ಶಿರಸಿ: ಅಂಗನವಾಡಿ ಮಕ್ಕಳಿಗೆ ಬಾವಿ ತೋಡುತ್ತಿರುವ ಮಹಿಳೆ
ಅಂಗನವಾಡಿಯಲ್ಲಿನ ಶಿಕ್ಷಕರು ಅಡುಗೆ ಮಾಡಲು ಮತ್ತು ಮಕ್ಕಳು ಕುಡಿಯಲು ಬಳಸುವ ನೀರನ್ನು ತರಲು ಸುಮಾರು ಅರ್ಧ ಕಿಲೋಮೀಟರ್ ದೂರ ಹೋಗಬೇಕಾಗಿದೆ. ಇದರಿಂದ ಬೇಸರಗೊಂಡ ಅಂಗನವಾಡಿ ಕಾರ್ಯಕರ್ತೆ ಗೌರಿ, ಕಳೆದೊಂದು ವಾರದಿಂದ ಏಕಾಂಗಿಯಾಗಿ ತಾವೇ ಶಾಲೆಯ ಆವರಣದಲ್ಲಿ ಬಾವಿ ತೋಡುತ್ತಿದ್ದಾರೆ.
ಶಿರಸಿ(ಫೆ.13): ಇಲ್ಲಿನ ಗಣೇಶನಗರದ ಅಂಗನವಾಡಿಯಲ್ಲಿ ಸ್ವ-ಇಚ್ಛೆಯಿಂದ, ಏಕಾಂಗಿಯಾಗಿ ಬಾವಿ ತೋಡುತ್ತಿರುವ ಅಂಗನವಾಡಿ ಕಾರ್ಯಕರ್ತೆ ಗೌರಿ ನಾಯ್ಕ್ (55) ಗೆ ಕೆಲಸ ಸ್ಥಗಿತಗೊಳಿಸುವಂತೆ ತಾವು ನೀಡಿದ್ದ ಸೂಚನೆಗೆ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತುಕೊಂಡ ಅಧಿಕಾರಿಗಳು ಬಾವಿ ತೋಡುವುದನ್ನು ಮುಂದುವರಿಸಲು ಮೌಖಿಕ ಅನುಮತಿ ನೀಡಿದ್ದಾರೆ.
ಅಂಗನವಾಡಿಯಲ್ಲಿನ ಶಿಕ್ಷಕರು ಅಡುಗೆ ಮಾಡಲು ಮತ್ತು ಮಕ್ಕಳು ಕುಡಿಯಲು ಬಳಸುವ ನೀರನ್ನು ತರಲು ಸುಮಾರು ಅರ್ಧ ಕಿಲೋಮೀಟರ್ ದೂರ ಹೋಗಬೇಕಾಗಿದೆ. ಇದರಿಂದ ಬೇಸರಗೊಂಡ ಅಂಗನವಾಡಿ ಕಾರ್ಯಕರ್ತೆ ಗೌರಿ, ಕಳೆದೊಂದು ವಾರದಿಂದ ಏಕಾಂಗಿಯಾಗಿ ತಾವೇ ಶಾಲೆಯ ಆವರಣದಲ್ಲಿ ಬಾವಿ ತೋಡುತ್ತಿದ್ದಾರೆ. ಸುಮಾರು 12 ಅಡಿ ಬಾವಿಯನ್ನು ಈಗಾಗಲೇ ತೋಡಿದ್ದರು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಶಾಲೆಗೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಬಾವಿಯನ್ನು ಮುಚ್ಚಲು ತಾಕೀತು ಮಾಡಿದ್ದರು. ಬಾವಿ ಮುಚ್ಚದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಪತ್ರ ಸಹ ಕಳುಹಿಸಿದ್ದರು.
ಸೋಮೇಶ್ವರ ದೇವಾಲಯ ಶಿವಲಿಂಗದ ಮೇಲೆ ವಿಕೃತಿ ಮೆರೆದ ಕಿಡಿಗೇಡಿಗಳು; ಕರಾವಳಿಯಲ್ಲಿ ಕೋಮುಗಲಭೆ ಸಂಶಯ
ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬೆಳಗ್ಗೆ ಸಾರ್ವಜನಿಕರು ಅಂಗನವಾಡಿ ಬಳಿ ಜಮಾಯಿಸಿ, ಯಾವುದೇ ಕಾರಣಕ್ಕೂ ಬಾವಿ ಮುಚ್ಚಲು ಆಸ್ಪದ ನೀಡುವುದಿಲ್ಲ. ನಾವೆಲ್ಲರೂ ಗೌರಿ ಪರವಾಗಿ ನಿಲ್ಲುತ್ತೇವೆ. ಅಧಿಕಾರಿಗಳು ಕಿರುಕುಳ ನಿಲ್ಲಿಸಬೇಕು. ಒಳ್ಳೆಯ ಕೆಲಸ ಮಾಡುತ್ತಿರುವ ಗೌರಿಗೆ ಅಡ್ಡಗಾಲು ಹಾಕುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ, ಬಾವಿಗೆ ರಿಂಗ್ ಆಳವಡಿಕೆ ಹಾಗೂ ಕಟ್ಟೆ ನಿರ್ಮಾಣ, ಅಂಗನವಾಡಿಗೆ ಕಾಂಪೌಂಡ್ ಹಾಗೂ ಪಂಪ್, ನೀರಿನ ಟ್ಯಾಂಕ್ ನಿರ್ಮಾಣ ಮಾಡಿಕೊಡುವುದಾಗಿ ಸ್ಥಳದಲ್ಲೇ ಘೋಷಿಸಿದರು.
ಜನಾಕ್ರೋಶಕ್ಕೆ ಹೆದರಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಹುತ್ಗಾರ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ, ಬಾವಿ ತೋಡುವುದಕ್ಕೆ ಮೌಖಿಕವಾಗಿ ಅನುಮತಿ ನೀಡಿದ್ದಾರೆ.