Ramanagara; ರೈತರಿಗೆ ಹಾವಳಿ ನೀಡುತ್ತಿದ್ದ ಮತ್ತೊಂದು ಪುಂಡಾನೆ ಸೆರೆ
ಹತ್ತಾರು ಹಳ್ಳಿಯ ರೈತರ ನಿದ್ರೆಗೆಡಿಸಿ, ಮುಗ್ದ ಜನರು ಆತಂಕಗೊಳ್ಳುವಂತೆ ಮಾಡಿದ್ದ ಪುಂಡಾನೆಯೊಂದನ್ನ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಸಾಕಾನೆಗಳ ಮೂಲಕ ಒಂಟಿ ಸಲಗ ಬಂಧನವಾಗಿದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಆ.19): ಆತ ಆಡಿದ್ದೆ ಆಟ, ನಡೆದಿದ್ದೆ ದಾರಿ ಅಂತಾ ಮೆರೆಯುತ್ತ ಇದ್ದ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ, ಕಣ್ಣಿಗೆ ಕಾಣುವುದನ್ನಲ್ಲ ನಾಶ ಮಾಡುತ್ತಿದ್ದ. ಆತನ ಕಾಟಕ್ಕೆ ಹತ್ತಾರು ಹಳ್ಳಿಯ ಜನ ರೋಸಿ ಹೋಗಿದ್ರು. ಕೊನೆಗೂ ಆತನ ಬಂಧನವಾಗಿದೆ. ಹತ್ತಾರು ಹಳ್ಳಿಯ ರೈತರ ನಿದ್ರೆಗೆಡಿಸಿ, ಮುಗ್ದ ಜನರು ಆತಂಕಗೊಳ್ಳುವಂತೆ ಮಾಡಿದ್ದ ಪುಂಡಾನೆಯೊಂದನ್ನ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಿವಿ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿತ್ತು. ರೈತರು ಬೆಳೆದಿದ್ದ ಬೆಳೆಗಳನ್ನ ಸರ್ವ ನಾಶ ಮಾಡುವುದರ ಜೊತೆಗೆ, ಮನುಷ್ಯರ ಮೇಲೂ ಸಹಾ ದಾಳಿ ಮಾಡಿ ಪ್ರಾಣ ಕಳೆದುಕೊಳ್ಳುವಂತೆ ಕಾಡಾನೆಗಳು ಮಾಡುತ್ತಿದ್ದವು. ಅದರಲ್ಲೂ ಎರಡು ಆನೆಗಳು ಮಾತ್ರ ಸಾಕಷ್ಟು ಹಾವಳಿ ನೀಡುತ್ತಿದ್ದವು. ಹೀಗಾಗಿ ಎರಡು ಕಾಡಾನೆಗಳನ್ನ ಹಿಡಿಯುವಂತೆ ರೈತರು, ಸಾರ್ವಜನಿಕರು ಮನವಿ ಮಾಡಿದ್ರು. ಈ ನಿಟ್ಟಿನಲ್ಲಿ ಎರಡು ಕಾಡಾನೆಗಳ ಸೆರೆ ಹಿಡಿಯುವಂತೆ ಸರ್ಕಾರ ಅರಣ್ಯ ಇಲಾಖೆಗೆ ಆದೇಶಿಸಿತ್ತು.
ಅದರಂತೆ ಆಗಸ್ಟ್ 13ರಿಂದ ಎರಡು ಆನೆಗಳನ್ನ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಮುಂದಾಗಿದ್ದರು. ಆಗಸ್ಟ್ 14ರಂದು ಒಂದು ಆನೆಯನ್ನ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದರು. ಆದ್ರೆ ಇನ್ನೊಂದು ಒಂಟಿ ಸಲಗ ಸಿಕ್ಕಿರಲಿಲ್ಲ. ಕಾಡಲ್ಲಿ ತಪ್ಪಿಸಿಕೊಂಡು ತಿರುಗಾಡುತ್ತಿತ್ತು. ಆದರೆ ಇವತ್ತು ಚನ್ನಪಟ್ಟಣ ತಾಲೂಕಿನ ಬಿವಿ ಹಳ್ಳಿ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಪಶು ವೈದ್ಯರು ಕಾರ್ಯಾಚರಣೆ ನಡೆಸಿ, ಒಂಟಿ ಸಲಗಕ್ಕೆ ಅರವಳಿಕೆ ಮದ್ದು ನೀಡಿ ಬಂಧಿಸಿದ್ದಾರೆ.
