Chikkamagaluru: ಕಾಡಾನೆ ದಾಳಿ: ಮಗನನ್ನು ಕಳೆದುಕೊಂಡು ತಬ್ಬಲಿಯಾದ ತಾಯಿ!

ನಿನ್ನೆ ಕಾಡಾನೆ ದಾಳಿಯಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸ್ವಗ್ರಾಮ ಗೌಡಹಳ್ಳಿಯಲ್ಲಿ ನೆರವೇರಿಸಲಾಯಿತು.ಕಾಡಾನೆ ದಾಳಿಯಿಂದ ಜೀವ ಕಳೆದುಕೊಂಡ ಯುವಕನ ಮನೆಯಲ್ಲಿ ರೋಧನ ಮುಗಿಲು ಮುಟ್ಟಿತ್ತು. 

wild elephant attack a mother who has lost her son at chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.23): ನಿನ್ನೆ ಕಾಡಾನೆ ದಾಳಿಯಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸ್ವಗ್ರಾಮ ಗೌಡಹಳ್ಳಿಯಲ್ಲಿ ನೆರವೇರಿಸಲಾಯಿತು.ಕಾಡಾನೆ ದಾಳಿಯಿಂದ ಜೀವ ಕಳೆದುಕೊಂಡ ಯುವಕನ ಮನೆಯಲ್ಲಿ ರೋಧನ ಮುಗಿಲು ಮುಟ್ಟಿತ್ತು. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಹೇಳತೀರದಾಗಿತ್ತು. 

ಮಗನನ್ನು ಕಳೆದುಕೊಂಡು ತಬ್ಬಲಿಯಾದ ತಾಯಿ: ನಿನ್ನೆ ಸಂಜೆ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಎಂಬಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ (26 ವರ್ಷ) ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು.ರೈತರ ಜಮೀನಿಗೆ ಬರುತ್ತಿದ್ದ ಆನೆಯೊಂದನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾಗ ಕಾಡಾನೆಯೊಂದು ಕಾರ್ತಿಕ್ ಮೈ ಮೇಲೆ ಎರಗಿಬಂದು ಸಾಯಿಸಿತ್ತು. ಇಂದು (ಗುರುವಾರ) ಕಾರ್ತಿಕ್ ಹುಟ್ಟೂರು ಗೌಡಹಳ್ಳಿಯಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. 

Chikkamagaluru: ಎರಡು ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಮೂವರ ಬಲಿ: ಹೆಚ್ಚಿದ ಜನಾಕ್ರೋಶ

ಸಾವಿರಾರು ಮಂದಿ ಕಾರ್ತಿಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿ ಅಕ್ರಂಧನ ಮುಗಿಲುಮಟ್ಟಿತ್ತು.ಕಳೆದ ಒಂದು ವರ್ಷದಿಂದ ಆನೆ ನಿಗ್ರಹ ಕಾರ್ಯಪಡೆಯಲಿ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ತಿಕ್ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಎರಡು ವರ್ಷದ ಹಿಂದೆ ಅವರ ತಂದೆ ಈರಪ್ಪಗೌಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಾಮಾನ್ಯ ಕೃಷಿ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ತಾಯಿ ಸರೋಜಮ್ಮ ಈಗ ಇದ್ದೊಬ್ಬ ಮಗನನ್ನು ಅಕಾಲಿಕವಾಗಿ ಕಳೆದುಕೊಂಡು ಏಕಾಂಗಿಯಾಗಿದ್ದಾರೆ.

ಹಣ ಬೇಡ ನನ್ನ ಮಗನನ್ನು ತಂದು ಕೊಡಿ: ಸರ್ಕಾರದ ವತಿಯಿಂದ ನೀಡಿದ ರೂ. 25 ಲಕ್ಷ ಚೆಕ್ ಸ್ವೀಕರಿಸುವಾಗ ಭಾವುಕರಾದ ತಾಯಿ ನನಗೆ ಹಣ ಬೇಡ ನನ್ನ ಮಗನನ್ನು ತಂದು ಕೊಡಿ ಎಂದು ರೋಧಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವೆ ಶ್ರೀಮತಿ ಮೋಟಮ್ಮ, ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯು.ಪಿ. ಸಿಂಗ್  ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು,  ವಿವಿಧ ಪಕ್ಷಗಳ ಮುಖಂಡರು, ಬೆಳೆಗಾರರ ಸಂಘದ ಅಧ್ಯಕ್ಷ ,ಹಿರಿಯ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. 

ನಾಳೆ ಅರಣ್ಯಾಧಿಕಾರಿಗಳೋಂದಿಗೆ ಸಭೆ: ಜಿಲ್ಲೆಯಲ್ಲಿ ಸುಮಾರು 32 ಕಾಡಾನೆಗಳಿದ್ದು, ಇವುಗಳ ನಿರಂತರ ಸಂಚಾರದಿಂದ ಪ್ರಾಣ ಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಾಳೆ (ಶುಕ್ರವಾರ )ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದರು.ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕೇ, ಅಥವಾ ಸ್ಥಳಾಂತರ ಮಾಡಲು ಸಾಧ್ಯನಾ, ಈ ಕುರಿತು ಸಿಸಿಎಫ್ , ಡಿಎಫ್ಓ ಅವರೊಂದಿಗೆ ಚರ್ಚಿಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗುವುದು ಎಂದರು. ಸಕಲೇಶಪುರ ಭಾಗದಿಂದ 32 ಆನೆಗಳು ಬಂದಿವೆ. ಅವುಗಳು ಈಗಾಗಲೇ ಬ್ಯಾರಿಕೇಡ್ ಅಳವಡಿಸಿರುವ ಪ್ರದೇಶವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಹೀಗಾಗಿ ತೊಂದರೆಯಾಗುತ್ತಿದೆ. ಈ ಕುರಿತು ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

Chikkamagaluru: ಅಕ್ರಮ ಭೂ ಮಂಜೂರು ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರೂ ಪ್ರಯೋಜವಿಲ್ಲ!

ಚುನಾವಣೆ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕ್ಷೇತ್ರಕ್ಕೆ: ಶಾಸಕಿ ನಯನ ಮೋಟಮ್ಮ ತೆಲಂಗಾಣ ರಾಜ್ಯದ ಚುನಾವಣೆ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಂಜೆ  ಹೊತ್ತಿಗೆ ಗೌಡಹಳ್ಳಿಗೆ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.ಈ ಭಾಗದ ಮೂರು ಆನೆಗಳನ್ನು ಹಿಡಿದು ಸಾಗಿಸಲು ಕ್ರಮ ವಹಿಸಲಾಗುವುದು, ಶಾಸನ ಸಭೆಯಲ್ಲಿ ಕಾಡಾನೆ ಹಾವಳಿ ವಿಚಾರವನ್ನು ಪ್ರಸ್ತಾಪ ಮಾಡಿ ಶಾಶ್ವತ ಪರಿಹಾರ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿದ್ದರು.

Latest Videos
Follow Us:
Download App:
  • android
  • ios