಂದು ಆಗ್ರ​ಹಿ​ಸಿ​ದ್ದಾ​ರೆ.