ಅಂದಹಾಗೆ ಚನ್ನಪಟ್ಟಣ ತಾಲೂಕಿನ ಹತ್ತಾರು ಹಳ್ಳಿಗಳ್ಳಲ್ಲಿ ಕಾಡಾನೆಗಳ ಹಾವಳಿ ಕಳೆದ ಹಲವು ತಿಂಗಳಿಂದ ಹೆಚ್ಚಾಗಿತ್ತು. ಅಲ್ಲದೆ ಇತ್ತೀಚಿಗೆ ಚೆನ್ನಿಗನಹೊಸಳ್ಳಿ ಗ್ರಾಮದ ರೈತ ಮಹಿಳೆ ಚನ್ನಪಟ್ಟಣ ಮಹಿಳೆ ಕೂಡ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಳು. ಹೀಗಾಗಿ ಕಾಡಾನೆಗಳ ಸೆರೆಗೆ ಒತ್ತಾಡ ಹೆಚ್ಚಾಗಿತ್ತು. ಹೀಗಾಗಿ ದುಬಾರೆ ಹಾಗೂ ಮತ್ತಿಗೋಡು ಆನೆ ಬಿಡಾರದಿಂದ ಸಾಕಾನೆಗಳಾದ ಪ್ರಶಾಂತ, ಭೀಮಾ, ಲಕ್ಷಣ, ಹರ್ಷ, ಕುಮಾರ ಐದು ಸಾಕಾನೆಗಳನ್ನ ಕರೆದುಕೊಂಡು ಬಂದು ಅರಣ್ಯ ಇಲಾಕೆ ಹಾಗೂ ಪಶುವೈದ್ಯರು ಅಪರೇಷನ್ ಎಲಿಫ್ಯಾಂಟ್ ಆರಂಭಿಸಿದ್ದರು.
ಚನ್ನಪಟ್ಟಣ: ಆನೆ ಸೆರೆ ಕಾರ್ಯಾಚರಣೆಗೆ ಗಜಪಡೆ ಸಿದ್ಧ..!
ಇನ್ನು ಇವತ್ತು ಸೆರೆ ಸಿಕ್ಕ ಒಂಟಿ ಸಲಗ ಎರಡು ದಿನಗಳ ಕೆಳಗೆ ಸೆರೆ ಸಿಕ್ಕಿತ್ತು. ಆದರೆ ಅರವಳಿಕೆ ಮದ್ದು ನೀಡಿದ್ರು, ಕೆಲವೇ ನಿಮಿಷಗಳಲ್ಲಿ ಎದ್ದು, ಸಿಬ್ಬಂದಿಗಳಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿತ್ತು. ಆದರೆ ಇವತ್ತು ಮತ್ತೆ ಬಂಧನವಾಗಿದೆ. ಇನ್ನು ಸೆರೆ ಸಿಕ್ಕ ಆನೆಯನ್ನ ಕೊಳ್ಳೆಗಾಲ ಅಥವಾ ಎಮ್ ಎಮ್ ಹಿಲ್ಸ್ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಎರಡು ಕಾಡಾನೆಗಳ ಸೆರೆಯಿಂದ ನಮಗೆ ಮುಕ್ತಿ ಸಿಗುವುದಿಲ್ಲ. ಇನ್ನೂ ದೊಡ್ಡ ಆನೆಗಳು ಇವೆ. ಅವುಗಳನ್ನು ಕೂಡ ಸೆರೆ ಹಿಡಿಯುವಂತೆ ರೈತರು ಮನವಿ ಮಾಡಿದ್ದಾರೆ.
ರೈತರಿಗೆ ಹಾವಳಿ ನೀಡ್ತಿದ್ದ ಕಾಡಾನೆ ಕೊನೆಗೂ ಸೆರೆ, ಕುತೂಹಲದಿಂದ ನೋಡಲು ಮುಗಿಬಿದ್ದ ಜನ
ಇನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಆನೆಗಳು ಇದ್ದು, ಅವುಗಳನ್ನ ಸಹಾ ದೂರ ಅರಣ್ಯ ಪ್ರದೇಶಕ್ಕೆ ಹಿಮ್ಮೆಟಿಸಲು ಅರಣ್ಯ ಇಲಾಕೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಒಟ್ನಲ್ಲಿ ಹತ್ತಾರು ಹಳ್ಳಿಗಳ ರೈತರ ನಿದ್ರೆಗೆಡಿಸಿದ್ದ ಎರಡು ಆನೆಗಳನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಈ ಮೂಲಕ ರೈತರು ಕೂಡ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.