2024ರ ಹಾಸನಾಂಬೆ ದರ್ಶನದ ವೇಳೆ ಪಾಸ್ ವ್ಯವಸ್ಥೆಯಿಂದ ಉಂಟಾದ ಅನಾನುಕೂಲತೆಗಳ ಹಿನ್ನೆಲೆಯಲ್ಲಿ, ಈ ವರ್ಷ ದರ್ಶನ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ಹಾಸನದಲ್ಲಿ ಸಭೆ ನಡೆಯಿತು.
ಹಾಸನ: 2024ರ ಹಾಸನಾಂಬೆ ತಾಯಿ ದರ್ಶನ ವೇಳೆ ಸಾಕಷ್ಟು ಅನಾನುಕೂಲತೆ ಉಂಟಾಗಿತ್ತು. ಅವೈಜ್ಞಾನಿಕವಾಗಿ ಪಾಸ್ ವಿತರಣೆ ಮಾಡಲಾಗಿದೆ ಎಂದು ಹಾಸನಾಂಬೆಯ ಭಕ್ತರು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆ ಈ ವರ್ಷ ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ತಡೆಯಲು ಇಂದು ಹಾಸನ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಯ್ತು. ಈ ಬಾರಿ ಉತ್ಸವದ ವೇಳೆ ದರ್ಶನ ಪಾಸ್ ವ್ಯವಸ್ಥೆ ಸಂಪೂರ್ಣ ರದ್ದು ಮಾಡಬೇಕೆಂದು ಹಾಸನಾಂಬೆ ದೇವಾಲಯ ಆಡಳಿತ ಅಧಿಕಾರಿ ಮಾರುತಿ ಹೇಳಿಕೆ ನೀಡಿದ್ದಾರೆ. ಎಲ್ಲಾ ರೀತಿಯ ಪಾಸ್ ರದ್ದು ಮಾಡಬೇಕೆಂದು ಹೇಳಿದ್ದಾರೆ.
ಗೋಲ್ಡ್ ಪಾಸ್ ವಿತರಣೆ, ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ದರ್ಶನ
ಉಚಿತ ಪಾಸ್ ಪಡೆದು ದರ್ಶನಕ್ಕೆ ಬರುತ್ತಿದ್ದ ಭಾರೀ ಜನರಿಂದ ಗೊಂದಲ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪಾಸ್ ಬದಲು ಈ ಬಾರಿ ಕೇವಲ ಗೋಲ್ಡ್ ಕಾರ್ಡ್ ಬಳಕೆ ಮಾಡಬೇಕು. ಒಂದು ಪಾಸ್ ಗೆ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಗೋಲ್ಡ್ ಕಾರ್ಡ್ ಪಡೆದರೆ ಬೆಳಗ್ಗೆ 5 ರಿಂದ 11 ಗಂಟೆವರೆಗೆ ದರ್ಶನ ಪಡೆಯಬೇಕು. ಸಿಎಂ, ಡಿಸಿಎಂ ಹಾಗು ಸಿಜೆ ಹೊರತುಪಡಿಸಿ ಉಳಿದ ಎಲ್ಲಾ ಗಣ್ಯರ ವೈಯಕ್ತಿಕ ಶಿಷ್ಟಾಚಾರದ ಬದಲು ಜಿಲ್ಲಾಡಳಿತ ನಿಯೋಜಿತ ವಾಹನ ಬಳಕೆ ಸಲಹೆ ನೀಡಲಾಗಿದೆ.
ಕೊನೆಯ ಐದು ದಿನ ಎಲ್ಲಾ ರೀತಿಯ ಶಿಷ್ಟಾಚಾರ ರದ್ದು ಮಾಡಲಾಗುವುದು ಎಂದು ಸಭೆಗೆ ಹಾಸನ ಉಪ ವಿಭಾಗ ಅದಿಕಾರಿಯೂ ಆಗಿರುವ ಆಡಳಿತ ಅಧಿಕಾರಿ ಮಾರುತಿ ಮಾಹಿತಿಯನ್ನು ನೀಡಿದ್ದಾರೆ. ಹಾಸನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಾಸನಾಂಬೆ ದರ್ಶನೋತ್ಸವ ತಯಾರಿಯ ಕುರಿತ ಸಭೆ ನಡೆಯುತ್ತಿದೆ. ಸಂಪೂರ್ಣ ಪಾಸ್ ರದ್ದು ಮಾಡುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
2024ರಲ್ಲಿ 9 ದಿನದಲ್ಲಿ ಸಂಗ್ರಹವಾಯ್ತು 12.63 ಕೋಟಿ ಹಣ
2024 ರ ಹಾಸನಾಂಬೆ ದರ್ಶನೋತ್ಸವದಿಂದ 12 ಕೋಟಿ 63 ಲಕ್ಷ 83 ಸಾವಿರ 808ರೂಪಾಯಿ ಆದಾಯ ಬಂದಿದೆ. ಇದು ಹಾಸನಾಂಬೆ ಇತಿಹಾಸ ದಲ್ಲಿ ಹರಿದು ಬಂದ ದಾಖಲೆಯ ಆದಾಯ ಎನಿಸಿದೆ. ಸಾವಿರ ರೂಪಾಯಿ ಹಾಗೂ 300 ರೂಪಾಯಿ ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 9 ಕೋಟಿ 67 ಲಕ್ಷ 27 ಸಾವಿರದ 180 ರೂಪಾಯಿ ಆದಾಯ ಹರಿದುಬಂದಿದೆ. ಈ ಬಾರಿ ಒಟ್ಟು 20 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಈ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ 2 ಕೋಟಿ 55 ಲಕ್ಷದ 97 ಸಾವಿರದ 567 ರೂಪಾಯಿ ಸಂಗ್ರಹವಾಗಿದೆ. 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಮೂಲಕವೂ ಭಕ್ತರು ಕಾಣಿಕೆ ನೀಡಿದ್ದಾರೆ.
ಜಾಹಿರಾತಿನಿಂದ ಬಂದ ಆದಾಯ 5.50 ಲಕ್ಷ ರೂಪಾಯಿ, ಸೀರೆ ಮಾರಾಟದಿಂದ 2,00,305 ರೂಪಾಯಿ, ದೇಣಿಗೆ ನೀಡಿದ ಹಣ 40,908 ರೂಪಾಯಿ, ತುಲಾಭಾರದಿಂದ ಬಂದ ಹಣ 21 ಸಾವಿರ, ಇ ಹುಂಡಿಯಿಂದ ಬಂದ ಆದಾಯ 3,98,859 ರೂಪಾಯಿ.
2024ರಲ್ಲಿ ಪೌರ ಕಾರ್ಮಿಕರಿಂದ ಪ್ರತಿಭಟನೆ
ಭದ್ರತೆಗೆ ನಿಯೋಜಿಸಿರುವ ಪೊಲೀಸರು ಪೌರ ಕಾರ್ಮಿಕರ ಮೇಲೆ ದರ್ಪ ತೋರುತ್ತಿದ್ದಾರೆ, ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಪೌರಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಗ ಪೊಲೀಸರು ಮತ್ತು ಪೌರಕಾರ್ಮಿಕರ ನಡುವೆ ನೂಕಾಟ-ತಳ್ಳಾಟ ನಡೆದು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಬೇಕಾಯಿತು.


