ಎನ್.ಆರ್.ಪುರ ಸಮೀಪ ಓಡಾಡುತ್ತಿರುವ 15 ಕಾಡಾನೆಗಳ ಹಿಂಡು; ತೋಟಗಾರಿಕೆ ಬೆಳೆ ನಾಶ!
ಮಳೆ ಕಡಿಮೆಯಾಗಿ ಭದ್ರಾ ಹಿನ್ನೀರು ಕಡಿಮೆಯಾದ ಪರಿಣಾಮ ಲಕ್ಕವಳ್ಳಿಯ ಭದ್ರಾ ವನ್ಯಜೀವಿ ವಲಯದಿಂದ ಕಾಡಾನೆಗಳ ಹಿಂಡು ಭದ್ರಾ ಹಿನ್ನೀರು ದಾಟಿ ಬರುತ್ತಿದ್ದು, ನರಸಿಂಹರಾಜಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರನ್ನು ಭಯ ಭೀತರನ್ನಾಗಿಸಿದೆ.
ಯಡಗೆರೆ ಮಂಜುನಾಥ್
ನರಸಿಂಹರಾಜಪುರ (ಜು.6): ಮಳೆ ಕಡಿಮೆಯಾಗಿ ಭದ್ರಾ ಹಿನ್ನೀರು ಕಡಿಮೆಯಾದ ಪರಿಣಾಮ ಲಕ್ಕವಳ್ಳಿಯ ಭದ್ರಾ ವನ್ಯಜೀವಿ ವಲಯದಿಂದ ಕಾಡಾನೆಗಳ ಹಿಂಡು ಭದ್ರಾ ಹಿನ್ನೀರು ದಾಟಿ ಬರುತ್ತಿದ್ದು, ನರಸಿಂಹರಾಜಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರನ್ನು ಭಯ ಭೀತರನ್ನಾಗಿಸಿದೆ.
ಕಳೆದ ನಾಲ್ಕಾರು ವರ್ಷದಿಂದಲೂ ಭದ್ರಾ ಹಿನ್ನೀರು ಭಾಗದ ಮುತ್ತಿನಕೊಪ್ಪ, ಕಡಹಿನಬೈಲು, ಹೊನ್ನೇಕೊಡಿಗೆ, ಬಾಳೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಕಾಡಾನೆಗಳು ಸಮೀಪದ ರೈತರ ಜಮೀನಿಗೆ ನುಗ್ಗಿ ಅಡಿಕೆ, ಭತ್ತ, ಬಾಳೆ, ತೆಂಗಿನ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಆದರೆ, ಈ ವರ್ಷ ಮಳೆ ಕಡಿಮೆಯಾದ ಪರಿಣಾಮವಾಗಿ ನರಸಿಂಹರಾಜಪುರ ಪಟ್ಟಣಕ್ಕೆ ಕೇವಲ 1 -2 ಕಿ.ಮೀ. ದೂರವಿರುವ ಹಿಳುವಳ್ಳಿ-ಲಿಂಗಾಪುರ ಗ್ರಾಮಗಳಿಗೆ ಕಾಡಾನೆಗಳ ಹಿಂಡು ನುಗ್ಗಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.
ಕಾಡಾನೆಯ ಭರ್ಜರಿ ಸೇಡು, ಮನೆಮುಂದೆ ನಿಲ್ಲಿಸಿದ ಕಾರು ಜಖಂಗೊಳಿಸಿ ಪರಾರಿ
15 ಆನೆಗಳ ಹಿಂಡು:
ಸೋಮವಾರ ರಾತ್ರಿ ವಿಠಲ, ಮುದುಕೂರು ಗ್ರಾಮಗಳಿಗೆ ನುಗ್ಗಿ ಬಾಳೆ ತೋಟ ನಾಶ ಮಾಡಿತ್ತು. ನಂತರ ಪಟ್ಟಣ ಸಮೀಪದಲ್ಲೇ ಇರುವ ರಮೇಶ್, ಸಲೀಂ ಎಂಬುವರಿಗೆ ಸೇರಿದ ಅಡಿಕೆ ತೋಟ, ತೆಂಗಿನಮರ ನಾಶ ಮಾಡಿದೆ. ಮಂಗಳವಾರ ರಾತ್ರಿ ಪಟ್ಟಣದಿಂದ ಕೇವಲ 1 ಕಿ.ಮೀ. ದೂರವಿರುವ ಹಿಳುವಳ್ಳಿ ಗ್ರಾಮದ ರಾಘವೇಂದ್ರ ಎಂಬ ರೈತರಿಗೆ ಸೇರಿದ ಜಮೀನಿಗೆ ಆನೆಗಳ ಹಿಂಡು ನುಗ್ಗಿ 250 ಬಾಳೆ, 15ರಿಂದ 20 ಅಡಿಕೆ ಮರ ನಾಶ ಮಾಡಿ ಬೆಳಗಾಗುತ್ತಲೇ ಸಮೀಪದ ಕಾಡಿಗೆ ಹೋಗಿ ಅವಿತುಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಾಗೃತವಾದ ಅರಣ್ಯ ಇಲಾಖೆಯವರು ಎಲಿಫೆಂಟ್ ಟಾಸ್‌್ಕ ಫೋರ್ಸ್ ಕಳಿಸಿ ಆನೆಗಳು ಓಡಿಸಿದ್ದಾರೆ.
