ಶಿವಮೊಗ್ಗದಲ್ಲಿ ಮತ್ತೆ 6 ಜನರಿಗೆ ಕೊರೋನಾ; ಒಂದೇ ಕುಟುಂಬದ ಐವರಿಗೆ ಸೋಂಕು..!
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಗುರುವಾರ ಮತ್ತೆ 6 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಶಿವಮೊಗ್ಗ(ಮೇ.22): ಶಿವಮೊಗ್ಗ ಜಿಲ್ಲೆಗೆ ಕೊರೋನಾ ಕಂಟಕ ಮುಂದುವರಿದಿದ್ದು, ಗುರುವಾರ ಮತ್ತೆ ಇಬ್ಬರು ಪುಟ್ಟ ಮಕ್ಕಳೂ ಸೇರಿದಂತೆ ಆರು ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 30ಕ್ಕೆ ಏರಿದಂತಾಗಿದೆ. ಶಿವಮೊಗ್ಗದಲ್ಲಿ ಹೋಂ ಕ್ವಾರಂಟೈನ್ ಆಗಿದ್ದ ಒಂದೇ ಕುಟುಂಬದ ಐದು ಮಂದಿಗೆ ಸೋಂಕು ತಗುಲಿದ್ದರೆ, ಸೊರಬದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಶಿವಮೊಗ್ಗದಲ್ಲಿ ಪತ್ತೆಯಾದ ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇದೆ. ಇವೆರೆಲ್ಲರೂ ತಮಿಳುನಾಡಿನಿಂದ ಬಂದಿದ್ದು, ಇವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇವರನ್ನು 21 ವರ್ಷದ ಮಹಿಳೆ ಪಿ-1499, 3 ವರ್ಷದ ಹೆಣ್ಣು ಮಗು ಪಿ-1500, 3 ವರ್ಷದ ಗಂಡು ಮಗು ಪಿ-1501, 56 ವರ್ಷದ ಪುರುಷ ಪಿ-1502, 52 ವರ್ಷದ ಪುರುಷ ಪಿ-1503 ಎಂದು ಸದ್ಯ ಆರೋಗ್ಯ ಇಲಾಖೆ ಹೆಸರಿಸಿದ್ದು, ಸೊರಬದ 60 ವರ್ಷದ ವೃದ್ಧೆಯನ್ನು ಪಿ-1498 ಎಂದು ಗುರುತಿಸಲಾಗಿದೆ.
ಸೊರಬದ ವೃದ್ಧೆಗೆ ಉಸಿರಾಟದ ತೊಂದರೆ ಕಾಣಿಸಿದ್ದು, ವೈದ್ಯರ ಬಳಿ ಬಂದಾಗ ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿ ಪಾಸಿಟಿವ್ ಬಂದಿದೆ. ಆದರೆ ಇವರ ಟ್ರಾವೆಲ್ ಹಿಸ್ಟರಿ ಪತ್ತೆಯಾಗಬೇಕಿದೆ. ಈ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇವರ ಕುಟುಂಬ ಸದಸ್ಯರನ್ನು ಇದೀಗ ಕ್ವಾರಂಟೈನ್ ಮಾಡಲಾಗಿದ್ದು, ಇವರನ್ನು ಕೂಡ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಂಟೈನ್ಮೆಂಟ್:
ಗುರುವಾರ ಪಾಸಿಟಿವ್ ಪ್ರಕರಣ ಬಂದ ಶಿವಮೊಗ್ಗದ ತುಂಗಾ ನಗರದ ಕೆಲ ಪ್ರದೇಶ ಮತ್ತು ಸೊರಬದ ಹಳೆ ಸೊರಬ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವೊಂದು ಘೋಷಿಸಿ ಅಲ್ಲಿ ಸಂಚಾರವನ್ನು ನಿಯಂತ್ರಿಸಲಾಗಿದೆ. ಆ ಪ್ರದೇಶಕ್ಕೆ ಯಾರೂ ಹೋಗದಂತೆ ಮತ್ತು ಅಲ್ಲಿಂದ ಯಾರೂ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.
