ಕೊರೋನಾ ಹೆಚ್ತಿದ್ರೂ ಎಲೆಕ್ಷನ್ ಏಕೆ ಮುಂದೂಡಲಿಲ್ಲ?: ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ನಡವಳಿಕೆ| ಅವೈಜ್ಞಾನಿಕ ನಡವಳಿಕೆಯಿಂದ ಸೋಂಕು ಉಲ್ಬಣ| ಕಾಂಗ್ರೆಸ್ನಿಂದ ಪಕ್ಷಾಂತರವೆಂಬ ಕುತಂತ್ರ ರಾಜಕಾರಣ| ರಾಮನಗರ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಹಾಗೂ ಜನರೊಂದಿಗಿನ ಬಾಂಧವ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ: ಕುಮಾರಸ್ವಾಮಿ|
ರಾಮನಗರ(ಏ.13): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗತಿ ಪಡೆಯುತ್ತಿರುವ ಆತಂಕದ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಲೋಕಸಭೆ, ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಏಕೆ ಮುಂದೂಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಚುನಾವಣೆ ಆಕಾಂಕ್ಷಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡವಳಿಕೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ಕೊರೋನಾ ಸೋಂಕು ಉಲ್ಬಣಗೊಳ್ಳಲು ಕಾರಣವೆಂದು ಟೀಕಿಸಿದರು. ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಹೀಗಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಲೋಕಸಭೆ, ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿ ಸಹಸ್ರಾರು ಜನರು ಸೇರುತ್ತಿದ್ದಾರೆ. ಇಂತಹ ಆತಂಕದ ಸಂದರ್ಭದಲ್ಲಿ ಚುನಾವಣೆ ಏಕೆ ಘೋಷಣೆ ಮಾಡಬೇಕಾಗಿತ್ತು ಎಂದು ಪ್ರಶ್ನೆ ಮಾಡಿದರು.
ಅನಿತಾ ಕುಮಾರಸ್ವಾಮಿ ದೌರ್ಬಲ್ಯ ಲಾಭ ಪಡೆದ ನಾಯಕರು : ಉತ್ಸಾಹದಲ್ಲಿ ಕಮಲ ಪಾಳಯ
ಸಿಎಂ ಕಾಲಾವಕಾಶ ಕೇಳಲಿ:
ಮುಷ್ಕರನಿರತ ಸಾರಿಗೆ ನೌಕರರ ವಿಚಾರದಲ್ಲಿ ರಾಜ್ಯ ಸರ್ಕಾರ ಬಿಗಿ ಧೋರಣೆ ಅನುಸರಿಸುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರವರು ನೌಕರರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಅವರೊಂದಿಗೆ ಗೌರವಯುತವಾಗಿ ಚರ್ಚಿಸಿ ಕಾಲಾವಕಾಶ ಕೇಳಬೇಕು. ಮುಖ್ಯಮಂತ್ರಿಗಳು ಸಾರಿಗೆ ನೌಕರರೊಂದಿಗೆ ಚರ್ಚಿಸುವ ಸೌಜನ್ಯವನ್ನು ತೋರದೆ ಕಾನೂನಿನ ಮೂಲಕ ಹೆದರಿಸುತ್ತೇವೆ ಎನ್ನುವುದು ಸರಿಯಲ್ಲ. ಈಗ ಯಾರು ಯಾವುದಕ್ಕೂ ಹೆದರುವುದಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಬಿ.ಉಮೇಶ್ , ಸುಗ್ಗನಹಳ್ಳಿ ರಾಮಕೃಷ್ಣ, ಮಹದೇವು ಸೇರಿದಂತೆ ಹಲವರು ಇದ್ದರು.
ಕಾಂಗ್ರೆಸ್ನಿಂದ ಪಕ್ಷಾಂತರವೆಂಬ ಕುತಂತ್ರ ರಾಜಕಾರಣ
ರಾಮನಗರದಲ್ಲಿ ಜೆಡಿಎಸ್ಗೆ ದೊಡ್ಡ ಮಟ್ಟದಲ್ಲಿಯೇ ತೊಂದರೆ ನೀಡುವ ಸಲುವಾಗಿ ಗುಂಪೊಂದು ರಚನೆಯಾಗಿದೆ. ಆ ಗುಂಪಿನ ನಾಯಕರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
'ಕುಮಾರಸ್ವಾಮಿ ನಮ್ಮನ್ನೇ ಏಕೆ ದ್ವೇಷಿಸುತ್ತಾರೆ'
ಪಕ್ಷಾಂತರದ ಹಿಂದೆ ಕುತಂತ್ರ ರಾಜಕಾರಣ ಇರುತ್ತದೆ. ಈಗ ಕಾಂಗ್ರೆಸ್ ನಾಯಕರು ಕುತಂತ್ರ ರಾಜಕಾರಣದಲ್ಲಿ ತೋಡಗಿದ್ದಾರೆ. ಪ್ರತಿನಿತ್ಯ ಆಸೆ ಆಮಿಷವೊಡ್ಡಿ ಪಕ್ಷಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅದೆಲ್ಲವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈಗ ಪಕ್ಷಾಂತರ ಮಾಡಿದವರಿಗೆ ನನ್ನಿಂದಾದ ಅನ್ಯಾಯ ಏನು?. ಅವರೆಲ್ಲರು ನನ್ನಿಂದ ಯಾವ ರೀತಿ ಬೆಳೆದರು, ಏನೆಲ್ಲ ಅನುಕೂಲಗಳನ್ನು ಪಡೆದುಕೊಂಡರು. ನಮ್ಮಿಂದ ಎಲ್ಲವನ್ನು ಪಡೆದು ಬೆನ್ನಿಗೆ ಚೂರಿ ಹಾಕಿ ಹೋಗುವವರನ್ನು ಜನರೂ ಗಮನಿಸುತ್ತಿದ್ದಾರೆ. ಅವರ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.
ರಾಮನಗರದ ಸಮಗ್ರ ಅಭಿವೃದ್ಧಿಗೆ ಜಾತಿ ಬೇಧ ಮರೆತು ಕೆಲಸ ಮಾಡಿದ್ದೇನೆ. ಎಂದೂ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ರಾಮನಗರ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಹಾಗೂ ಜನರೊಂದಿಗಿನ ಬಾಂಧವ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಆ ಮೂಲಕ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಶ್ರಮಿಸುತ್ತೇವೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.