ಕಳೆದ 1 ವಾರದಿಂದ ಮೂಡಿಗೆರೆಯಿಂದ ಎಲಿಫಂಟ್ ಟಾಸ್‌್ಕ ಫೋರ್ಸ್ ಅನ್ನು ನರಸಿಂಹರಾಜಪುರಕ್ಕೆ ಕರೆಸಲಾಗಿದ್ದು, ಈ ಪಡೆ ಇಲ್ಲೇ ಬೀಡುಬಿಟ್ಟಿದೆ. ಕಾಡಾನೆಗಳು ಗ್ರಾಮಕ್ಕೆ ಬಂದ ಸುದ್ದಿ ಸಿಕ್ಕಿದ ಕೂಡಲೇ ಅಲ್ಲಿ ಹೋಗಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಹಗಲು ಹೊತ್ತಿನಲ್ಲಿ ಕಾಡಲ್ಲೇ ಉಳಿಯುವ ಆನೆಗಳ ಗುಂಪು ರಾತ್ರಿ ಸಮಯದಲ್ಲಿ ಮತ್ತೆ ಯಾವುದಾದರೂ ಒಂದು ಗ್ರಾಮಕ್ಕೆ ನುಗ್ಗಿ ಅಡಿಕೆ, ಬಾಳೆ ತಿಂದು ಹಾಕುತ್ತಿದೆ. ಇದುವರೆಗೂ ಮನುಷ್ಯರಿಗೆ ಯಾವುದೇ ಹಾನಿ ಮಾಡಿಲ್ಲ. ಹಲಸಿನ ಹಣ್ಣಿನ ಸಮಯವಾಗಿದ್ದರಿಂದ ಕಾಡಾನೆಗಳು ಹಲಸಿನ ಹಣ್ಣಿಗಾಗಿಯೂ ನುಗ್ಗುತ್ತಿವೆ ಎನ್ನಲಾಗುತ್ತಿದೆ. ಒಂದು ರಾತ್ರಿ ಸಮಯದಲ್ಲಿ ಕನಿಷ್ಠ 25-30 ಕಿ.ಮೀ. ದೂರದವರಗೆ ಕಾಡಾನೆಗಳು ನಡೆದುಕೊಂಡು ಹೋಗುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
ನರಸಿಂಹರಾಜಪುರ ತಾಲೂಕಿನ ಚಿಕ್ಕ ಅಗ್ರಹಾರ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಸಾರ್ಯ, ಕೂಸಗಲ್,$ಅಳೇಹಳ್ಳಿ, ಕೊಳಲೆ, ಮುದುಗುಣಿ, ಬಿಳಾಲುಕೊಪ್ಪ ಹಾಗೂ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಕಡಹಿನಬೈಲು, ಗಾಂಧಿ ಗ್ರಾಮ, ಶಂಕರಪುರ, ಮಾಕೋಡು, ದೊಡ್ಡಿನತಲೆ, ಕಣಬೂರು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಕಾಡಾನೆಗಳ ಕಾಟವು ಹಲವಾರು ವರ್ಷಗಳಿಂದಲೂ ಇದ್ದರೂ, ಈ ವರ್ಷ ಜಾಸ್ತಿಯಾಗಿದೆ. ಕಳೆದ 1 ವಾರದಿಂದ ಕಾಡಾನೆಗಳನ್ನು ಓಡಿಸಲು ಪರಿಣಿತಿ ಪಡೆದಿರುವ ಮೂಡಿಗೆರೆ ಎಲಿಫೆಂಟ್ ಟಾಸ್‌್ಕ ಫೆäರ್ಸ್‌ನವರನ್ನು ಕರೆಸಲಾಗಿದೆ. ಬುಧವಾರ ಮೂಡಿಗೆರೆಯ ಎಲಿಫೆಂಟ್ ಟಾಸ್‌್ಕ ಫೋರ್ಸ್ ಮುಖ್ಯಸ್ಥ ಬಸವರಾಜು ಎಸ್. ನಿಡಗಂಡಿ ನೇತೃತ್ವದ ತಂಡದವರು ಕಾರ್ಯಾಚಾರಣೆ ನಡೆಸಿ 17 ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟಿದ್ದಾರೆ.
