ನವದೆಹಲಿ(ಡಿ.19): ಮಹಿಳಾ ಟ್ರಾಫಿಕ್ ಪೊಲೀಸೊಬ್ಬರು, ಮತ್ತೊಬ್ಬ ಮಹಿಳೆಯಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಈ ಡೈರೆಕ್ಟ್ ಪಾಕೆಟ್‌ಗೆ ವಿಡಿಯೋ ಭಾರೀ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರ ಲಂಚಾವತಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡಿದ್ದರೆ, ಆಕೆಯೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಮಹಿಳೆ ಟ್ರಾಫಿಕ್ ಪೊಲೀಸ್ ಬಳಿ ನಿಂತಿರುವ ದೃಶ್ಯವಿದೆ. ಈ ಮಹಿಳೆ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ನಡುವೆ ಚಿಕ್ಕ ಆದರೆ ಚೊಕ್ಕವಾಗಿ ಸಂಭಾಷಣೆಯೊಂದು ನಡೆಯುತ್ತದೆ. ಇದಾದ ಮರು ಕ್ಷಣವೇ ಆ ಮಹಿಳೆ ನೋಟೊಂದನ್ನು ಟ್ರಾಫಿಕ್ ಪೊಲೀಸ್ ಕಿಸೆಗೆ ತುಂಬಿಸುತ್ತಾಳೆ. ಹೀಗಿರುವಾಗ ಬುದ್ಧಿವಂತ ಟ್ರಾಫಿಕ್ ಪೊಲೀಸ್ ಮಾತ್ರ ಇದ್ಯಾವುದೂ ತನಗೆ ತಿಳಿದೇ ಇಲ್ಲ ಎಂಬಂತೆ ತನ್ನ ಮೊಬೈಲ್ ನೋಡುವುದರಲ್ಲಿ ಬ್ಯೂಸಿಯಾಗುತ್ತಾರೆ. ಈ ಎಲ್ಲಾ ಬೆಳವಣಿಗೆಗಳು ನಡೆದ ಬಳಿಕ ಆ ಮಹಿಳಾ ಟ್ರಾಫಿಕ್ ಪೊಲೀಸ್ ಈ ಮಹಿಳೆಯರಿಗೆ ಅಲ್ಲಿಂದ ತೆರಳಬಹುದೆಂಬ ಸಿಗ್ನಲ್ ನೀಡುತ್ತಾರೆ.

ಇನ್ನು ನಿಯಮ ಪಾಲಿಸದೆ ಪೊಲೀಸರ ಕೈಗೆ ಸಿಕ್ಕಿಬಿದ್ದ ವಾಹನ ಚಲಾಯಿಸುತ್ತಿದ್ದ ಮಹಿಳೆಯರು ಮಾಸ್ಕ್ ಧರಿಸಿದ್ದರೆ, ಅತ್ತ ಟ್ರಾಫಿಕ್ ಪೊಇಲೀಸ್ ಮುಖಕ್ಕೆ ಚಿಕ್ಕ ಬಟ್ಟೆ ಕಟ್ಟಿಕೊಂಡಿದ್ದಾರೆ. ಹಿಂಬದಿಯಲ್ಲಿ ಟ್ರಾಫಿಕಗ್ ಜಾಮ್ ಆಗಿ ವಾಹನ ಚಾಲಕರು ಹಾರ್ನ್ ಹಾಕುವ ಸದ್ದು ಕೂಡಾ ಕೇಳಿಸುತ್ತಿದೆ.

ಗೂಗಲ್ ಪೇನೂ ಇಲ್ಲ, ಫೋನ್ ಪೇನೂ ಇಲ್ಲ ಡೈರೆಕ್ಟ್ ಪಾಕೆಟ್‌ಗೆ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಸದ್ಯ ವಾಟ್ಸಾಪ್, ಟ್ವಿಟರ್, ಫೇಸ್‌ಬುಕ್ ಹೀಗೆ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ವಿಡಿಯೋಗೆ ಭರ್ಜರಿ ಕಮೆಂಟ್‌ಗಳೂ ಬಂದಿದ್ದು, ನಮ್ಮ ದೇಶ ಕಾಪಾಡುವವರು ಯಾರು? ಎಂದು ಪ್ರಶ್ನಿಸಿದರೆ ಮತ್ತೊಬ್ಬರು ಮೇರಾ ಭಾರತ್ ಮಹಾನ್ ಎಂದು ಬರೆದಿದ್ದಾರೆ.