ಗೃಹ ಸಚಿವರಿಂದ ಶರತ್ ಬಚ್ಚೇಗೌಡಗೆ ಭರವಸೆ
ಶಾಸಕ ಶರತ್ ಬಚ್ಚೇಗೌಡಗೆ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಫೆ.02): ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಘಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಪ್ರತಿಯಾಗಿ ಮಾತನಾಡಿ, ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕರನ್ನು ಆಹ್ವಾನಿಸುವುದು ಶಿಷ್ಟಾಚಾರ. ಅದನ್ನು ಅಧಿಕಾರಿಗಳು ಅನುಸರಿಸಬೇಕು. ಈ ಸಂಬಂಧ ಸಂಪೂರ್ಣ ವರದಿ ತರಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಎಲ್ಲಾ ಶಾಸಕರ ಹಕ್ಕನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಅದನ್ನು ಸರ್ಕಾರ ಮಾಡಲಿದೆ ಎಂದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ವಿರುದ್ಧ FIR ...
ಜತೆಗೆ, ಕಾರ್ಯಕ್ರಮ ಆಯೋಜನೆ ಸಂಬಂಧಿಸಿ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಿರ್ದೇಶಿಸಲಾಗುವುದು ಎಂದೂ ಬೊಮ್ಮಾಯಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿಷ್ಟಾಚಾರ ಪಾಲನೆ ಬಗ್ಗೆ ಸರ್ಕಾರ ಈವರೆಗೂ ಸೂಚನೆ, ಸುತ್ತೋಲೆ ನೀಡಿಲ್ಲವಾ? ನೀಡಿದ್ದರೂ ಶಿಷ್ಟಾಚಾರ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಜಿಲ್ಲಾಧಿಕಾರಿ ಜವಾಬ್ದಾರರು. ಈ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ಸರ್ಕಾರ ಶಿಷ್ಟಾಚಾರ ಪಾಲನೆಗೆ ಗಮನ ಹರಿಸಬೇಕು. ನಾನೂ ನ್ಯಾಯ ಒದಗಿಸಲು ಯತ್ನಿಸುತ್ತೇನೆ. ಸರ್ಕಾರದ ವರದಿ ಪರಿಶೀಲನೆ ನಡೆಸಿದ ಬಳಿಕ ನಾನೂ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ಬಾವಿಗಿಳಿದು ಪ್ರತಿಭಟನೆ: ಇದಕ್ಕೂ ಮುನ್ನ ಶಿಷ್ಟಾಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸಲು ಶಾಸಕ ಶರತ್ ಬಚ್ಚೇಗೌಡ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ಜರುಗಿತು.
ಪ್ರಶೋತ್ತರ ಕಲಾಪದ ಬಳಿಕ ಶರತ್ ಬಚ್ಚೇಗೌಡ ಅವರು ಹೊಸಕೋಟೆಯಲ್ಲಿ ನಡೆದ ಘಟನೆ ಕುರಿತು ಪ್ರಸ್ತಾಪಿಸಲು ಅವಕಾಶ ಕೋರಿದರು. ಸ್ಥಳೀಯ ಶಾಸಕನಾಗಿರುವ ಕಾರಣ ಶಿಷ್ಟಾಚಾರದಂತೆ ಉದ್ಘಾಟನೆ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಬೇಕಿತ್ತು. ಆದರೆ, ನನ್ನನ್ನು ಆಹ್ವಾನಿಸಿಲ್ಲ. ಹೀಗಾಗಿ ತಮ್ಮ ಹಕ್ಕುಚ್ಯುತಿಯಾಗಿದ್ದು, ಸದನವು ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಕೆಲ ಸದಸ್ಯರೂ ದನಿಗೂಡಿಸಿದರು. ಆದರೆ ಪ್ರಸ್ತಾಪ ಮಂಡನೆಗೆ ಸ್ಪೀಕರ್ ಅವಕಾಶ ನೀಡದಿದ್ದಾಗ ಾಂಗ್ರೆಸ್-ಜೆಡಿಎಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. ಕೊನೆಗೆ ಭೋಜನ ವಿರಾಮದ ಬಳಿಕ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.