ವಸಂತಕುಮಾರ್‌ ಕತಗಾಲ, ಕನ್ನಡಪ್ರಭ ವಾರ್ತೆ

ಕಾರವಾರ[ಜೂ.10]: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ತಲೆ ಎತ್ತಿರುವ ದೇಶದ ಪ್ರಥಮ ‘ಕೆನೋಪಿ ವಾಕ್‌’ ಲೋಕಾರ್ಪಣೆಗೊಂಡು ತಿಂಗಳುಗಳೇ ಕಳೆದರೂ ಅದರ ಮೇಲೆ ಹೆಜ್ಜೆ ಹಾಕುವ ಯೋಗ ಮಾತ್ರ ಜನರಿಗೆ ಇನ್ನೂ ಕೂಡಿ ಬಂದಿಲ್ಲ!

ಹೌದು. ಕೆನೋಪಿ ವಾಕ್‌ ತನಕ ರಸ್ತೆ ನಿರ್ಮಾಣಕ್ಕೆ ಪರವಾನಗಿ ಪಡೆಯದ ಕಾರಣ ಲಕ್ಷಾಂತರ ರು. ವೆಚ್ಚ ಮಾಡಿ ನಿರ್ಮಿಸಿದ್ದ ಯೋಜನೆ ನೆನೆಗುದಿಗೆ ಬಿದ್ದಿದೆ.

ಕ್ಯಾಸೆಲ್‌ರಾಕ್‌ ಬಳಿಯ ಕುಣಗಿನಿ ಎಂಬಲ್ಲಿಂದ ಕುವೇಶಿ ತನಕ ಲೋಕೋಪಯೋಗಿ ಇಲಾಖೆ ರಸ್ತೆ ಇದೆ. ಈ ರಸ್ತೆ ಅಗಲೀಕರಣಕ್ಕೆ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ಬೇಕು. ಆದರೆ ಲೋಕೋಪಯೋಗಿ ಇಲಾಖೆ ಇನ್ನೂ ಅನುಮತಿ ಪಡೆಯದೆ, ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ನೀಡಿತ್ತು. ಅರಣ್ಯದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ, ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿ ಸಿದ್ಧತೆ ಆರಂಭವಾದಾಗ ಅರಣ್ಯ ಇಲಾಖೆಯು ಗುತ್ತಿಗೆದಾರರಿಗೆ ನೋಟಿಸ್‌ ನೀಡಿತ್ತು. ಹೀಗಾಗಿ ಕಾಮಗಾರಿ ಆರಂಭವಾಗಲೇ ಇಲ್ಲ. ನಿಯಮಾನುಸಾರ ಪರವಾನಗಿ ಪಡೆಯುವಂತೆ ಸೂಚಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಪರವಾನಗಿ ಪಡೆಯಲು ಮುಂದಾಗಿಲ್ಲ. ಪರಿಣಾಮ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಗದೆ ‘ಕೆನೋಪಿ ವಾಕ್‌’ ಆರಂಭವಾಗಲೇ ಇಲ್ಲ ಎನ್ನುವುದು ಹುಲಿ ರಕ್ಷಿತ ಪ್ರದೇಶದ ಅಧಿಕಾರಿಗಳ ಅಭಿಪ್ರಾಯ.

ಕೆನೋಪಿ ವಾಕ್‌ ನಿರ್ವಹಣೆ ಜವಾಬ್ದಾರಿಯನ್ನು ಜಂಗಲ್‌ ಲಾಡ್ಜಸ್‌ಗೆ ವಹಿಸಲಾಗಿತ್ತು. ಕುವೇಶಿಯಿಂದ ಕೆನೋಪಿ ವಾಕ್‌ ತನಕ ಸ್ಥಳೀಯರ ಸಹಭಾಗಿತ್ವ ಇರುವ ಇಕೋ ಡೆವಲಪ್‌ಮೆಂಟ್‌ ಕಮಿಟಿ (ಇಡಿಸಿ) ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಪ್ರವಾಸಿಗರಿಂದ ಶುಲ್ಕ ಆಕರಿಸಲು ತೀರ್ಮಾನಿಸಲಾಗಿತ್ತು.

ಮಲೇಷ್ಯಾದಲ್ಲಿ ಕೆನೋಪಿ ವಾಕ್‌ ಜನಪ್ರಿಯಗೊಂಡಿದೆ. ಬೇರೆ ಬೇರೆ ದೇಶಗಳ ಜನತೆ ಮರಗಳ ಮೇಲೆ ನಡಿಗೆಗಾಗಿ ಮಲೇಷ್ಯಾದತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯಿಂದ .84 ಲಕ್ಷ ಅನುದಾನ ಪಡೆದು, ದಾಂಡೇಲಿ ಸಮೀಪದ ಕ್ಯಾಸೆಲ್‌ರಾಕ್‌ ವನ್ಯಜೀವಿ ವಲಯದ ಕುವೇಶಿ ಎಂಬಲ್ಲಿ 30-40 ಅಡಿ ಎತ್ತರದಲ್ಲಿ 250 ಮೀ. ಉದ್ದದ ತೂಗು ಸೇತುವೆ (ಕೆನೋಪಿ ವಾಕ್‌) ನಿರ್ಮಿಸಲಾಗಿದೆ. ಇದೇ ಫೆ.8ರಂದು ಕೆನೋಪಿ ವಾಕ್‌ ಅನ್ನು ಲೋಕಾರ್ಪಣೆ ಸಹ ಗೊಳಿಸಿ, ಮೇ 2ರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ, ಇದೀಗ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ಅತ್ಯುತ್ತಮ ಯೋಜನೆಯೊಂದು ಹಳ್ಳ ಹಿಡಿದಿದೆ.

ಏನಿದು ಕೆನೋಪಿ ವಾಕ್‌?

ಗಟ್ಟುಮುಟ್ಟಾಗಿರುವ ಒಂದೇ ರೀತಿಯ ಎತ್ತರದ ಮರಗಳನ್ನು ಗುರುತಿಸಿ 30-40 ಅಡಿ ಎತ್ತರದಲ್ಲಿ ಅಲ್ಯುಮೀನಿಯಂ ಚೌಕಟ್ಟು ಮಾಡಲಾಗುತ್ತದೆ. ಆನಂತರ ಮರದಿಂದ ಮರಕ್ಕೆ ತೂಗು ಸೇತುವೆ ಮಾದರಿಯಲ್ಲಿ ನಡೆಯುವ ದಾರಿ ನಿರ್ಮಿಸಲಾಗುತ್ತದೆ. ಹೀಗೆ ಅರಣ್ಯದಲ್ಲಿ ಇಷ್ಟೊಂದು ಎತ್ತರದ ಮೇಲೆ ನಡೆಯುವುದೆ ಒಂದು ವಿಶಿಷ್ಟಅನುಭವ. ಕಣ್ಣಳತೆಯುದ್ದಕ್ಕೂ ದಟ್ಟಅರಣ್ಯ, ಪಕ್ಷಿಗಳ ಕಲರವ, ಪ್ರಾಣಿಗಳನ್ನು ವೀಕ್ಷಿಸಬಹುದು. ದಟ್ಟವಾದ ಅರಣ್ಯದಲ್ಲಿ ತಂಗಾಳಿಯ ನಡುವೆ ಎತ್ತರದಲ್ಲಿ ಹೆಜ್ಜೆ ಹಾಕಬಹುದಾಗಿದೆ.