ಕೆ.ಆರ್.ಕ್ಷೇತ್ರದ ತಾವರೆ ಯಾರ ಮುಡಿಗೋ? ‘ಕೈ’ಗೆ ‘ಕಮಲ’ದ ಚಿಂತೆ
ಒಂದು ರೀತಿಯಲ್ಲಿ ಇದು ‘ಅಘೋಷಿತ ಬ್ರಾಹ್ಮಣರ’ ಕ್ಷೇತ್ರ, ಮೈಸೂರಿನ ‘ಬಸವನಗುಡಿ’ ಎಂದೆಲ್ಲಾ ಕರೆಸಿಕೊಳ್ಳುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ ಪಕ್ಷಕ್ಕೆ ‘ಕಮಲ’ದ ಚಿಂತೆ!. ಏಕೆಂದರೆ ಅಲ್ಲಿ ಯಾರಿಗೆ ಟಿಕೆಟ್ ಎಂಬುದರ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಆಖೈರುಗೊಳಿಸಲಿದೆ. ಆದರೆ ಜೆಡಿಎಸ್‌ಗೆ ನಿಶ್ಚಿಂತೆ. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಒಂದು ರೀತಿಯಲ್ಲಿ ಇದು ‘ಅಘೋಷಿತ ಬ್ರಾಹ್ಮಣರ’ ಕ್ಷೇತ್ರ, ಮೈಸೂರಿನ ‘ಬಸವನಗುಡಿ’ ಎಂದೆಲ್ಲಾ ಕರೆಸಿಕೊಳ್ಳುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ ಪಕ್ಷಕ್ಕೆ ‘ಕಮಲ’ದ ಚಿಂತೆ!. ಏಕೆಂದರೆ ಅಲ್ಲಿ ಯಾರಿಗೆ ಟಿಕೆಟ್ ಎಂಬುದರ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಆಖೈರುಗೊಳಿಸಲಿದೆ. ಆದರೆ ಜೆಡಿಎಸ್‌ಗೆ ನಿಶ್ಚಿಂತೆ. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.
ಬಿಜೆಪಿಯಲ್ಲಿ ಹಾಲಿ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ನಗರಾಧ್ಯಕ್ಷ ಟಿ.ಎಸ್. ಶೀವತ್ಸ ಪೈಪೋಟಿ ನೀಡುತ್ತಿದ್ದಾರೆ. ಅದರಲ್ಲೂ ರಾಜೀವ್ ತಮಗೆ ಈ ಬಾರಿ ಟಿಕೆಟ್ ನೀಡಲೇಬೇಕು ಎಂದು ಸತತ ಒತ್ತಡ ಹಾಕುತ್ತಿದ್ದಾರೆ. 1994 ರಿಂದಲೂ ಇಲ್ಲಿ ಬಿಜೆಪಿಯ ಕಾಯಂ ಅಭ್ಯರ್ಥಿಯಾಗಿರುವ ರಾಮದಾಸ್ ಈವರೆಗೆ ನಾಲ್ಕು ಬಾರಿ ಗೆದ್ದು, ಎರಡು ಬಾರಿ ಸೋತಿದ್ದಾರೆ. ಸಚಿವರಾಗಿಯೂ ಕೆಲಸ ಮಾಡಿದ್ದಾರೆ.
1999 ರಿಂದ ಮೊದಲೆರಡು ಬಾರಿ ಜೆಡಿಎಸ್, ನಂತರ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಕೆ. ಸೋಮಶೇಖರ್ ಉಭಯ ಪಕ್ಷಗಳಿಂದಲೂ ತಲಾ ಒಂದು ಬಾರಿ ಗೆದ್ದವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ. ಈ ಬಾರಿಯೂ ಅವರಿಗೆ ಟಿಕೆಟ್. ಆದರೆ ಬ್ರಾಹ್ಮಣರ ಮತಗಳು ವಿಭಜನೆಯಾಗದಿದ್ದಲ್ಲಿ ಗೆಲ್ಲಲಾಗದು. ಆದ್ದರಿಂದ ಬಿಜೆಪಿಯಲ್ಲಿ ಟಿಕೆಟ್ ವಂಚಿತರು ಬಂದಲ್ಲಿ ಕೊಟ್ಟರೇ ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ. ಸೋಮಶೇಖರ್ ಜೊತೆಗೆ ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್ ಪುತ್ರ ಎಂ.ಎನ್. ನವೀನ್‌ಕುಮಾರ್, ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್ ಕೂಡ ಟಿಕೆಟ್‌ಗೆ ಲಾಬಿ ಮಾಡುತ್ತಿದ್ದಾರೆ.