ಜನರಲ್ಲಿ ಭಯ ಹುಟ್ಟಿಸಿದ್ದ ಕಾಡಾನೆಗೆ ಟ್ರೈನಿಂಗ್ ಸಕ್ಸಸ್; ಅಭಿಮನ್ಯುವಾಗಿ ಕ್ರಾಲ್ ನಿಂದ ಬಿಡುಗಡೆ!
ಈಗಾಗಲೇ ಮೂಡಿಗೆರೆಯಿಂದ ಎಲಿಫೆಂಟ್ ಟಾಸ್‌್ಕ ಫೋರ್ಸ್ ಪಡೆಯನ್ನು ಕರೆಸಿ ರೈತರ ಜಮೀನಿಗೆ ನುಗ್ಗುತ್ತಿರುವ ಕಾಡಾನೆಗಳನ್ನು ಮರಳಿ ಭದ್ರಾ ಅಭಯಾರಣ್ಯಕ್ಕೆ ಕಳಿಸುವ ಪ್ರಯತ್ನ ಮಾಡುತ್ತಿದ್ದೇವೆ.ಇದರ ಜೊತೆಗೆ ನರಸಿಂಹರಾಜಪುರ ತಾಲೂಕಿನಲ್ಲಿ ಹೆಚ್ಚು ಕಾಡಾನೆಗಳ ಕಾಟ ಇರುವುದರಿಂದ ಖಾಯಂ ಆಗಿ ಇಲ್ಲಿಗೆ ಎಲಿಫಂಟ್ ಟಾಸ್‌್ಕ ಫೋರ್ಸ್ ನೀಡುವಂತೆ ಡಿಎಫ್‌ಒಗೆ ಮನವಿ ಸಲ್ಲಿಸಲಾಗಿದೆ. ಭದ್ರಾ ಹಿನ್ನೀರು ವ್ಯಾಪ್ತಿಯಲ್ಲಿ ಬರುವ ನರಸಿಂಹರಾಜಪುರ, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಮುತ್ತಿನಕೊಪ್ಪ, ಕಡಹಿನಬೈಲು, ಹೊನ್ನೇಕೊಡಿಗೆ, ಬಾಳೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ 61 ಕಿ.ಮೀ. ದೂರವರೆಗೆ ಸೌರ ವಿದ್ಯುತ್ ಬೇಲಿ ಹಾಕಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
- ಸಂತೋಷ್ ಸಾಗರ್
ವಲಯ ಅರಣ್ಯಾಧಿಕಾರಿಗಳು, ನರಸಿಂಹರಾಜಪುರ
ನರಸಿಂಹರಾಜಪುರ ಪಟ್ಟಣದಿಂದ ಗಡಿ ಭಾಗದಿಂದ ಕೇವಲ ಅರ್ಧ ಕಿ.ಮೀ. ದೂರವಿರುವ ನನ್ನ ಜಮೀನಿಗೆ ಕಾಡಾನೆಗಳ ಹಿಂಡು ನುಗ್ಗಿ ಬಾಳೆ, ಅಡಿಕೆ ನಾಶ ಮಾಡಿದ್ದು ನನಗೆ ತುಂಬಾ ನಷ್ಟವಾಗಿದೆ. ಹಗಲು ಹೊತ್ತಿನಲ್ಲಿ ಕಡಹಿನಬೈಲು ಏತ ನೀರಾವರಿ ಇರುವ ಮಂಡಲ ಕಾಡಿನಲ್ಲಿ ಅವಿತುಕೊಳ್ಳುತ್ತವೆ. ರಾತ್ರಿ ಸಮಯದಲ್ಲಿ ಜಮೀನುಗಳಿಗೆ ನುಗ್ಗುತ್ತಿವೆ. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕಾಡಾನೆಗಳು ನುಗ್ಗುವ ಭೀತಿ ಕಾಣುತ್ತಿದೆ. ಅರಣ್ಯ ಇಲಾಖೆಯವರು ಶಾಶ್ವತ ಪರಿಹಾರ ಮಾಡಿ ಕಾಡಾನೆಗಳ ಕಾಟದಿಂದ ಜನರಿಗೆ ಮುಕ್ತಿ ನೀಡಬೇಕು.
- ರಾಘವೇಂದ್ರ ಸ್ಥಳೀಯ ರೈತರು, ಹಿಳುವಳ್ಳಿ