ಅನಿತಾ ಕುಮಾರಸ್ವಾಮಿ ದೌರ್ಬಲ್ಯ ಲಾಭ ಪಡೆದ ನಾಯಕರು : ಉತ್ಸಾಹದಲ್ಲಿ ಕಮಲ ಪಾಳಯ
ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ನಡೆಯುತ್ತಿದ್ದರೆ, ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಮತ್ತಷ್ಟುವೃದ್ಧಿಸಿಕೊಳ್ಳಲು ಹಾತೋರೆಯುತ್ತಿದೆ. ಇನ್ನು ಕಮಲ ಪಾಳಯ ಖಾತೆ ತೆರೆಯುವ ಉತ್ಸಾಹದಲ್ಲಿದೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಏ.06): ನಗರಸಭೆ ಚುನಾವಣೆ ಮೂಲಕ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅಸ್ಥಿರಗೊಳ್ಳುತ್ತಿರುವ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ನಡೆಯುತ್ತಿದ್ದರೆ, ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಮತ್ತಷ್ಟುವೃದ್ಧಿಸಿಕೊಳ್ಳಲು ಹಾತೋರೆಯುತ್ತಿದೆ. ಇನ್ನು ಬಿಜೆಪಿ ಖಾತೆ ತೆರೆಯುವ ಉತ್ಸಾಹದಲ್ಲಿದೆ.
ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ರಾಮನಗರ ನಗರಸಭೆ ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆ ಕಣವಾಗಿದೆ. ಹೀಗಾಗಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ನಾಯಕರು ನಗರ ಸಂಚಾರ ಆರಂಭಿಸಿದ್ದಾರೆ.
ನಗರಸಭೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಪಕ್ಷವೇ ಹೆಚ್ಚು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ನ ಶಕ್ತಿ ದಿನೇ ದಿನೆ ಕುಂದುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಹೀಗಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಸೋಲಿಸಲು ಪ್ಲಾನ್: ಆತಂಕ ವ್ಯಕ್ತಪಡಿಸಿದ ಎಚ್ಡಿಕೆ .
ಶಾಸಕಿ ಅನಿತಾ ದೌರ್ಬಲ್ಯ: ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ ಎರಡೂವರೆ ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ನಡೆದ ಯಾವುದೇ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಶಾಸಕರ ನೇತೃತ್ವದಲ್ಲಿ ಹೇಳಿಕೊಳ್ಳುವಂತಹ ಸಾಧನೆ ತೋರಿಲ್ಲ.
ರಾಮನಗರ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ, ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಸ್ಪಷ್ಟಬಹುಮತ ಹೊಂದಿತ್ತು. ಆದರೂ ಕಾಂಗ್ರೆಸ್ ನಾಯಕರ ತಂತ್ರಗಾರಿಕೆಯಿಂದಾಗಿ ಅಧಿಕಾರ ಕೈ ಪಾಲಾಯಿತು.
ಅಲ್ಲದೆ, ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿಯೂ ಜೆಡಿಎಸ್ ಕಳಪೆ ಸಾಧನೆ ಮಾಡಿದೆ. ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 16 ಗ್ರಾಪಂಗಳ ಪೈಕಿ ಕಾಂಗ್ರೆಸ್- 10, ಜೆಡಿಎಸ್- 3, ಬಿಜೆಪಿ ಮತ್ತು ಜೆಡಿಎಸ್- 1, ಬಿಜೆಪಿ ಮತ್ತು ಕಾಂಗ್ರೆಸ್- 1 ಗ್ರಾಪಂ ಅಧಿಕಾರ ಹಿಡಿದಿದೆ.
