ಅಭಿಮನ್ಯು ಸಾರಥ್ಯದಲ್ಲಿ ಒಂಟಿ ಸಲಗ ಸೆರೆ: ಸಹಾರ ಎಸ್ಟೇಟ್‌ನಲ್ಲಿ ಅರಣ್ಯ ಇಲಾಖೆಯಿಂದ ಕ್ರಮ!
ಅರಣ್ಯ ಇಲಾಖೆಯವರು ಸಾಕಾನೆ ಕ್ಯಾಪ್ಟನ್ ಅಭಿಮನ್ಯು ಸಾರಥ್ಯದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಇರುವ ಸಹಾರ ಎಸ್ಟೇಟ್‌ನಲ್ಲಿ ಒಂಟಿ ಸಲಗವೊಂದನ್ನು ಸೆರೆ ಹಿಡಿದಿದ್ದಾರೆ.
ಆಲೂರು (ಜ.14): ಅರಣ್ಯ ಇಲಾಖೆಯವರು ಸಾಕಾನೆ ಕ್ಯಾಪ್ಟನ್ ಅಭಿಮನ್ಯು ಸಾರಥ್ಯದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ಇರುವ ಸಹಾರ ಎಸ್ಟೇಟ್‌ನಲ್ಲಿ ಒಂಟಿ ಸಲಗವೊಂದನ್ನು ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಯಶಳೂರು ಅರಣ್ಯ ಪ್ರದೇಶದಲ್ಲಿ ವಿಪರೀತ ಹಾವಳಿ ನಡೆಸಿ ಈ ಭಾಗದ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ, ಹಲವು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಎಂಬ ಸಾಕಾನೆ ಒಂಟಿ ಸಲಗದ ದಾಳಿಗೆ ಸಿಲುಕಿ ಸಾವನ್ನಪ್ಪಿತ್ತು.
ಇದಕ್ಕೆ ಅರಣ್ಯ ಇಲಾಖೆಯವರ ಬೇಜವಾಬ್ದಾರಿತನವೇ ಕಾರಣ ಎಂದು ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆಯವರು, ಶನಿವಾರದಿಂದ ಕಾರ್ಯಾಚರಣೆ ಪ್ರಾರಂಭಿಸಿ ಅತಿ ಹೆಚ್ಚು ಬಾರಿ ಕಾಡನೆ ಹಿಡಿಯುವ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಅಭಿಮನ್ಯು ನೇತೃತ್ವದಲ್ಲಿ ಇತರೆ ಕುಮ್ಕಿ ಆನೆಗಳಾದ ಸುಗ್ರೀವ, ಧನಂಜಯ, ಕರ್ನಾಟಕ ಭೀಮ, ಮಹೇಂದ್ರ, ಅಶ್ವತ್ಥಾಮ, ಪ್ರಶಾಂತ, ಹರ್ಷ ಆನೆಗಳ ಸಹಕಾರದೊಂದಿಗೆ ಕಾರ್ಯಚರಣೆ ಪ್ರಾರಂಭಿಸಿದ ಕೆಲವೇ ಗಂಟೆಗಳೊಳಗೆ ಒಂಟಿ ಸಲಗವನ್ನು ಸೆರೆ ಹಿಡಿಯಲಾಯಿತು.
ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ಎಚ್.ಡಿ.ರೇವಣ್ಣ
ಸೆರೆಸಿಕ್ಕ ಒಂಟಿ ಸಲಗವನ್ನು ಮತ್ತಿಗೋಡು ಆನೆ ಕ್ಯಾಂಪ್‌ಗೆ ಸಾಗಿಸಿಲಾಯಿತು. ಶನಿವಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸಂಕ್ರಾಂತಿ ಹಬ್ಬದ ನಂತರ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಡಾಕ್ಟರ್ ಮುಜೀಬ್, ಡಾಕ್ಟರ್ ರಮೇಶ್, ಗುರಿಕಾರ ಅಕ್ರಮ್, ಡಿಎಫ್ಓ ಸೌರಭ್ ಕುಮಾರ್, ಎಸಿಎಫ್ ಪುಲಕಿತಮೀನಾ, ಆರ್‌ಎಫ್‌ಗಳಾದ ಯತೀಶ್, ದಿಲೀಪ್, ಹೇಮಂತ್ ಕುಮಾರ್, ಸಿಬ್ಬಂದಿ ಜೈಪಾಲ್ ಪ್ರದೀಪ್ ಕುಮಾರ್ ಹಾಗೂ ಮಾವುತರು ಭಾಗವಹಿಸಿದ್ದರು.