ಕ್ಷೇತ್ರದ ಇತಿಹಾಸ
ಮೈಸೂರು ನಗರದ ಕೃಷ್ಣರಾಜ ಕ್ಷೇತ್ರವು 1952 ರಿಂದಲೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ. 2008ರ ಪುನರ್ ವಿಂಗಡಣೆಯ ನಂತರ ವಿಸ್ತರಣೆಗೊಂಡಿತು. ಒಂದು ಉಪ ಚುನಾವಣೆ ಸೇರಿದಂತೆ ಈವರೆಗೆ 16 ಬಾರಿ ಚುನಾವಣೆಗಳು ನಡೆದಿದ್ದು, ಏಳು ಬಾರಿ ಕಾಂಗ್ರೆಸ್, ಐದು ಬಾರಿ ಬಿಜೆಪಿ, ಮೂರು ಬಾರಿ ಜನತಾ ಪರಿವಾರ ಹಾಗೂ ಒಂದು ಬಾರಿ ಪಕ್ಷೇತರರು ಗೆದ್ದಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ ವೀರಶೈವರು, ಒಕ್ಕಲಿಗರು ಹಾಗೂ ಕುರುಬರು ತಲಾ ಎರಡೆರಡು ಬಾರಿ ಆಯ್ಕೆಯಾಗಿದ್ದರೂ ಬ್ರಾಹ್ಮಣರು 10 ಬಾರಿ ಆಯ್ಕೆಯಾಗಿದ್ದಾರೆ. ಹಾಗಾಗಿ ಇದೊಂದು ರೀತಿಯಲ್ಲಿ ಅಘೋಷಿತ ಬ್ರಾಹ್ಮಣರ ಕ್ಷೇತ್ರ.
ಮೈಸೂರು ನಗರ ಮೊದಲು ಉತ್ತರ ಮತ್ತು ದಕ್ಷಿಣ ಎಂದಾಗಿತ್ತು. ಈ ಹಿಂದೆ ಈಗಿನ ಕೃಷ್ಣರಾಜ ಕ್ಷೇತ್ರವು ಮೈಸೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 1952 ರಲ್ಲಿ ಮೈಸೂರು ನಗರ ದಕ್ಷಿಣ ಕ್ಷೇತ್ರ ಎಂದಾಯಿತು. ಕಾಂಗ್ರೆಸ್‌ನ ಬಿ. ನಾರಾಯಣಸ್ವಾಮಿ ಆಯ್ಕೆಯಾಗಿದ್ದರು. ಕೆಎಂಪಿಪಿಯಿಂದ ಎ. ವೆಂಕಟೇಶಯ್ಯ, ಎಸ್‌ಸಿಎಫ್‌ನಿಂದ ಜಿ.ಎಸ್. ರಾಮಕೃಷ್ಣಯ್ಯ, ಬಿಜೆಎಸ್‌ನಿಂದ ರಾವ್ ಬಹದ್ದೂರ್ ಎಂ. ರಾಮಸ್ವಾಮಿ, ಎಸ್ಪಿಯಿಂದ ಬಿ. ಶ್ರೀಕಂಠಪ್ಪ, ಪಕ್ಷೇತರರಾಗಿ ರಾಘವರಾಜು, ಬಿ.ಜಿ. ದಾಸ್, ಎಸ್. ರಂಗರಾಮಯ್ಯ, ಟಿ. ನಾರಾಯಣ ಕಣದಲ್ಲಿದ್ದರು.
1957 ರಲ್ಲಿ ಮೈಸೂರು ನಗರ ಕ್ಷೇತ್ರವಾಯಿತು. ಆಗ ಕಾಂಗ್ರೆಸ್‌ನ ಕೆ.ಎಸ್. ಸೂರ್ಯನಾರಾಯಣ ರಾವ್ ಆಯ್ಕೆಯಾದರು. ಪಿಎಸ್ಪಿಯಿಂದ ವೇದಾಂತ ಹೆಮ್ಮಿಗೆ, ಪಕ್ಷೇತರರಾಗಿ ಎಲ್. ಶ್ರೀಕಂಠಯ್ಯ, ಎಂ.ಸಿ. ಮಹದೇವಸ್ವಾಮಿ, ಶ್ರೀಕಂಠ ಶರ್ಮ, ಬಿ.ಕೆ. ವಿಶ್ವನಾಥ್ ಸ್ಪರ್ಧಿಸಿದ್ದರು.
