ಮಂಡ್ಯ(ಅ.05): ಮಾಧ್ಯಮಗಳ ಮೇಲೆ ಏಕೆ ನಿಮಗೆ ಕೋಪ. ನಾವೇನು ಮಾಡಿದ್ದೀವಿ ನಿಮಗೆ ಬಹಿರಂಗ ಸಮಾವೇಶಗಳಲ್ಲೇಕೆ ನಮ್ಮನ್ನು ಟಾರ್ಗೆಟ್ ಮಾಡುತ್ತೀರಾ? ಎಂಬ ಪ್ರಶ್ನೆಗೆ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಉತ್ತರಿಸಿದ್ದಾರೆ. 

ಕಾರ್ಯಕರ್ತರನ್ನು ಪ್ರಚೋದಿಸಿ ಹಲ್ಲೆ ಮಾಡಲು ಪ್ರೇರೇಪಣೆ ಮಾಡುವ ತಂತ್ರ ಯಾಕೆ ಎಂಬ ವರದಿಗಾರರ ಪ್ರಶ್ನೆಗಳ ಸುರಿಮಳೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸಮಾಧಾನವಾಗಿಯೇ ಉತ್ತರಿಸಿದರು. ಈ ಎಲ್ಲಾ ಪ್ರಶ್ನೆಗಳಿಗೆ ನೀವು ನಿಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಿ. ನೀವೇಕೆ ನನ್ನನ್ನು ಟಾರ್ಗೆಟ್‌ ಮಾಡುತ್ತಿರಾ? ಮಾಧ್ಯಮಗಳಲ್ಲಿ ನಕಾರಾತ್ಮಕ ಪದೇ ಪದೇ ತೋರಿಸಿ ತೇಜೋವಧೆ ಮಾಡುವ ಹುನ್ನಾರ ಯಾಕೆ ಎಂದು ಪ್ರಶ್ನೆ ಮಾಡಿದರು.

ನಾನು ಸಾಕಷ್ಟುಒಳ್ಳೆಯ ಕೆಲಸ ಮಾಡಿದ್ದೀನಿ:

ನಾನು ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ದಿನದ 24 ಗಂಟೆ ಜನ ಸೇವೆ ಮಾಡಿದ್ದೇನೆ. ನನಗೇನು ಸಿಕ್ಕಿತು?. ಕೇವಲ ಅಪಪ್ರಚಾರ. ಮಾಧ್ಯಮಗಳಿಗೆ ನಾನು ಸಾಕಷ್ಟುಗೌರವ ಕೊಟ್ಟಿದ್ದೇನೆ. ಮಾಧ್ಯಮಗಳ ವರದಿಗಾರರು ಹಾಗೂ ನಮ್ಮ ನಡುವೆ ಕಂದಕ ಸೃಷ್ಟಿಯಾಯಿತು. ನಾನು ಪ್ರತಿ ವಿಷಯಗಳನ್ನು ನೇರವಾಗಿ ಮಾತನಾಡೋನು. ನಿಷ್ಟೂರವಾದಿ ಲೋಕವಿರೋಧಿ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಫೋನ್‌ ಟ್ಯಾಪಿಂಗ್‌ ವಿಷಯದಲ್ಲಿ ನನ್ನನ್ನ ದುರುದ್ದೇಶಪೂರಕವಾಗಿ ಟಾರ್ಗೆಟ್‌ ಮಾಡುತ್ತಿದ್ದಾರೆ. ಕೆಲವರು ನನ್ನ ಬಂಧನವಾಗಿಯೇ ಹೋಯಿತು ಅಂತ ತೋರಿಸುತ್ತಾರೆ. ನನಗೆ ಹೀಗೆ ಕಿರುಕುಳ ಆದರೆ ಕಾರ್ಯಕರ್ತರು ಮನಸ್ಥಿತಿ ಏನಾಗಬೇಕು. ನಾನು ಹಲವು ಬಾರಿ ಹೇಳಿದ್ದೇನೆ ಎಂದಿದ್ದಾರೆ.

ತಪ್ಪೆಲ್ಲಾ ಸಂಪಾದಕರದ್ದು:

ವರದಿಗಾರರದ್ದು ತಪ್ಪಲ್ಲ. ಮಾಧ್ಯಮ ಸಂಪಾದಕರದ್ದು ಎಲ್ಲಾ ತಪ್ಪು . ಅಧಿಕಾರದಿಂದ ಇಳಿದ ಬಳಿಕ ಇದು ನನ್ನ ಮೊದಲ ಸುದ್ದಿಗೋಷ್ಠಿ. ಬೆಂಗಳೂರಿನ ಮಾಧ್ಯಮದವರ ಮುಂದೆ ಮಾತನಾಡೋದು ಬೇಡ ಅಂತ ಮಂಡ್ಯ ಮಾಧ್ಯಮದವರ ಮುಂದೆ ಬಂದೆ ಎಂದು ಹೇಳಿದರು ಕುಮಾರಸ್ವಾಮಿ.