ಕಾಫಿ ಬೆಳೆಗಾರರಾದ ಮಗ್ಗೆ ಗ್ರಾಮದ ಬಿ ಎನ್ ಚಂದ್ರು ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಹಲವು ದಶಕಗಳಿಂದ ಈ ಭಾಗದಲ್ಲಿ ಕಾಡಾನೆ ಹಾಗೂ ಮಾನವನ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿದ್ದು ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಲ್ಲದೆ, ಕಾಡಾನೆಗಳು ಸಾವನ್ನಪ್ಪಿವೆ. ಅಪಾರ ಪ್ರಮಾಣದ ಬೆಳೆನಾಶಗೊಂಡು ಹಲವಾರು ಮಂದಿ ಕಾಫಿ ಬೆಳಗಾರರು ತಮ್ಮ ಕಾಫಿ ತೋಟಗಳನ್ನು ಮಾರಿ ಪಟ್ಟಣ ಪ್ರದೇಶಕ್ಕೆ ಹೋಗುತ್ತಿದ್ದು ಬತ್ತದ ಬೆಳೆಯನ್ನು ಭಾಗಶಃ ರೈತರು ನಿಲ್ಲಿಸಿದ್ದಾರೆ. ಪ್ರತಿ ಬಾರಿಯೂ ಅರಣ್ಯ ಇಲಾಖೆಯವರು ಒಂದೆರಡು ಆನೆಗಳನ್ನು ಹಿಡಿದುಕೊಂಡು ಹೋಗಿ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದವರು ಈಗಲಾದರೂ ಇತ್ತ ಗಮನಹರಿಸಿ, ಈ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
ಕಲ್ಲಾರೆ ಗ್ರಾಮದ ಕಾಫಿ ಬೆಳಗಾರ ಸಂತೋಷ್ ಪತ್ರಿಕೆಯೊಂದಿಗೆ ಮಾತನಾಡಿ, ಈ ಭಾಗದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದೆ ಸರ್ಕಾರದವರು ನಾಮಕಾವಸ್ತಿಗೆ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ,ಈ ಭಾಗದಲ್ಲಿ ಪ್ರತಿವರ್ಷವೂ 20ಕ್ಕೂ ಹೆಚ್ಚು ಆನೆಗಳು ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ನೆಲೆಸುತ್ತಲೇ ಬಂದಿವೆ. ಪ್ರತಿ ವರ್ಷವೂ ಇಷ್ಟೊಂದು ಆನೆಗಳು ಎಲ್ಲಿಂದ ಬರುತ್ತೇವೆ. ಎಂಬುದನ್ನು ಇವರು ಕಂಡು ಹಿಡಿಯಬೇಕು. ಇಲ್ಲಿ ಕಾರ್ಯಾಚರಣೆ ನಡೆಸಿ ಹಿಡಿದು ಬೇರೆ ಪ್ರದೇಶದ ಕಾಡಿಗೆ ಬಿಡುತ್ತಿರುವ ಆನೆಗಳು ಸಹ ಪುನಃ ಇಲ್ಲಿಗೆ ಬರುತ್ತಿರುವುದನ್ನು ಮೊದಲು ತಪ್ಪಿಸಬೇಕು, ರೈಲ್ವೆ ಹಳಿಗಳ ಬೇಲಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಅದನ್ನು ಶೀಘ್ರ ಪೂರ್ಣಗೊಳಿಸಬೇಕು, ಇಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಶ್ರೀಲಂಕಾ ಮಾದರಿಯಲ್ಲಿ ಆನೆಧಾಮ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರಜ್ವಲ್‌ರ ವಿಡಿಯೋ ಇದೆ, ಸಮಯ ಬಂದಾಗ ಬಿಡುಗಡೆ: ಬಿಜೆಪಿ ವಕ್ತಾರ ದೇವರಾಜೇಗೌಡ
ಆನೆಗಳ ಸ್ಥಳಾಂತರದ ಭರವಸೆ: ಸ್ಥಳೀಯ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕೇವಲ ಒಂದೆರಡು ಆನೆಗಳು ಹಿಡಿದರೆ ಯಾವುದೇ ಪ್ರಯೋಜನವಿಲ್ಲ ನಮ್ಮ ಒತ್ತಾಯ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿದೆ ಅದನ್ನು ಬಿಟ್ಟು ನೆಪ ಮಾತ್ರಕ್ಕೆ ಒಂದೆರಡು ಆನೆಗಳನ್ನು ಹಿಡಿದು ಸ್ಥಳಾಂತರಿಸುವುದು ಯಾವುದೇ ಪ್ರಯೋಜನವಿಲ್ಲ ಶಾಶ್ವತ ಪರಿಹಾರ ದೊರಕುವವರೆಗೂ ಕನಿಷ್ಠ 15 ರಿಂದ 20 ಆನೆಗಳನ್ನಾದರೂ ಹಿಡಿದು ಸ್ಥಳಾಂತರಿಸಿದರೆ ಸ್ವಲ್ಪಮಟ್ಟಿನ ನೆಮ್ಮದಿ ಸಿಗುತ್ತದೆ ಈ ಸಂಬಂಧವಾಗಿ ಅರಣ್ಯ ಸಚಿವರ ಜೊತೆಯೂ ಸಹ ಚರ್ಚಿಸಿದ್ದೇನೆ. ಅವರು ಹಂತ ಹಂತವಾಗಿ ಎಲ್ಲಾ ನೆಗಳನ್ನು ಹಿಡಿದು ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.