ಕೊಪ್ಪಳ: ಆಂಧ್ರ, ತೆಲಂಗಾಣಕ್ಕಿಲ್ಲದ ನೀರಿನ ಗೋಳು, ರಾಜ್ಯಕ್ಕೆ ಏಕೆ?

ರೈತರ ಕಣ್ಣಿಗೆ ಅಧಿಕಾರಿಗಳು ಮಣ್ಣೆರಚಿದರೇ?| ತುಂಗಭದ್ರಾ ಬೋರ್ಡ್‌ ಜಲಾಶಯದ ನೀರನ್ನು ನಿರ್ವಹಣೆ ಮಾಡುತ್ತದೆ| ಅದು ಹಂಚಿಕೆ ಮಾಡಿದ ನೀರನ್ನು ಮಾತ್ರ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ರಾಜ್ಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆ ಮಾಡುತ್ತದೆ| ಹೀಗಾಗಿಯೇ ರಾಜ್ಯಕ್ಕೆ ಪ್ರತಿ ವರ್ಷವೂ ಅನ್ಯಾಯವಾಗುತ್ತಲೇ ಇದೆ| 

Why Karnataka Always Faces Water Problems in TunbaBhadra Dam

ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.30): ಕಳೆದೈದು ವರ್ಷಗಳಿಂದ ತುಂಗಭದ್ರಾ ಜಲಾಶಯದ ರಾಜ್ಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ಅಭಾವದಿಂದ ಎರಡನೇ ಬೆಳೆ ಬಂದಿಲ್ಲ. ಆದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ವ್ಯಾಪ್ತಿಯಲ್ಲಿ ಮಾತ್ರ ನೀರಿನ ಸಮಸ್ಯೆಯಾಗುತ್ತಲೇ ಇಲ್ಲ. ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ರಾಜ್ಯದ ರೈತರಿಗೆ ನೀರಿನ ಬವಣೆ ತಪ್ಪಿಲ್ಲ. ರಾಜ್ಯದಲ್ಲಿಯೇ ಜಲಾಶಯವಿದ್ದರೂ ಇಲ್ಲಿನ ರೈತರು ಎರಡನೇ ಬೆಳೆಗೆ ನೀರು ಪಡೆಯಲು ಪರದಾಡುವಂತೆ ಆಗಿದೆ.

ತುಂಗಭದ್ರಾ ಬೋರ್ಡ್‌ ಜಲಾಶಯದ ನೀರನ್ನು ನಿರ್ವಹಣೆ ಮಾಡುತ್ತದೆ. ಅದು ಹಂಚಿಕೆ ಮಾಡಿದ ನೀರನ್ನು ಮಾತ್ರ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ರಾಜ್ಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆ ಮಾಡುತ್ತದೆ. ಹೀಗಾಗಿಯೇ ರಾಜ್ಯಕ್ಕೆ ಪ್ರತಿ ವರ್ಷವೂ ಅನ್ಯಾಯವಾಗುತ್ತಲೇ ಇದೆ. ಕೇಂದ್ರ ಜಲ ನೀತಿಯ ಪ್ರಕಾರ ಎರಡು ರಾಜ್ಯಗಳು ನೀರು ಬಳಕೆ ಮಾಡಿಕೊಳ್ಳುವ ಜಲಾಶಯಗಳ ಬೋರ್ಡಿಗೆ ಆ ಎರಡು ರಾಜ್ಯಕ್ಕೆ ಸಂಬಂಧಿಸದವರ ನೇಮಕವಾಗಬೇಕು. ಆದರೆ, ತುಂಗಭದ್ರಾ ಬೋರ್ಡ್‌ಗೆ ಕಳೆದ ಐದು ವರ್ಷಗಳಿಂದಲೂ ಆಂಧ್ರದವರೇ ಕಾರ್ಯದರ್ಶಿ ಮತ್ತು ಚೇರಮನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದ ನೀರಾವರಿ ಸಲಹಾ ಸಮಿತಿ ಮತ್ತು ಸರ್ಕಾರವನ್ನು ಲೆಕ್ಕಿಸದೆ ಬೋರ್ಡ್‌ ತನಗೆ ತೋಚಿದ್ದನ್ನು ಮಾಡುತ್ತಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯದ ನೀರಾವರಿ ಸಲಹಾ ಸಮಿತಿ ಕೇಳದೆ ಬೋರ್ಡ್‌ ಕಾಲುವೆಗಳಿಗೆ ಮೀಟರ್‌ ಅಳವಡಿಸಿದೆ. ಬೋರ್ಡ್‌ ಪ್ರತಿ ವರ್ಷವೂ ಆಂಧ್ರಕ್ಕೆ ಹೆಚ್ಚಿನ ನೀರು ಹರಿದು ಹೋಗುವಂತೆ ನೋಡಿಕೊಳ್ಳುತ್ತಿದೆ. ಇದಲ್ಲದೆ ಮಳೆಗಾಲದಲ್ಲಿ ಹರಿದು ಹೋಗುವ ನೀರು ಸಂಗ್ರಹಿಸಿಟ್ಟುಕೊಳ್ಳಲು ಬ್ಯಾರೇಜ್‌ ನಿರ್ಮಿಸಿಕೊಂಡಿದ್ದಾರೆ. ರಾಜ್ಯದಲ್ಲಿಯೂ ನಿರ್ಮಾಣ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕು 30 ವರ್ಷವಾದರು ಹಣಕಾಸಿನ ತೊಂದರೆಯಿಂದ ನಿರ್ಮಾಣವಾಗುತ್ತಿಲ್ಲ.

