ಬೆಂಗಳೂರು (ಜ.24):  ನೀರಿನಲ್ಲಿ ವಿಷ ಬೆರೆಸಿ ಕೊಟ್ಟು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೂ ಆದ ಪತಿಯ ವಿರುದ್ಧ ಪತ್ನಿ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

"

ರಾಜರಾಜೇಶ್ವರಿ ನಗರ ನಿವಾಸಿ ಕೆ.ಪಿ.ದೀಪ್ತಿ ಕೊಟ್ಟದೂರಿನ ಮೇರೆಗೆ ಕೆಎಎಸ್‌ ಅಧಿಕಾರಿ ಜಿ.ಟಿ.ದಿನೇಶ್‌ ಕುಮಾರ್‌ (38) ಮತ್ತು ಇವರ ಅತ್ತಿಗೆ ರಮ್ಯಾ (34) ಎಂಬುವರ ವಿರುದ್ಧ ರಾಜರಾಜೇಶ್ವರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿ ಕೊಟ್ಟದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿ ಕೋಣೆ, ಚಂದದ ಹುಡುಗಿ, ಮಸಾಜ್‌ಗೆಂದು ಹೋದ, ಕೋಣೆಯಲ್ಲಿ ನಡೆದ ಆಟವೇ ಬೇರೆ..!

ಕೆ.ಪಿ.ದೀಪ್ತಿ ಅವರು 2015ರಲ್ಲಿ ದಿನೇಶ್‌ ಕುಮಾರ್‌ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರಸ್ತುತ ದಿನೇಶ್‌ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದಾರೆ. ಮದುವೆ ಸಂದರ್ಭದಲ್ಲಿ ಪತಿಗೆ ಒಂದು ಕೆ.ಜಿ.ಚಿನ್ನಾಭರಣ ಮತ್ತು ಐದು ಕೆ.ಜಿ.ಬೆಳ್ಳಿ ಸಾಮಾನು ನೀಡಲಾಗಿತ್ತು. ಮೊದಲು ಚೆನ್ನಾಗಿದ್ದ ಪತಿ ಇತ್ತೀಚೆಗೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಮಕ್ಕಳಿಗೆ ಏನಾದರೂ ತಂದು ಕೊಡುವಂತೆ ಕೇಳಿದರೆ, ನಿಮ್ಮ ತಂದೆ ಮನೆಯಿಂದ ತಂದು ಕೊಡು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಲ್ಲದೆ, ಪತಿ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಬೇರೆ ಯುವತಿಯರ ಜತೆ ಪತಿ ಹೆಚ್ಚು ಸಂಪರ್ಕದಲ್ಲಿರುವ ಬಗ್ಗೆ ಪ್ರಶ್ನೆ ಮಾಡಿದರೆ ಮನೆ ಬಿಟ್ಟು ಹೋಗುವಂತೆ ಬೆದರಿಕೆವೊಡ್ಡುತ್ತಾರೆ ಎಂದು ದೂರಿದ್ದಾರೆ.

ಕೆಲ ದಿನಗಳಿಂದ ನಾನು ಆರ್‌.ಆರ್‌.ನಗರದಲ್ಲಿರುವ ತಂದೆ ಮನೆಯಲ್ಲಿ ನೆಲೆಸಿದ್ದೇನೆ. ಶುಕ್ರವಾರ ರಾತ್ರಿ 9ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪತಿ ಮನೆಗೆ ಬಂದಿದ್ದರು. ‘ನೀನು ಯಾವಾಗಲೂ ಸುಸ್ತು ಎಂದು ಹೇಳುತ್ತೀಯ’ ಅದಕ್ಕಾಗಿ ನೀರಿನಲ್ಲಿ ಪಿಪಿಎ ಪೌಡರ್‌ ಹಾಕಿದ್ದೇನೆ ಎಂದು ಕುಡಿಸಿದ್ದರು. ನೀರು ಕುಡಿದು ಸ್ವಲ್ಪ ಸಮಯದ ಬಳಿಕ ನನಗೆ ತಲೆ ತಿರುಗಿದಂತೆ ಆಗಿತ್ತು. ಕೂಡಲೇ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ತಾಯಿ ಮತ್ತು ಸಂಬಂಧಿಕರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನನ್ನನ್ನು ಹತ್ಯೆ ಮಾಡುವ ಉದ್ದೇಶದಿಂದ ಪತಿ ನೀರಿನಲ್ಲಿ ವಿಷ ಬೆರೆಸಿಕೊಟ್ಟಿದ್ದರು ಎಂದು ಆರೋಪಿಸಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.