ಪೌರತ್ವ ಕಾಯ್ದೆ: ಬಿಜೆಪಿ ರಾಜ್ಯಗಳಲ್ಲೇ ಹಿಂಸಾಚಾರ ಯಾಕೆ..?
ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂನೊಂದಿಗೆ ಅಲ್ಲಾಹೋ ಅಕ್ಬರ್ ಎರಡೂ ಘೋಷಣೆ ಕೂಗಿದ ಇತಿಹಾಸ ದೇಶಕ್ಕಿದೆ. ಆದರೆ ಸ್ವಾತಂತ್ರ್ಯ ಹೋರಾಟದ ವಿರುದ್ಧವೇ ಸಂಚು ನಡೆಸಿದವರು ಇಂದು ದೇಶ ಒಡೆಯಲು ಹೊರಟಿದ್ದಾರೆ ಎಂದು ಹೋರಾಟಗಾರ ಶಿವಸುಂದರ್ ಹೇಳಿದ್ದಾರೆ.
ಮಂಗಳೂರು(ಜ.16): ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂನೊಂದಿಗೆ ಅಲ್ಲಾಹೋ ಅಕ್ಬರ್ ಎರಡೂ ಘೋಷಣೆ ಕೂಗಿದ ಇತಿಹಾಸ ದೇಶಕ್ಕಿದೆ. ಆದರೆ ಸ್ವಾತಂತ್ರ್ಯ ಹೋರಾಟದ ವಿರುದ್ಧವೇ ಸಂಚು ನಡೆಸಿದವರು ಇಂದು ದೇಶ ಒಡೆಯಲು ಹೊರಟಿದ್ದಾರೆ ಎಂದು ಹೋರಾಟಗಾರ ಶಿವಸುಂದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಈಗ ಬಿಜೆಪಿ ಇರುವ ರಾಜ್ಯಗಳಲ್ಲಿ ಮಾತ್ರ ಸಿಎಎ ವಿರುದ್ಧದ ಹೋರಾಟದಲ್ಲಿ ಹಿಂಸಾಚಾರ ನಡೆದಿದ್ದೇಕೆ? ಪೊಲೀಸರು ದೇಶದ ಸಂವಿಧಾನಕ್ಕಿಂತ ನಾಗಪುರ, ಕಲ್ಲಡ್ಕ ಸಂವಿಧಾನದಿಂದ ಆದೇಶ ಪಡೆದಿದ್ದೇ ಹೀಗಾಗಲು ಕಾರಣ. ಪ್ರಧಾನಮಂತ್ರಿಯಿಂದ ಹಿಡಿದು ಪೊಲೀಸರವರೆಗೆ ಎಲ್ಲರೂ ಜನರ ಸೇವಕರು. ಜನರೇ ಈ ದೇಶದ ಮಾಲೀಕರು. ಶಾಸಕಾಂಗ, ಪೊಲೀಸ್ ಇಲಾಖೆ ಸಂವಿಧಾನಕ್ಕೆ ಉತ್ತರದಾಯಿಗಳಾಗಿ ಎಂದು ಆಗ್ರಹಿಸಿದ್ದಾರೆ.
CAA ವಿರುದ್ಧ ಶಾಂತಿಯುತ ಕಿಚ್ಚು, 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ ಸಮಾವೇಶ ಹೀಗಿತ್ತು..!
