ಬೆಳಗಾವಿ[ಸೆ.21]: ರಮೇಶ್‌ ಶೇ.99ರಷ್ಟುಡಿಸಿಎಂ ಆಗಿಯೇ ಆಗುತ್ತಾರೆ. ಆಗ ನಾವು ಅವರ ವಿರುದ್ಧ ಸಮಾವೇಶ ಮಾಡುತ್ತೇವೆ. ಆಗ ರಮೇಶ್‌ ಯಾವ ವಸ್ತು ಕಳೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಉಪಮುಖ್ಯಮಂತ್ರಿಯಾಗಿ, ಜಲಸಂಪನ್ಮೂಲ ಸಚಿವರಾದ ಮೇಲೆ ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಈಗ ಆರ್ಥಿಕವಾಗಿ ಖಾಲಿಯಾಗಿದ್ದಾರೆ. ಅವರೇ ನಾನು ಸಾಲಗಾರನೆಂದು ಹೇಳಿಕೊಂಡಿದ್ದಾರೆ. ಅವರ ಆಸ್ತಿಯನ್ನೆಲ್ಲ ಅವರ ಅಳಿಯ ಅಂಬಿರಾವ್‌ ಪಾಟೀಲ ಎತ್ತಿಕೊಂಡು ಹೋಗಿದ್ದಾನೆ. ಆರ್ಥಿಕವಾಗಿ ಖಾಲಿಯಾಗಿರುವ ರಮೇಶ್‌ಗೆ ಇಡಿ ವಿಚಾರಣೆ ಮಾಡುವ ಸಾಧ್ಯತೆಗಳಿಲ್ಲ. ಕಾಂಗ್ರೆಸ್‌ ನಾಯಕರ ಮೇಲೆ ಇಡಿ ಇಲಾಖೆ ದಾಳಿ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದ್ದಾರೆ. ಮಾಜಿ ಸಚಿವ ಡಿಕೆಶಿ ಇಡಿ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ನಿರಪರಾಧಿಗೆ ಶಿಕ್ಷೆಯಾಗಬಾರದು. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕು ಎಂದಿದ್ದಾರೆ.

ಭವಿಷ್ಯ ನಂಬಲ್ಲ:

ಕೋಡಿಹಳ್ಳಿ ಮಠದ ಶ್ರೀಗಳು ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಹೇಳಿದ ಭವಿಷ್ಯದ ಕುರಿತು ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ನಾನು ಭವಿಷ್ಯ ನಂಬುವುದಿಲ್ಲ. ಬಿಜೆಪಿ ಸರ್ಕಾರ ಎಷ್ಟುದಿನ ಇರುತ್ತದೆಯೋ ಅಷ್ಟುದಿನ ಒಳ್ಳೆಯ ಆಡಳಿತ ನೀಡಲಿ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರ ತೊಂದರೆ ನೀಡುತ್ತಿದೆ. ಅದು ಬಿಜೆಪಿ ಸರ್ಕಾರದ ಆಂತರಿಕ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.