ಸಿಗ್ನಲ್ ಜಂಪ್ ಪ್ರಶ್ನಿಸಿದ್ದಕ್ಕೆ ASI ಕೊರಳಪಟ್ಟಿಗೇ ಕೈ ಹಾಕಿದ ಮಹಿಳೆ..!
ರಂಪಾಟ ನಡೆಸಿದ ಗೋವಾದ ಮಹಿಳೆ ಸೆರೆಮನೆಗೆ| ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ನಡೆದ ಘಟನೆ| ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸುವಂತೆ ಸೂಚಿಸಿದ್ದ ಎಎಸ್‌ಐ| ಆಕ್ರೋಶಗೊಂಡು ಎಎಸ್‌ಐ ಕೊರಳಪಟ್ಟಿ ಹಿಡಿದು ರಂಪಾಟ ನಡೆಸಿದ ಮಹಿಳೆ|
ಬೆಂಗಳೂರು(ಮಾ.08): ಸಿಗ್ನಲ್ ಜಂಪ್ ಮಾಡಿರುವುದನ್ನು ಪ್ರಶ್ನಿಸಿದ ಉಪ್ಪಾರ್‌ಪೇಟೆ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್(ಎಎಸ್‌ಐ) ಕೊರಳಪಟ್ಟಿ ಹಿಡಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಗೋವಾ ಮೂಲದ ಅಪೂರ್ವಿ ಡೈಯಾಸ್ ಬಂಧಿತೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಬಸವಯ್ಯ ನೀಡಿದ ದೂರಿನ ಆಧಾರದ ಮೇರೆಗೆ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋ ಗೂಗಲ್ ಪೇ, ನೋ ಫೋನ್ ಪೇ ಡೈರೆಕ್ಟ್ ಪಾಕೆಟ್‌ಗೆ: ಲಂಚ ಪಡೆದ ಪೊಲೀಸ್ ಫುಲ್ 'ಫೇಮಸ್'!
ಶನಿವಾರ ಬಸವಯ್ಯ ಮೈಸೂರು ಬ್ಯಾಂಕ್ ವೃತ್ತದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೇಗವಾಗಿ ಬಂದ ಕಾರೊಂದು ಕೆ.ಜಿ.ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಪ್ಯಾಲೆಸ್ ರಸ್ತೆ ಕಡೆ ಬರುತ್ತಿರುವುದನ್ನು ಗಮನಿಸಿದ ಬಸವಯ್ಯ ಕಾರು ತಡೆದು ನಿಲ್ಲಿಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸುವಂತೆ ಎಎಸ್‌ಐ ಸೂಚಿಸಿದ್ದರು.
ಈ ವೇಳೆ ಕಾರಿನಿಂದ ಇಳಿದ ಆರೋಪಿ ಅಪೂರ್ವಿ, ಎಎಸ್‌ಐ ಬಸವಯ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ಹಿಂದಿ ಭಾಷೆಯಲ್ಲಿ ನಿಂದಿಸಿದ್ದಳು. ಜತೆಗೆ ಆಕ್ರೋಶಗೊಂಡ ಎಎಸ್‌ಐ ಕೊರಳಪಟ್ಟಿ ಹಿಡಿದು ರಂಪಾಟ ನಡೆಸಿದ್ದಾಳೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಪೊಲೀಸರ ವಿರುದ್ಧ ಕಿಡಿಕಾರಿದ್ದಳು. ಮಹಿಳೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಎಎಸ್‌ಐ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.