ಶಿವಮೊಗ್ಗದಲ್ಲಿ 8 ಹೊಸ ಕೋವಿಡ್ 19 ಪ್ರಕರಣ ಪತ್ತೆ
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದ ವ್ಯಕ್ತಿ ಸೇರಿ ಒಟ್ಟು ಎಂಟು ಮಂದಿಗೆ ಭಾನುವಾರ(ಜು.05) ಶಿವಮೊಗ್ಗದಲ್ಲಿ ಕೊರೋನಾ ಸೋಂಕು ವಕ್ಕರಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.06): ಜಿಲ್ಲೆಯಲ್ಲಿ ಭಾನುವಾರ 8 ಕೊರೋನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 261ಕ್ಕೇರಿದೆ.
ಎಂಟು ಮಂದಿ ಸೋಂಕಿತರಲ್ಲಿ ನಾಲ್ವರಿಗೆ ಜ್ವರ, ಶೀತ, ಕೆಮ್ಮಿನ ಲಕ್ಷಣ ಕಂಡು ಬಂದಿದ್ದು, ತಪಾಸಣೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಿಂದಾಗಿ ಇಬ್ಬರಿಗೆ ಕೊರೋನ ತಗುಲಿದೆ. ಬೆಂಗಳೂರಿನಿಂದ ಹಿಂತಿರುಗಿದ ಓರ್ವರಲ್ಲಿ ಸೋಂಕು ಕಂಡುಬಂದಿದೆ. ಒಬ್ಬರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಸೋಂಕು ತಗುಲಿದೆ.
ಪಿ-21627 (29 ವರ್ಷದ ಯುವತಿ), ಪಿ-21628 (63 ವರ್ಷದ ಮಹಿಳೆ), ಪಿ-21629 (27 ವರ್ಷದ ಯುವಕ), ಪಿ- 21630 (25 ವರ್ಷದ ಯುವಕ), ಪಿ- 21631 ( 40 ವರ್ಷದ ಯುವಕ), ಪಿ-21632 (40 ವರ್ಷದ ಯುವತಿ), ಪಿ- 21633 ( 33 ವರ್ಷದ ಯುವಕ), ಪಿ- 21634 ( 33 ವರ್ಷದ ಯುವಕ) ಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಶಿವಮೊಗ್ಗದ ಅಶೋಕ್ ನಗರ, ಗಾಂಧಿನಗರ, ಚನ್ನಪ್ಪ ಲೇ ಔಟ್, ಪೆನ್ಷನ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲ, ಕುಂಬಾರ ಕೇರಿ, ರವಿವರ್ಮ ಬೀದಿ ಹೀಗೆ ರಸ್ತೆಗಳೆಲ್ಲ ಸೀಲ್ ಡೌನ್ ಆಗುತ್ತಿರುವ ಬೆನ್ನಲ್ಲೇ ಮತ್ತೆರೆಡು ನಗರದ ಪ್ರಮುಖ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಗಾಂಧಿಬಜಾರ್ ನ ಉಪ್ಪಾರ ಕೇರಿಯ 2 ನೇ ಕ್ರಾಸ್ ನಲ್ಲಿ ವ್ಯಕ್ತಿಯೋರ್ವರಲ್ಲಿ ಕೊರೋನ ವೈರಸ್ ಪತ್ತೆಯಾದ ಹಿನ್ನಲೆ ಅವರ ಮನೆಯ 100 ಮೀಟರ್ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ. ಈ ವ್ಯಕ್ತಿಗೆ ಸೋಂಕು ತಗುಲಿರುವುದು ಹೇಗೆ ಎಂಬುದು ತಿಳಿದುಬಂದಿಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದ ಈ ವ್ಯಕ್ತಿ ಮಾಮೂಲಿ ಜ್ವರದಿಂದ ಬಳಲುತ್ತಿರುವುದು ತಿಳಿದುಬಂದಿದೆ.
ಸೋಂಕಿತರ ಅಡ್ಮಿಟ್ ಮಾಡಿಕೊಳ್ಳದಿದ್ರೆ ಕ್ರಿಮಿನಲ್ ಕೇಸ್!
ಇನ್ನು ಟಿಪ್ಪು ನಗರದ 5 ನೇ ಕ್ರಾಸ್ ಮೊದಲನೇ ತಿರುವಿನಲ್ಲಿನ ವ್ಯಕ್ತಿಗೆ ಕೊರೋನ ಪಾಸಿಟಿವ್ ಕಂಡುಬಂದಿದೆ. ಇವರು ಬೆಂಗಳೂರಿನಿಂದ ಬಂದಿದ್ದು, ಬೆಂಗಳೂರಿನ ನಂಟಿನ ಮೂಲಕ ಇವರಿಗೆ ಪಾಸಿಟಿವ್ ಕಂಡುಬಂದಿದೆ. ಹೊಸಮನೆ ಹಾಗೂ ಸೂಳೆಬೈಲು ಬಡಾವಣೆಯ ನಿವಾಸಿಗಳಿಬ್ಬರಲ್ಲಿ ಕೊರೋನ ದೃಢಪಟ್ಟಿದೆ.
ಶಿವಮೊಗ್ಗದಲ್ಲಿ ನಾಲ್ಕು, ಶಿಕಾರಿಪುರ, ಸಾಗರ, ಸೊರಬ, ಭದ್ರಾವತಿಯಲ್ಲಿ ತಲಾ ಒಂದೊಂದು ಪಾಸಿಟಿವ್ ಕಂಡುಬಂದಿದೆ. ಸೋಂಕಿತರು ವಾಸಿಸುತ್ತಿದ್ದ ಸ್ಥಳದ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಭಾನುವಾರ ಪತ್ತೆಯಾದ 8 ಪ್ರಕರಣ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 261 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ 117 ಮಂದಿ ಗುಣಮುಖರಾಗಿದ್ದಾರೆ. 140 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 4 ಮಂದಿ ಮೃತ ಪಟ್ಟಿದ್ದಾರೆ.