ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ ಗುಂಪು ಗುಂಪಾಗಿ ಆನೆಗಳು ಗ್ರಾಮಗಳಿಗೆ ನುಗ್ಗುತ್ತಿದ್ದು ಇದರಿಂದ ಜನರು ತೀವ್ರ ಭಯಭೀತರಾಗಿದ್ದಾರೆ.
ಹಾಸನ (ಸೆ.01): ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಹಾಸನ ಜಿಲ್ಲೆಯ ಸಕಲೇಶಪುರ, ವಡೂರು ಗ್ರಾಮದ ಸಮೀಪ 20ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ.
ಕಾಡಾನೆಗಳ ದಾಳಿಯಿಂದ ಭತ್ತ, ಕಾಫಿ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದ್ದು, ಮಲೆನಾಡು ಭಾಗದ ಜನತೆ ತೀವ್ರವಾಗಿ ತತ್ತರಿಸಿದ್ದಾರೆ.
ನಿರಂತರವಾಗಿ ಕಾಡಾನೆಗಳ ಹಾವಾಳಿಗೆ ಬೆಳೆಗಳು ಹಾಳಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಗಲು ಹೊತ್ತಿನಲ್ಲಿಯೇ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸ ಪಡುತ್ತಿದ್ದಾರೆ.
ಕಾಡಾನೆಗಳು ಎಲ್ಲೆಡೆ ಸಂಚರಿಸುವುದರಿಂದ ಶಾಲಾ - ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಭಯಪಡುವ ವಾತಾವರಣ ನಿರ್ಮಾಣವಾಗಿದ್ದು, ಹೊಲಗಳಿಗೆ ತೆರಳಲು ರೈತರು ಆತಂಕಪಡುವಂತಾಗಿದೆ.
ಈ ಹಿಂದೆಯೂ ಕೂಡ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಮಳೆ ಕಡಿಮೆಯಾದ ಈ ಸಂದರ್ಭದಲ್ಲಿ ಮತ್ತೆ ಆನೆಗಳು ಬೆಳೆ ಹಾಳು ಮಾಡುತ್ತಿವೆ. ಒಂದೆಡೆ ನೆರೆಯಿಂದ ತತ್ತರಿಸಿದ್ದ ರೈತರು ಇದೀಗ ಆನೆಗಳ ಹಾವಳಿಯಿಂದ ಇದ್ದ ಚೂರು ಪಾರು ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