ಸಾಲು ಸಾಲು ಚುನಾವಣೆಗಳಲ್ಲಿ ಜೆಡಿಎಸ್ ಸೋಲಿಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡದ ಶಾಸಕಿ ಅನಿತಾ ಅವರ ದೌರ್ಬಲ್ಯದ ಲಾಭವನ್ನು ಕಾಂಗ್ರೆಸ್ ನಾಯಕರು ಪಡೆಯುತ್ತಿದ್ದಾರೆ ಎಂದು ದಳಪತಿಗಳೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜಕೀಯವಾಗಿ ಮೇಲ್ನೋಟಕ್ಕೆ ರಾಮನಗರ ಕ್ಷೇತ್ರ ಜೆಡಿಎಸ್ನ ಭದ್ರಕೋಟೆಯಂತೆ ಕಾಣುತ್ತಿದೆ. ಆದರೆ, ಸಾಂಪ್ರದಾಯಿಕ ಎದುರಾಳಿ ಪಕ್ಷವಾದ ಕಾಂಗ್ರೆಸ್ ನಾಯಕರು ಜೆಡಿಎಸ್ನ ಭದ್ರ ಕೋಟೆಯನ್ನೇ ಅಲುಗಾಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಕಮಲಕ್ಕೆ ಖಾತೆ ತೆರೆಯುವ ಉತ್ಸಾಹ: ಇನ್ನು ಆಡಳಿತರೂಢ ಬಿಜೆಪಿ ನಗರಸಭೆಯಲ್ಲಿ ಖಾತೆ ತೆರೆಯುವ ಉತ್ಸಾದಲ್ಲಿದೆ. ಈಗಾಗಲೇ ಪಕ್ಷದ ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ತೆರಳಿದ್ದಾರೆ. ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ರಾಮನಗರಕ್ಕೆ ಭೇಟಿ ನೀಡಿಲ್ಲ. ಅಶ್ವತ್ಥ ನಾರಾಯಣ ಅವರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಕೆಆರ್ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸುವ ಸಾಧ್ಯತೆಯಿದೆ.
ಡಿಕೆ ಬ್ರದರ್ಸ್ ಬಂದರೆ ಹೆಚ್ಚಲಿದೆ ರಣೋತ್ಸವ : ಈಗ ನಗರಸಭೆ ಚುನಾವಣೆ ಮೂಲಕ ಪಕ್ಷವನ್ನು ಮತ್ತಷ್ಟುಬಲಿಷ್ಠವಾಗಿ ಸಂಘಟಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ಗೆಲ್ಲುವ ಅಭ್ಯರ್ಥಿಗಳನ್ನು ಅಳೆದು ತೂಗಿ ಚುನಾವಣೆ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಅಸ್ಥಿರಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ‘ಕ್ಷೇತ್ರದ ಮೇಲೆ ಕಾಂಗ್ರೆಸ್ ನಾಯಕರ ವಕ್ರ ದೃಷ್ಟಿಬೀರಿದೆ‘ ಎಂದು ನೇರವಾಗಿಯೇ ವಾಗ್ದಾಳಿ ಮಾಡಲು ಆರಂಭಿಸಿದ್ದಾರೆ.
ಅಲ್ಲದೆ, ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹಾಗೂ ಗೆಲುವಿಗಾಗಿ ಬೇಕಾದ ತಂತ್ರಗಳನ್ನು ರೂಪಿಸುವ ಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಇದು ಜೆಡಿಎಸ್ ಕಾರ್ಯಕರ್ತರಲ್ಲಿನ ಹುಮ್ಮಸ್ಸು ಹೆಚ್ಚಾಗುವಂತೆ ಮಾಡಿದೆ.
ಈಗ ಕಾಂಗ್ರೆಸ್ನಲ್ಲಿ ಜಿಲ್ಲಾ ನಾಯಕರು ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸದಲ್ಲಿ ತೊಡಗಿದ್ದು, ಡಿಕೆ ಸಹೋದರರು ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಚುನಾವಣೆಯ ಅಖಾಡಕ್ಕಿಳಿದ ಮೇಲೆ ಕಾರ್ಯಕರ್ತರಲ್ಲಿ ರಣೋತ್ಸವ ಮತ್ತಷ್ಟುಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.