1962 ರಲ್ಲಿ ಕೆ.ಎಸ್. ಸೂರ್ಯನಾರಾಯಣ ರಾವ್ ಪುನಾರಾಯ್ಕೆಯಾದರು. ಎಸ್‌ಒಸಿಯಿಂದ ಶ್ರೀಕಂಠ ಶರ್ಮ, ಸಿಪಿಐನಿಂದ ಬಿ.ಎ. ಬೆಳ್ಳಿಯಪ್ಪ, ಜನಸಂಘದಿಂದ ಜೆ.ಎಸ್. ರಾಮನ್, ಸ್ವತಂತ್ರ ಪಾರ್ಟಿಯಿಂದ ಎನ್.ಎಸ್. ನಾರಾಯಣ ರಾವ್, ಪಿಎಸ್ಪಿಯಿಂದ ವೆಂಕಮ್ಮ ಪಾಲಹಳ್ಳಿ ಸೀತಾರಾಮಯ್ಯ, ಪಕ್ಷೇತರರಾಗಿ ಎ. ರೇಣುಕ್, ಎನ್.ಜಿ. ಕೆಂಬಯ್ಯ, ಎಚ್.ಎನ್. ನರಸಿಂಹಮೂರ್ತಿ ಸ್ಪರ್ಧಿಸಿದ್ದರು.
1967 ರಲ್ಲಿ ಕೃಷ್ಣರಾಜ ಕ್ಷೇತ್ರ ಎಂದು ಹೆಸರಿಸಲಾಯಿತು. ಆಗ ಪಕ್ಷೇತರರಾದ ಸಾಹುಕಾರ್ ಚನ್ನಯ್ಯ ಗೆದ್ದರು. ಎಸ್‌ಎಸ್‌ಪಿಯಿಂದ ಶ್ರೀಕಂಠ ಶರ್ಮ, ಕಾಂಗ್ರೆಸ್‌ನಿಂದ ಬಿ.ಎನ್. ಸ್ವಾಮಿ, ಭಾರತೀಯ ಜನಸಂಘದಿಂದ ಜೆ.ಎಸ್. ರಾಮನ್, ಪಕ್ಷೇತರರಾಗಿ ಎಂ. ಸಣ್ಣಯ್ಯ, ಎನ್.ಸಿ. ಬಿಳಿಗಿರಿರಂಗಯ್ಯ ಕಣದಲ್ಲಿದ್ದರು.
1972 ರಲ್ಲಿ ಕಾಂಗ್ರೆಸ್‌ನ ಡಿ. ಸೂರ್ಯನಾರಾಯಣ ಗೆದ್ದರು. ಭಾರತೀಯ ಜನಸಂಘದಿಂದ ಎಚ್. ಗಂಗಾಧರನ್, ಪಕ್ಷೇತರರಾಗಿ ಎಂ. ವೆಂಕಟಲಿಂಗಯ್ಯ, ಸಿಪಿಎಂನಿಂದ ಬಿ.ಎ. ಬೆಳ್ಳಿಯಪ್ಪ, ಎಸ್‌ಒಪಿಯಿಂದ ವೇದಾಂತ ಹೆಮ್ಮಿಗೆ, ಸಂಸ್ಥಾ ಕಾಂಗ್ರೆಸ್‌ನಿಂದ ಕೆ. ಸಿದ್ದಯ್ಯ, ಸ್ವತಂತ್ರ ಪಾರ್ಟಿಯಿಂದ ಟಿ. ಅನಂರರಾವ್, ಪಕ್ಷೇತರರಾಗಿ ಶ್ರೀಕಂಠ ಶರ್ಮ, ಎಚ್.ಕೆ. ಅನಂತ ಸ್ಪರ್ಧಿಸಿದ್ದರು.