ಎನ್‌ಆರ್‌ಸಿ ಮುಸ್ಲಿಮರಿಗೆ ಪೌರತ್ವ ನಿರಾಕರಿಸುವ ಕಾಯ್ದೆ. ಬೇರೆ ದೇಶಗಳಲ್ಲಿ ಧಾರ್ಮಿಕ ದಮನಕ್ಕೆ ಒಳಗಾಗಿ ಬರುವ ಹಿಂದೂಗಳಿಗೆ ಬಾಗಿಲು ತೆರೆಯಲಿ. ಆದರೆ ಅದೇ ರೀತಿ ದಮನಕ್ಕೆ ಒಳಗಾಗಿ ಬರುವ ಮುಸ್ಲಿಮರಿಗೆ ಏಕೆ ಬಾಗಿಲು ಮುಚ್ತೀರಿ ಎಂದು ಪ್ರಶ್ನಿಸಿದ ಶಿವಸುಂದರ್, ಮಂಗಳೂರಿನಲ್ಲಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸಾವಿಗೆ ಇವರು ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಜನಾಂದೋಲನಕ್ಕೆ ಕರೆ:
ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಸರ್ಕಾರ ಪೊಲೀಸ್ ಇಲಾಖೆಗೆ ನೀಡಿದ ಕೋವಿಯಿಂದ ಗುಂಡು ಹಾರಿಸಿ ಜನರನ್ನು ಕೊಂದರೆ ನಿಮ್ಮನ್ನು ಕ್ಷಮಿಸಲಾಗದು. ಒಬ್ಬನೇ ಒಬ್ಬ ಮುಸ್ಲಿಮನನ್ನು ದೇಶ ಬಿಟ್ಟು ಹೊರಗೆ ಕಳುಹಿಸಲು ನಾವು ಬಿಡುವುದಿಲ್ಲ. ಬ್ರಿಟಿಷರ ಕುಟಿಲ ನೀತಿಗಳನ್ನು ಜಾರಿಗೊಳಿಸುವವರನ್ನು ದೇಶದಿಂದ ಹೊರಗಟ್ಟಬೇಕಾಗಿದೆ. ಹಳ್ಳಿ ಹಳ್ಳಿಗೆ ತೆರಳಿ ಈ ಮಾರಕ ಕಾಯ್ದೆ ವಿರುದ್ಧ ಜನಜಾಗೃತಿ ರೂಪಿಸಿ ಜನಾಂದೋಲನ ಮೂಡಿಸಬೇಕಾಗಿದೆ. ಹಿಂದೂ- ಮುಸ್ಲಿಮರು ಜತೆಯಾಗಿಯೇ ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಮಂಗಳೂರು ಸಮಾವೇಶ: ಹಕ್ಕೊತ್ತಾಯಗಳೇನೇನು..?
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಖಾಜಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಜಿ ಅಲ್‌ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಉಳ್ಳಾಲ ಖಾಜಿ ಸೈಯದ್ ಫಝಲ್ ಕೋಯಮ್ಮ ತಂಗಳ್, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಶಾಸಕ ಯು.ಟಿ. ಖಾದರ್, ಎಂಎಲ್ಸಿಗಳಾದ ಹರೀಶ್ ಕುಮಾರ್, ಬಿ.ಎಂ. ಫಾರೂಕ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಜೆ.ಆರ್. ಲೋಬೊ, ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಬಿ.ಎಂ. ಮುಮ್ತಾಜ್ ಅಲಿ, ಸೈಯದ್ ಅಹ್ಮದ್ ಬಾಷಾ ತಂಗಳ್, ಮುಹಮ್ಮದ್ ಹನೀಫ್, ಖಾಸಿಮ್ ಅಹ್ಮದ್ ಎಚ್.ಕೆ., ಮನ್ಸೂರ್ ಅಹ್ಮದ್ ಅಝಾದ್, ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ನೇರ ಪ್ರಸಾರಕ್ಕೆ ಅಡ್ಡಿ ಸಮಾವೇಶದಲ್ಲಿ ಸುವರ್ಣ ನ್ಯೂಸ್ ಹಾಗೂ ಟಿವಿ 9ದೃಶ್ಯ ಮಾಧ್ಯಮ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ನೇರ ಪ್ರಸಾರಕ್ಕೆ ಆಗಮಿಸಿದ ಚಾನೆಲ್‌ನ ವ್ಯಾನ್‌ಗೆ ತಡೆ ಒಡ್ಡಲಾಯಿತು.