ಶ್ರಮಿಕ್ ಎಕ್ಸ್‌ಪ್ರೆಸ್ ರೈಲಲ್ಲಿ 20 ದಿನಗಳಲ್ಲಿ 21 ಶಿಶುಗಳ ಜನನ!
ತುಂಗಾ ನಗರ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಅವರ ಜೊತೆ ಭೇಟಿ ನೀಡಿ ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚೆ ನಡೆಸಿದರಲ್ಲದೆ, ಸೂಕ್ತ ಮಾರ್ಗದರ್ಶನ ನೀಡಿದರು.
ಕಂಟೈನ್ಮೆಂಟ್ ಸಂಖ್ಯೆಯಲ್ಲಿ ಹೆಚ್ಚಳ
ಶಿವಮೊಗ್ಗ : ಜಿಲ್ಲೆಯಲ್ಲಿ ಗುರುವಾರ 6 ಮಂದಿಗೆ ಕೊರೋನಾ ಸೋಂಕು ದೃಢಪಡುವುದರೊಂದಿಗೆ ಹೊಸದಾಗಿ ಎರಡು ಕಂಟೈನ್ಮೆಂಟ್ ಜೋನ್ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ಪ್ರಕರಣಕ್ಕೆ ಸಂಬಂಧಿಸಿ ಎರಡು ಕಂಟೈನ್ಮೆಂಟ್ ಜೋನ್ ಹೆಚ್ಚಳ ಮಾಡಲಾಗಿದೆ. ಬಫರ್ ಜೋನ್ ಗುರುತಿಸುವ ಕೆಲಸ ಕೂಡ ಮಾಡಲಾಗಿದೆ. ಶಿವಮೊಗ್ಗ ನಗರ ಹಾಗೂ ಸೊರಬ ತಾಲೂಕಿನಲ್ಲಿ ಒಂದೊಂದು ಕಂಟೈನ್ಮೆಂಟ್ ಜೋನ್ ಗುರುತಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 5 ಕಂಟೈನ್ಮೆಂಟ್ ಜೋನ್‌ಗಳಿವೆ. ಕಂಟೈನ್ಮೆಂಟ್ ಜೋನ್ 100 ಮೀ. ವ್ಯಾಪ್ತಿ ಹಾಗೂ ಬಫರ್ ಜೋನ್ 7 ಕಿ.ಮೀ. ವ್ಯಾಪ್ತಿ ಹೊಂದಿರುತ್ತದೆ ಎಂದರು.
ಕಂಟೈನ್ಮೆಂಟ್ ಜೋನ್‌ಗಳಲ್ಲಿ ತೀವ್ರ ನಿಗಾ ಇಡಲಾಗುತ್ತದೆ. ಪ್ರತಿ ದಿನ ಮನೆ ಮನೆಗೆ ಭೇಟಿ ಮಾಡಿ ಜನರ ಆರೋಗ್ಯ ವಿಚಾರಿಸಲಾಗುತ್ತದೆ. ಕೊರೋನಾ ಲಕ್ಷಣ ಕಂಡುಬಂದಲ್ಲಿ ತಕ್ಷಣ ಅವರನ್ನು ಕರೆದು ಸ್ವಾಬ್ ಟೆಸ್ಟ್ ಮಾಡಲಾಗುತ್ತದೆ. ಜನರ ಓಡಾಟಕ್ಕೆ ನಿಯಂತ್ರಣ ಹಾಕಲಾಗುತ್ತದೆ. ಬಫರ್ ಜೋನ್ ಗಳಲ್ಲಿ ಕೂಡ ನಿಗಾ ವಹಿಸುತ್ತಿರುತ್ತೇವೆ. ಸ್ಯಾಂಪಲ್ ಟೆಸ್ಟ್ ಕೂಡ ನಡೆಸುತ್ತೇವೆ ಎಂದು ತಿಳಿಸಿದರು.
ಆರು ಜನ ಕೊರೋನಾ ಪಾಸಿಟಿವ್ ಕಂಡು ಬಂದಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 4 ಮಂದಿಯನ್ನು ಗುರುತಿಸಲಾಗಿದ್ದು. ಎಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ. ಉಳಿದ ಸಂಪರ್ಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.