1974 ರ ಉಪ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ನ ವೆಂಕಟಲಿಂಗಯ್ಯ ಆಯ್ಕೆಯಾದರು. ಈ ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರು ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಧುಮುಕಿದರು. ಅವರು ಅಣ್ಣಾಡಿಎಂಕೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಒಂಟೆ ಗುರುತಿನಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಟಿ.ವಿ. ಶ್ರೀನಿವಾಸರಾವ್, ಜನಸಂಘದಿಂದ ಎಚ್. ಗಂಗಾಧರನ್, ಸಮಾಜವಾದಿ ಪಕ್ಷದಿಂದ ಶ್ರೀಕಂಠ ಶರ್ಮ ಅಭ್ಯರ್ಥಿಗಳಾಗಿದ್ದರು.
1978 ರಲ್ಲಿ ಜನತಾಪಕ್ಷದ ಎಚ್. ಗಂಗಾಧರನ್ ಆಯ್ಕೆಯಾದರು. ಇಂದಿರಾ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಎಸ್. ಸೂರ್ಯನಾರಾಯಣ ರಾವ್, ಕಾಂಗ್ರೆಸ್‌ನಿಂದ ಎಂ.ಎಸ್. ನೇಮತ್‌ಖಾನ್, ಆರ್‌ಪಿಐನಿಂದ ಎನ್.ಸಿ. ಸಂಜೀವನ್, ಪಕ್ಷೇತರರಾಗಿ ಟಿ. ಅನಂತನ್, ಎಚ್.ಕೆ. ಅನಂತ, ನ್ಯಾರಿ ಪ್ಯಾಟ್ರಿಕ್ ಕಣದಲ್ಲಿದ್ದರು.
1983 ರಲ್ಲಿ ಗಂಗಾಧರನ್ ಬಿಜೆಪಿ ಟಿಕೆಟ್ ಮೇಲೆ ಪುನರಾಯ್ಕೆಯಾದರು. ಜನತಾಪಕ್ಷದಿಂದ ಟಿ.ವಿ. ಶ್ರೀನಿವಾಸರಾವ್, ಕಾಂಗ್ರೆಸ್‌ನಿಂದ ಕಮಲಾ ರಾಮನ್ ಸ್ಪರ್ಧಿಸಿದ್ದರು.
1985 ರಲ್ಲಿ ಜನತಾಪಕ್ಷದ ವೇದಾಂತ ಹೆಮ್ಮಿಗೆ ಜಯಶೀಲರಾದರು. ಕಾಂಗ್ರೆಸ್‌ನಿಂದ ಶ್ರೀಕಂಠ ಶರ್ಮ, ಬಿಜೆಪಿಯಿಂದ ಎಚ್. ಗಂಗಾಧರನ್ ಕಣದಲ್ಲಿದ್ದರು.
1989 ರ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ಹೆಮ್ಮಿಗೆ ಜನತಾದಳ ಅಭ್ಯರ್ಥಿಯಾಗಿ ಸೋತರು. ಕಾಂಗ್ರೆಸ್‌ನ ಕೆ.ಎನ್. ಸೋಮಸುಂದರಂ ಗೆದ್ದರು. ಬಿಜೆಪಿಯಿಂದ ಎಚ್. ವೀರಭದ್ರಯ್ಯ, ಜನತಾ ಪಕ್ಷದಿಂದ ಸಿ.ಎನ್.ಎನ್. ಮೂರ್ತಿ ಅಭ್ಯರ್ಥಿಗಳಾಗಿದ್ದರು.
1994 ರಲ್ಲಿ ಬಿಜೆಪಿಯ ಎ. ರಾಮದಾಸ್ ಗೆದ್ದರು. ಹೆಮ್ಮಿಗೆ- ಜನತಾದಳ, ಕೆ.ಎನ್. ಸೋಮಸುಂದರಂ- ಕಾಂಗ್ರೆಸ್, ನಿರ್ಮಾಪಕ ಎಂ.ಪಿ. ಶಂಕರ್- ಕೆಸಿಪಿ ಅಭ್ಯರ್ಥಿಗಳಾಗಿದ್ದರು.