ಕಣ್ಣಿಗೆ ಮಣ್ಣು:

ಈ ನಡುವೆ ತುಂಗಭದ್ರಾ ಕಾಡಾ ಕಚೇರಿ ಅಧಿಕಾರಿಗಳು ರಾಜ್ಯದ ರೈತರ ಕಣ್ಣಿಗೆ ಮಣ್ಣೆರಚಿದ್ದಾರೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಏಪ್ರಿಲ್‌ 30ರ ವರೆಗೂ ಕಾಲುವೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದರೂ ನೀರಾವರಿ ಸಲಹಾ ಸಮಿತಿಯಲ್ಲಿ ಎಡದಂಡೆ ನಾಲೆಗೆ ಮಾಚ್‌ರ್‍ 31ರ ವರೆಗೆ ಮಾತ್ರ ನೀರು ಬಿಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಹೋರಾಟ ಪ್ರಾರಂಭಿಸಿದ್ದರಿಂದ ನಂತರ ಪ್ರಕಟಣೆಯೊಂದನ್ನು ನೀಡಿ ಏ. 10ರ ವರೆಗೂ ನೀರು ಬಿಡಲಾಗುತ್ತದೆ ಎಂದಿದ್ದಾರೆ. ಕುಡಿಯುವ ನೀರಿಗಾಗಿ ಏ.10ರಿಂದ 30ರ ವರೆಗೂ ನೀರು ಬಿಡಲು ತೀರ್ಮಾನಿಸಲಾಗಿದೆ. ಈಗ ಅದೇ ನೀರನ್ನು ಏಪ್ರಿಲ್‌ 1ರಿಂದ 10ರ ವರೆಗೂ ನೀಡುವ ಹೇಳಿಕೆ ನೀಡಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ನೀರಿನ ದಿನಾಂಕ ಬದಲಾಯಿಸುವ ಮೂಲಕ ಅಧಿಕಾರಿಗಳು ರೈತರ ಕಣ್ಣಿಗೆ ಮಣ್ಣೆರಚಿದ್ದಾರೆ.

ಯಾರು ಹೊಣೆ:

ಕಳೆದ 15 ವರ್ಷದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹದ ಲೆಕ್ಕಾಚಾರ ನೋಡಿದರೆ ಇದೇ ಮೊದಲ ಬಾರಿ ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಪ್ರಸಕ್ತ ವರ್ಷವೂ ಎರಡನೇ ಬೆಳೆಗೆ ಅಗತ್ಯವಾಗಿರುವಷ್ಟುನೀರು ಕೊಡದಿದ್ದರೆ ಹೇಗೆ? ಇದಕ್ಕೆ ಯಾರು ಹೊಣೆ? ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಕಣ್ಣಿಗೆ ಎಣ್ಣೆ ಹಾಕಿಕೊಂಡು ರಾತ್ರಿ ನೀರು ಹಾಯುಸುತ್ತಾ ಬೆಳೆ ಬೆಳೆಯುತ್ತಿದ್ದೇವೆ. ಆದರೆ, ತುಂಗಭದ್ರಾ ಜಲಾಶಯ ಭರ್ತಿಯಾದರೂ ಸಹ ಎರಡನೇ ಬೆಳೆಗೆ ಅಗತ್ಯ ನೀರು ಕೊಡದಿದ್ದರೆ ಹೇಗೆ? ಈಗ ನಿಗದಿ ಮಾಡಿರುವ ನೀರಿನ ಪ್ರಮಾಣದ ಲೆಕ್ಕಚಾರದಲ್ಲಿ ರಾಯಚೂರು ಜಿಲ್ಲೆಯ ಅಂಚುಪ್ರದೇಶದ ರೈತರಿಗೆ ನೀರೇ ಸಿಗುವುದಿಲ್ಲ ಎಂದು ರೈತ ಹೋರಾಟಗಾರ ಚಾಮರಸ ಪಾಟೀಲ ಅವರು ಹೇಳಿದ್ದಾರೆ. 

ನೀರು ಬಿಡುವ ಸಮಯವನ್ನಷ್ಟೇ ಬದಲಾಯಿಸಲಾಗಿದೆ. ಏಪ್ರಿಲ್‌ 10ರಿಂದ 20ರ ವರೆಗೂ ಕುಡಿಯುವ ನೀರಿಗಾಗಿ ಬಿಡುವ ನೀರನ್ನೇ ಕೃಷಿಗೆ ಅನುಕೂಲವಾಗಲಿ ಎಂದು ಏ. 1ರಿಂದ 10 ವರೆಗೂ ಬಿಡುವ ಮೂಲಕ ಎಡದಂಡೆ ನಾಲೆಗೆ ಏ. 10ರ ವರೆಗೂ ನೀರು ಕೊಡುತ್ತಿದ್ದೇವೆ ಎಂದು ತುಂಗಭದ್ರಾ ಕಾಡಾ ಸಿಇ ಮಂಜಪ್ಪ ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios