ಆನೇಕಲ್‌ (ಡಿ.01): ತಾಲೂಕಿನ ಹಳೇ ಚಂದಪುರ ಸಮೀಪದ ಕಾರ್ಲಾರ್‌ ನಗರದ ಬಡಾವಣೆಯಲ್ಲಿ ಕಂಡ ಜೋಡಿ ಕಾಡೆಮ್ಮೆಗಳ ಪೈಕಿ ಒಂದನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು, ಕತ್ತಲಾದ ಕಾರಣ ಮತ್ತೊಂದನ್ನು ನಾಳೆ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಕೃಷ್ಣ ಮಾತನಾಡಿ, ಜೋಡಿ ಕಾಡೆಮ್ಮೆಗಳ ಪೈಕಿ ಒಂದು 4 ವರ್ಷದ ಗಂಡು ಹಾಗೂ 2 ವರ್ಷದ ಹೆಣ್ಣಾಗಿದ್ದು, ಆರೋಗ್ಯವಾಗಿವೆ. ಶನಿವಾರ ಸಂಜೆ ಬನ್ನೇರುಘಟ್ಟಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಮಂಜುನಾಥ್‌ ಅರಿವಳಿಕೆ ನೀಡುವ ಮೂಲಕ ಕಾಡೆಮ್ಮೆಗಳನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಪ್ರಾರಂಭಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎರಡು ಬಾರಿ ನೀಡಿದ ಅರಿವಳಿಕೆ ಸಫಲವಾಗಲಿಲ್ಲ. 3ನೇ ಬಾರಿಗೆ ಶೂಟ್‌ ಮಾಡಿದ ಅರಿವಳಿಕೆ ಕೇವಲ 2 ನಿಮಿಷದಲ್ಲಿ ಹೆಣ್ಣು ಕಾಡೆಮ್ಮೆಯನ್ನು ಕೆಳಕ್ಕೆ ಬೀಳಿಸುವುಲ್ಲಿ ಸಫಲವಾಯಿತು. ಅದನ್ನು ಬನ್ನೇರುಘಟ್ಟಉದ್ಯಾನವನಕ್ಕೆ ಸುರಕ್ಷಿತ ವಾಹನದಲ್ಲಿ ಕರೆತಂದು ಸಸ್ಯಾಹಾರಿ ಸಫಾರಿ ಆವರಣದಲ್ಲಿ ಬಿಡಲಾಗಿದೆ. ಅದಕ್ಕೆ ಪ್ರಾಥಮಿಕ ಶುಶ್ರೂಷೆ ನೀಡಲಾಗಿದೆ. ನೀರು ಆಹಾರ ಸೇವಿಸುತ್ತಿದ್ದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದರು.

ಮತ್ತೊಂದು ಗಂಡು ಕಾಡೆಮ್ಮೆ ಅರಿವಳಿಕೆ ಗುರಿಗೆ ಸಿಗದೇ ತಪ್ಪಿಸಿಕೊಂಡಿದೆ. ನಾಳೆ ಕಾರ್ಯಾಚರಣೆ ಮಾಡಿ, ಸೆರೆ ಹಿಡಿಯುತ್ತೇವೆ. ಸದ್ಯಕ್ಕೆ ಪ್ರಾಣಿಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದ್ದು, ಮತ್ತೊಂದು ತಂಡ ತನಿಖೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.