1999 ರಲ್ಲಿ ಬಿಜೆಪಿಯ ಎ. ರಾಮದಾಸ್ ಪುನಾರಾಯ್ಕೆಯಾದರು. ಜೆಡಿಯು- ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹೆಮ್ಮಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. 1999 ರಲ್ಲಿ ಜೆಡಿಎಸ್ ಇಲ್ಲಿ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ದಿವಂಗತ ಟಿ.ವಿ. ಶ್ರೀನಿವಾಸರಾವ್ ಅವರ ಪುತ್ರ ಟಿ.ಎಸ್. ರವಿಶಂಕರ್ ಅವರಿಗೆ ಟಿಕೆಟ್ ನೀಡಿತ್ತು.
2004 ರಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಸ್. ರಮೇಶ್, ಬಿಜೆಪಿಯಿಂದ ಎ.ರಾಮದಾಸ್ ಸ್ಪರ್ಧಿಸಿದ್ದರು. ಆದರೆ ಗೆದ್ದಿದ್ದು ಮಾತ್ರ ಜೆಡಿಎಸ್‌ನ ಎಂ.ಕೆ. ಸೋಮಶೇಖರ್.
2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮ ಬಿಜೆಪಿಯ ಎಸ್.ಎ. ರಾಮದಾಸ್ ಗೆದ್ದರು. ಕಾಂಗ್ರೆಸ್‌ನಿಂದ ಎಂ.ಕೆ. ಸೋಮಶೇಖರ್, ಜೆಡಿಎಸ್‌ನಿಂದ ಶಿವಬಸಪ್ಪ ಕಣದಲ್ಲಿದ್ದರು.
2013 ರಲ್ಲಿ ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್ ಗೆದ್ದರು. ಬಿಜೆಪಿಯ ಎಸ್.ಎ. ರಾಮದಾಸ್ ಹಾಗೂ ಕೆಜೆಪಿಯ ಎಚ್.ವಿ. ರಾಜೀವ್ ನಡುವೆ ಮತಗಳ ವಿಭಜನೆ ಇದಕ್ಕೆ ಕಾರಣ. ಜೆಡಿಎಸ್‌ನಿಂದ ಎಚ್. ವಾಸು ಕಣದಲ್ಲಿದ್ದರು.
ಕೃಷ್ಣರಾಜ ಕ್ಷೇತ್ರದಿಂದ ಒಕ್ಕಲಿಗರು, ವೀರಶೈವರು, ಕುರಬರು- ಹೀಗೆ ಬ್ರಾಹ್ಮಣೇತರರು ಗೆದ್ದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಪಕ್ಷಗಳು ಬ್ರಾಹ್ಮಣರಿಗೆ ಟಿಕೆಟ್ ನೀಡುತ್ತಿದ್ದವು. ಆದರೆ ಜನತಾ ಪರಿವಾರ ಕುರುಬ ಜನಾಂಗದ ಎಂ.ಕೆ. ಸೋಮಶೇಖರ್ ಅವರಿಗೆ ಎರಡು ಬಾರಿ ಟಿಕೆಟ್ ನೀಡಿ, ಹೊಸ ಸಮೀಕರಣ ಬರೆಯಿತು. ಕಾಂಗ್ರೆಸ್ ಕೂಡ ಅವರಿಗೆ ಎರಡು ಬಾರಿ ಟಿಕೆಟ್ ನೀಡಿತು. ಪರಿಣಾಮ ಸೋಮಶೇಖರ್ ತಲಾ ಒಂದು ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದಾರೆ.
