ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಗಂಡ ಜನಾಂಗಕ್ಕೆ ನೀಡುವ ವಿಧವಾ ವಿವಾಹ ಪ್ರೋತ್ಸಾಹ ಹಣವನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಂಡ ಜಾಲದ ಬಗ್ಗೆ ವರದಿ ಬೆನ್ನಲ್ಲೇ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ.

ಚಿಕ್ಕಬಳ್ಳಾಪುರ (ಸೆ.27) : ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಗಂಡ ಜನಾಂಗಕ್ಕೆ ನೀಡುವ ವಿಧವಾ ವಿವಾಹ ಪ್ರೋತ್ಸಾಹ ಹಣವನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ Üಮಾಡಿಪಡಿಸಿಕೊಳ್ಳುತ್ತಿರುವ ಜಾಲ ಪತ್ತೆ ಆಗಿರುವ ಬೆನ್ನಲೇ ಈ ಕುರಿತು ದೂರು ದಾಖಲಿಸಿಕೊಂಡಿರುವ ಚಿಂತಾಮಣಿ ನಗರ ಠಾಣೆ ಪೊಲೀಸರು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಹಸು ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಜೊತೆಗೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಇಬ್ಬರನ್ನು ಪೋಟೋ ತೆಗೆದು ಚಿಂತಾಮಣಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇಬ್ಬರಿಗೂ ಮರು ವಿವಾಹ ಆಗಿರುವ ಕುರಿತು ಕಾನೂನು ಬಾಹಿರವಾಗಿ ಪ್ರಮಾಣ ಪತ್ರ ಮಾಡಿಸಿ ಸಮಾಜ ಕಲ್ಯಾಣ ಇಲಾಖೆಗೆ ವಿಧವಾ ವಿವಾಹ ಪ್ರೋತ್ಸಾಹ ಹಣ ಪಡೆಯಲು ದಾಖಲೆಗಳನ್ನು ಸಲ್ಲಿಸಿ ಹಣ ಗುಳಂಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತ.

ಆರೋಪಿಗಳು ನಾಪತ್ತೆ: ನಕಲಿ ದಾಖಲೆಗಳ ಮೂಲಕ ವಿಧವಾ ವಿವಾಹ ಪ್ರೋತ್ಸಾಹ ಹಣ ಗುಳಂ ಮಾಡುತ್ತಿದ್ದ ಅಸಾಮಿಗಳ ವಿರುದ್ಧ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಶ್ರೀನಿವಾಸಪುರ ಮೂಲದ ವ್ಯಕ್ತಿಗಳು ನಾಪತ್ತೆ ಆಗಿದ್ದು ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಚಿಂತಾಮಣಿ ನಗರ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ರಂಗಶಾಮಯ್ಯ ಕನ್ನಡಪ್ರಭಗೆ ತಿಳಿಸಿದರು.

ವಿಧವಾ ವಿವಾಹ ಹೆಸರಲ್ಲಿ ಹಣ ಗುಳುಂ; ಪೋಟೊ ನೋಡಿ ಅಧಿಕಾರಿಗಳು ಗಾಬರಿ

ಗಮನ ಸೆಳೆದಿದ್ದ ಕನ್ನಡಪ್ರಭ ವರದಿ

ಈ ಕುರಿತು ಸೆ.26 ರಂದು ಸೋಮವಾರ ಕನ್ನಡಪ್ರಭ ಕೋಲಾರ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ವಿಧವಾ ವಿವಾಹ ಹೆಸರಲ್ಲಿ ಹಣ ಗುಳಂ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದೀಗ ಚಿಂತಾಮಣಿ ನಗರ ಠಾಣೆ ಪೊಲೀಸರು ಜಾಲದಲ್ಲಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ನಕಲಿ ವಿವಾಹ ಪ್ರಮಾಣ ಪತ್ರ ನೀಡಿರುವ ಚಿಂತಾಮಣಿ ಉಪ ನೋಂದಣಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ನೋಟಿಸ್‌ ನೀಡಿದ್ದು, ಸಾಕಷ್ಟುಕುತೂಹಲ ಕೆರಳಿಸಿದೆ.