ಕಲಬುರಗಿ: ಹೀಗೆ ಬಂದು ಹಾಗೆ ಹೋದ ಸಂಸದ ಜಾಧವ್, ಕಾಟಾಚಾರದ ಭೇಟಿ
ಬಂದ ಪುಟ್ಟ ಹೋದ ಪುಟ್ಟನಂತಾದ ಸಂಸದರ ಗ್ರಾಮಸಭೆ, ಸಭೆಯಲ್ಲಿ ಅಧಿಕಾರಿಗಳ ಗೈರು
ಚವಡಾಪುರ(ಸೆ.15): ಸಂಸದ ಡಾ. ಉಮೇಶ ಜಾಧವ ಅವರು ಅಫಜಲ್ಪುರ ತಾಲೂಕಿನ 28 ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲು ಬಂದು ಹೀಗೆ ಬಂದು ಹಾಗೆ ಹೋದ ಘಟನೆ ನಡೆಯಿತು. ಅಫಜಲ್ಪುರ ತಾಲೂಕಿನ ಬಳೂರ್ಗಿಯಿಂದ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲು ಬಂದ ಸಂಸದರು ಅರ್ಧ ಗಂಟೆಗೂ ಹೆಚ್ಚು ಹೊತ್ತು ನಿಲ್ಲದೆ ಜನರ ಸಮಸ್ಯೆಗಳನ್ನು ತರಾತುರಿಯಲ್ಲಿ ಆಲಿಸಿ ಹೋಗಿದ್ದಾರೆ. ಸಂಸದರ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಂತರ ಬಡದಾಳ ಗ್ರಾಮಕ್ಕೆ ಭೇಟಿ ನೀಡಿ ಬುದ್ದ ನಗರದಲ್ಲಿ ಮಳೆ ನೀರಿನಿಂದ ಹಾನೀಗಿಡಾದ ಪ್ರದೇಶವನ್ನು ವಿಕ್ಷಣೆ ಮಾಡಿದರು. ಈ ವೇಳೆ ಬಡಾವಣೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಸಂಸದರಿಗೆ ಮನವರಿಕಗೆ ಮಾಡಿದರು.
ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಅಧ್ಯಕ್ಷ ರಾಹುಲ್ ದೊಡ್ಮನಿ, ಮುಖಂಡರಾದ ನಾಗೇಶ ಭತ್ತಾ, ಮಹಾಂತೇಶ ಬಡದಾಳ, ರಾಜಶೇಖರ ಜಮಾಣಿ, ಸಂತೋಷ ಹೂಗಾರ, ಬಸು ಹಳ್ಳಿ, ಶೇಖರ ಸಿಂಗೆ ಗ್ರಾಮದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
KALABURAGI FLOODS: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವತಿ ಶವ ಪತ್ತೆ
ಗ್ರಾಮಸ್ಥರ ಮನವಿ ಸ್ವಿಕರಿಸಿದ ಸಂಸದರು ಗ್ರಾಮದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮೊದಲು ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೆ ಸರ್ಕಾರ ಇರುವುದರಿಂದ ಬೆಳೆ ಪರಿಹಾರದ ಕುರಿತು ಹೆಚ್ಚಿನ ಪರಿಹಾರ ಕೊಡಿಸುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಮಾಜಿ ಶಾಸಕರ ಸಭೆಯಲ್ಲಿ ಅಧಿಕಾರಿಗಳು, ಸಂಸದರ ಸಭೆಯಲ್ಲಿ ಅಧಿಕಾರಿಗಳ ಗೈರು:
ಸಂಸದರ ಗ್ರಾಮ ಸಭೆ ತಾಲೂಕಿನ ದೇವಲ ಗಾಣಗಾಪೂರದಿಂದ ಆರಂಭವಾಗಬೇಕಾಗಿತ್ತು. ಆದರೆ ಸಂಸದರು ಚಿಂಚೋಳಿ ತಾಲೂಕಿಗೆ ಹೋಗಿದ್ದರಿಂದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರೇ ಗ್ರಾಮ ಸಭೆಯನ್ನು ಮುನ್ನಡೆಸಿದರು. ಮಾಜಿ ಸಚಿವರ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇದ್ದರು. ಆದರೆ ಸಂಸದರು ನಡೆಸಿದ ಗ್ರಾಮಸಭೆಯಲ್ಲಿ ತಾ.ಪಂ ಇಒ ರಮೇಶ ಸುಲ್ಪಿ, ಕಂದಾಯ ಇಲಾಖೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒ ಹೊರತು ಪಡಿಸಿ ತಾಲೂಕು ಮಟ್ಟದ ಯಾವ ಅಧಿಕಾರಿಗಳು ಇರಲಿಲ್ಲ. ಹೀಗಾಗಿ ಸಂಸದರ ಗ್ರಾಮ ಸಭೆಗೆ ಅಧಿಕಾರಿಗಳ ಗೈರು ಕಂಡು ಬಂತು. ಈ ಸಂದರ್ಭದಲ್ಲಿ ಬಡದಾಳ, ಅರ್ಜುಣಗಿ ಗ್ರಾಮಸ್ಥರು ಇದ್ದರು.