ರಾಮದಾಸ್ ಈ ಕ್ಷೇತ್ರದಲ್ಲಿ 1994 ರಲ್ಲಿ ಜನತಾದಳದ ವೇದಾಂತ ಹೆಮ್ಮಿಗೆ ಅವರನ್ನು ಸೋಲಿಸಿ ಆಯ್ಕೆಯಾದರು. 1999 ರಲ್ಲಿ ಬಿಜೆಪಿ ಹಾಗೂ ಜೆಡಿಯು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಜೆಡಿಯುನಲ್ಲಿದ್ದ ಹೆಮ್ಮಿಗೆ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಆ ವರ್ಷ ಜೆಡಿಎಸ್‌ನಿಂದ ಕುರುಬ ಜನಾಂಗದ ಎಂ.ಕೆ. ಸೋಮಶೇಖರ್ ಅವರನ್ನು ಕಣಕ್ಕಿಳಿಸುವ ಮೂಲಕ ‘ಹೊಸ ಸಮೀಕರಣ’ ಬರೆಯಲು ಯತ್ನಿಸಿತು. ಆದರೆ ಪ್ರಯೋಜನವಾಗಲಿಲ್ಲ. ಆದರೆ 2004 ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಲೆ ಇತ್ತು. ಪರಿಣಾಮ ಎಂ.ಕೆ. ಸೋಮಶೇಖರ್ ಗೆದ್ದರು. 2008ರ ವೇಳೆಗೆ ಸೋಮಶೇಖರ್ ಕಾಂಗ್ರೆಸ್ ಸೇರಿದ್ದರು. ಜೆಡಿಎಸ್‌ನಿಂದ ಶಿವಬಸಪ್ಪ ಸ್ಪರ್ಧಿಸಿದ್ದರು. ರಾಮದಾಸ್ ಗೆದ್ದರು. 2013 ರಲ್ಲಿ ಸೋಮಶೇಖರ್ ಮತ್ತೆ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ರಾಮದಾಸ್, ಕೆಜೆಪಿಯಿಂದ ಎಚ್.ವಿ. ರಾಜೀವ್ ಸ್ಪರ್ಧಿಸಿದ್ದರು. ಮತಗಳ ವಿಭಜನೆಯಿಂದಾಗಿ ಸೋಮಶೇಖರ್ ಗೆದ್ದರು. 2018 ರಲ್ಲಿ ರಾಮದಾಸ್ ಹಾಗೂ ಸೋಮಶೇಖರ್ ನಡುವೆ ಐದನೇ ಮುಖಾಮಖಿ. ರಾಮದಾಸ್ ಗೆಲುವಿನ ನಗೆ ಬೀರಿದರು.
ಈ ಕ್ಷೇತ್ರದಲ್ಲಿ ವೀರಶೈವ- ಲಿಂಗಾಯತರಾದ ಎಚ್. ಗಂಗಾಧರನ್ ಎರಡು ಬಾರಿ ಶಾಸಕರಾಗಿದ್ದರು. ಅದಾದ ನಂತರ ವೀರಶೈವ- ಲಿಂಗಾಯತ ಜನಾಂಗದವರು ಗೆಲ್ಲಲು ಸಾಧ್ಯವಾಗಲಿಲ್ಲ. 2008 ರಲ್ಲಿ ಜೆಡಿಎಸ್ ಈ ಜನಾಂಗದ ಶಿವಬಸಪ್ಪ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಗೆಲ್ಲಲಿಲ್ಲ. 2018 ರಲ್ಲಿ ಇದೇ ಜನಾಂಗದ ಕೆ.ವಿ. ಮಲ್ಲೇಶ್ ಅವರಿಗೆ ಟಿಕೆಟ್ ನೀಡಿತ್ತು. ಈ ಬಾರಿಯೂ ಮಲ್ಲೇಶ್ ಜೆಡಿಎಸ್ ಅಭ್ಯರ್ಥಿ.
ಮತದಾರರ ವಿವರ
ಒಟ್ಟು ಮತದಾರರು-2,42,180
ಪುರುಷರು- 1,18,575
ಮಹಿಳೆಯರು- 1,23,581
ಇತರರು-24
ಮತಗಟ್ಟೆಗಳು- 265
----------
2018ರ ಫಲಿತಾಂಶ
ಎಸ್.ಎ. ರಾಮದಾಸ್ (ಬಿಜೆಪಿ)- 78,573
ಎಂ.ಕೆ. ಸೋಮಶೇಖರ್ (ಕಾಂಗ್ರೆಸ್) - 52,226
ಕೆ.ವಿ. ಮಲ್ಲೇಶ್(ಜೆಡಿಎಸ್)- 11,607
(ಇದಲ್ಲದೇ ಇನ್ನೂ 16 ಮಂದಿ ಕಣದಲ್ಲಿದ್ದರು)
------
ಕ್ಷೇತ್ರ ಸ್ವಾರಸ್ಯಗಳು
-ಈ ಕ್ಷೇತ್ರ ಮೊದಲ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲೆರಡು ಬಾರಿ ಮೈಸೂರು ನಗರ ದಕ್ಷಿಣ ಕ್ಷೇತ್ರ ಎಂದಿತ್ತು.
