ಮಂಗಳೂರು(ಏ.29) : ಪ್ರಧಾನಿ ವಿರುದ್ಧ ಜಾಲತಾಣದಲ್ಲಿ ಪತಿ ಪೋಸ್ಟ್‌ ಹಾಕಿದ್ದಕ್ಕೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನಾಮನಿರ್ದೇಶಿತ ಸದಸ್ಯ ಸ್ಥಾನದಿಂದ ನಫೀಸ ಮಿಸ್ರಿಯಾ ಎಂಬಾಕೆಯನ್ನು ಪದಮುಕ್ತಗೊಳಿಸಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿಗೆ ಅವಕಾಶವಿದೆ. ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ದೇಶದ ಪ್ರಧಾನಿ ಬಗ್ಗೆ ಅತ್ಯಂತ ಕಠೋರ ಮತ್ತು ಕಾನೂನಿಗೆ ವಿರುದ್ಧವಾದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪತಿ ಬರೆದಿದ್ದಾರೆ. ದೇಶದ ಪ್ರಧಾನಿಯ ಸಾವನ್ನು ಬಯಸುವವರ ಪತ್ನಿಯು ನಮ್ಮ ಅಕಾಡೆಮಿ ಸದಸ್ಯರಾಗಿ ಸಮಿತಿಯಲ್ಲಿ ಮುಂದುವರಿಯುವುದು ಸರಿಯಲ್ಲ. ಆದ್ದರಿಂದ ತಮ್ಮನ್ನು ತಕ್ಷಣವೇ ಅಕಾಡೆಮಿ ನಾಮನಿರ್ದೇಶಿತ ಸದಸ್ಯತ್ವದಿಂದ ಪದಮುಕ್ತಗೊಳಿಸುವಂತೆ ಅಕಾಡೆಮಿ ಅಧ್ಯಕ್ಷರು ಸಾಕ್ಷಿ ಸಮೇತ ಪತ್ರ ಮೂಲಕ ನಿರ್ದೇಶಿಸಿದ್ದಾರೆ. ಪತ್ರವನ್ನು ಪರಿಶೀಲಿಸಿದಾಗ ಆರೋಪ ಸರಿಯಾಗಿದ್ದು, ಇಂತಹ ಕೃತ್ಯ ಅಕಾಡೆಮಿಗೆ ಶೋಭೆ ತರುವುದಿಲ್ಲ. ಆದ್ದರಿಂದ ತಕ್ಷಣದಿಂದ ಅಕಾಡೆಮಿ ಸದಸ್ಯತ್ವದಿಂದ ಪದಮುಕ್ತಗೊಳಿಸಲಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು : ಪೊಲೀಸ್‌ ಕಮಿಷನರ್‌, ಜೈಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ!

ಪ್ರಧಾನಿ ವಿರುದ್ಧ ನಿಂದನೆ ಪೋಸ್ಟ್‌: ಕ್ರಮಕ್ಕೆ ಪೊಲೀಸ್‌ ದೂರು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಲುಕ್ಮಾನ್‌ ಅಡ್ಯಾರ್‌ ಹೆಸರಿನ ವ್ಯಕ್ತಿ ವಿರುದ್ಧ ಬಿಜೆಪಿ ಮುಖಂಡ ಫಜಲ್‌ ಅಸೈಗೋಳಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

ಲುಕ್ಮಾನ್‌ ಅಡ್ಯಾರ್‌ ಎಂಬ ವ್ಯಕ್ತಿಯೊಬ್ಬ ವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಪ್ರಧಾನಿಯನ್ನು ಏಕ ವಚನದಲ್ಲಿ ಸಂಬೋಧಿಸಿದ್ದರು. ಅಲ್ಲದೆ ಬೀದಿ ಬದಿಯಲ್ಲಿ ನರಕ ಯಾತನೆ ಅನುಭವಿಸಿ ಸಾಯುವಂತಾಗಲು ಪ್ರಾರ್ಥಿಸಬೇಕು ಎಂದು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಮನವಿ ಮಾಡಿ ವಿಕೃತಿ ಮೆರೆದಿದ್ದಾನೆ. ಕೊರೋನಾ ಸಂಕಷ್ಟಕಾಲದಲ್ಲಿ ಪವಿತ್ರ ಮಕ್ಕಾ ಸೇರಿದಂತೆ ವಿಶ್ವದಾದ್ಯಂತ ಭಾರತದ ಒಳಿತಿಗಾಗಿ ಪ್ರಾರ್ಥನೆ ನಡೆಯುತ್ತಿದೆ. ವಿಶ್ವದ ನಾನಾ ರಾಷ್ಟ್ರ ಭಾರತಕ್ಕೆ ಸಹಾಯ ಹಸ್ತ ಚಾಚುತ್ತಿರುವಾಗ ಲುಕ್ಮಾನ್‌ ಅಡ್ಯಾರ್‌ ಎಂಬಾತ ಪವಿತ್ರ ರಂಜಾನ್‌ ತಿಂಗಳಲ್ಲೂ ವಿಷ ಬೀಜ ಸಾಮಾಜಿಕ ಜಾಲತಾಣದಲ್ಲಿ ಬಿತ್ತುತ್ತಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫಝಲ್‌ ಅಸೈಗೋಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.