- ವೇದಾಂತ ಹೆಮ್ಮಿಗೆ 1957 ರಲ್ಲಿ ಪಿಎಸ್ಪಿ, 1972 ರಲ್ಲಿ ಎಸ್‌ಒಪಿಯಿಂದ ಸ್ಪರ್ಧಿಸಿ ಸೋತಿದ್ದರು. 1985 ರಲ್ಲಿ ಜನತಾಪಕ್ಷ ಅಭ್ಯರ್ಥಿಯಾಗಿ ಗೆದ್ದರು. 1989 ಹಾಗೂ 1994 ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಸೋತರು.
-ಪಾಲಿಕೆ ಸದಸ್ಯರಾಗಿ ಅಪಾರ ಜನಾನುರಾಗಿಯಾಗಿದ್ದ ಶ್ರೀಕಂಠ ಶರ್ಮ ಅವರು 1957 ರಲ್ಲಿ ಪಕ್ಷೇತರ, 1962 ರಲ್ಲಿ ಎಸ್‌ಒಸಿ, 1967 ರಲ್ಲಿ ಎಸ್‌ಎಸ್‌ಪಿ, 1972 ರಲ್ಲಿ ಪಕ್ಷೇತರ, 1985 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. ಐದು ಬಾರಿ ಯತ್ನಿಸಿದರೂ ಅವರು ಶಾಸಕರಾಗಲಿಲ್ಲ.
- ಎಚ್. ಗಂಗಾಧರನ್ 1972 ರಲ್ಲಿ ಭಾರತೀಯ ಜನಸಂಘ ಅಭ್ಯರ್ಥಿಯಾಗಿ ಸೋತರು. 1978 ರಲ್ಲಿ ಜನತಾಪಕ್ಷ, 1983 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. 1985 ರಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸೋತರು.
- 1974 ರಲ್ಲಿ ಉಪ ಚುನಾವಣೆ ನಡೆಯಿತು. ಸಂಸ್ಥಾ ಕಾಂಗ್ರೆಸ್‌ನ ಎಂ. ವೆಂಕಟಲಿಂಗಯ್ಯ ಗೆದ್ದರು. ಅವರು 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ. ಸೂರ್ಯನಾರಾಯಣ ಅವರೆದುರು ಸೋತಿದ್ದರು.
- 1983 ರಲ್ಲಿ ಟಿ.ವಿ. ಶ್ರೀನಿವಾಸರಾವ್ ಜನತಾಪಕ್ಷ, 1999 ರಲ್ಲಿ ಅವರ ಪುತ್ರ ಟಿ.ಎಸ್. ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು.
- 1989 ರಲ್ಲಿ ನಿವೃತ್ತ ಐಜಿಪಿ ಎಚ್. ವೀರಭದ್ರಯ್ಯ ಬಿಜೆಪಿ ಅಭ್ಯರ್ಥಿಯಾಗಿ ಸೋತರು. ಆ ವರ್ಷ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಕೆ.ಎನ್. ಸೋಮಸುಂದರಂ 1994 ರಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸಿ ಸೋತರು.
- 1994 ರಲ್ಲಿ ಚಲನಚಿತ್ರ ನಟ, ನಿರ್ಮಾಪಕ ಎಂ.ಪಿ. ಶಂಕರ್ ಕೆಸಿಪಿಯಿಂದ ಸ್ಪರ್ಧಿಸಿ, ಠೇವಣಿ ಕಳೆದುಕೊಂಡರು.
- 2004 ರಲ್ಲಿ ಮಾಜಿ ಸಚಿವ ಎಸ್. ರಮೇಶ್ ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸೋತರು.
- ಈ ಕ್ಷೇತ್ರದಿಂದ ಡಾ.ಜೆ.ಎಸ್. ರಾಮನ್, ಡಾ.ಕಮಲಾ ರಾಮನ್, ಎಸ್.ಪಿ. ತಿರುಮಲರಾವ್, ಸಿಎನ್‌ಎನ್ ಮೂರ್ತಿ, ಕುಮಾರ ಆರಾಧ್ಯ, ನೋಟರಿ ಶ್ರೀನಿವಾಸಮೂರ್ತಿ, ಎನ್. ಜನಾರ್ಧನ, ಎಂ.ಎಸ್. ರವೀಂದ್ರ, ಉಪ ಮೇಯರ್ ಆಗಿದ್ದ ಕೆ. ಗೋಪಾಲಸ್ವಾಮಿ, ಪಾಲಿಕೆ ಸದಸ್ಯರಾಗಿದ್ದ ಟಿ. ಹೇಮಾವತಿ, ಎಂ. ಪ್ರದೀಪ್‌ಕುಮಾರ್, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಎಚ್. ವಾಸು ಮತ್ತಿತರರು ಕೂಡ ಸ್ಪರ್ಧಿಸಿ ಸೋತಿದ್ದಾರೆ.
- ಕೆ.ಎಸ್. ಸೂರ್ಯನಾರಾಯಣರಾವ್, ಎಚ್. ಗಂಗಾಧರನ್, ಎಸ್.ಎ. ರಾಮದಾಸ್ ಸತತ ಎರಡು ಬಾರಿ ಗೆದ್ದಿದ್ದಾರೆ. ಯಾರಿಗೂ ಹ್ಯಾಟ್ರಿಕ್ ಸಾಧ್ಯವಾಗಿಲ್ಲ. ಈ ಕ್ಷೇತ್ರದಿಂದ ಗೆದ್ದವರಲ್ಲಿ ಮಂತ್ರಿಯಾಗಿದ್ದು ರಾಮದಾಸ್ ಮಾತ್ರ. ಅಲ್ಲದೇ ನಾಲ್ಕು ಬಾರಿ ಗೆದ್ದವರು ಅವರೊಬ್ಬರೆ.
--------
ಈವರೆಗೆ ಚುನಾಯಿತರಾದವರು
ನಾರಾಯಣಸ್ವಾಮಿ, ಸಾಹುಕಾರ್ ಚನ್ನಯ್ಯ, ಎಂ. ವೆಂಕಟಲಿಂಗಯ್ಯ, ಎಚ್. ಗಂಗಾಧರನ್, ವೇದಾಂತ ಹೆಮ್ಮಿಗೆ, ಕೆ.ಎನ್. ಸೋಮಸುಂದರಂ, ಎಸ್.ಎ. ರಾಮದಾಸ್, ಎಂ.ಕೆ. ಸೋಮಶೇಖರ್
ಮೈಸೂರು ನಗರ ದಕ್ಷಿಣ ಎಂದಿದ್ದಾಗ...
1952- ಬಿ. ನಾರಾಯಣ ಸ್ವಾಮಿ (ಕಾಂಗ್ರೆಸ್)
ಮೈಸೂರು ನಗರ ಎಂದಿದ್ದಾಗ...
1957- ಕೆ.ಎಸ್. ಸೂರ್ಯನಾರಾಯಣ ರಾವ್ (ಕಾಂಗ್ರೆಸ್)
1962- ಕೆ.ಎಸ್. ಸೂರ್ಯನಾರಾಯಣ ರಾವ್ (ಕಾಂಗ್ರೆಸ್)
ಕೃಷ್ಣರಾಜ ಎಂದು ಬದಲಾದ ನಂತರ...
1967- ಸಾಹುಕಾರ್ ಚನ್ನಯ್ಯ (ಪಕ್ಷೇತರ)
1972- ಡಿ. ಸೂರ್ಯನಾರಾಯಣ (ಕಾಂಗ್ರೆಸ್)
1974- (ಉಪ ಚುನಾವಣೆ)- ಎಂ. ವೆಂಕಟಲಿಂಗಯ್ಯ (ಸಂಸ್ಥಾ ಕಾಂಗ್ರೆಸ್)
1978- ಎಚ್. ಗಂಗಾಧರನ್ (ಜನತಾಪಕ್ಷ)
1983- ಎಚ್. ಗಂಗಾಧರನ್ (ಬಿಜೆಪಿ)
1985- ವೇದಾಂತ ಹೆಮ್ಮಿಗೆ (ಜನತಾಪಕ್ಷ)
1989- ಕೆ.ಎನ್. ಸೋಮಸುಂದರಂ (ಕಾಂಗ್ರೆಸ್)
1994- ಎ. ರಾಮದಾಸ್ (ಬಿಜೆಪಿ)
1999- ಎ. ರಾಮದಾಸ್ (ಬಿಜೆಪಿ)
2004- ಎಂ.ಕೆ. ಸೋಮಶೇಖರ್ (ಜೆಡಿಎಸ್)
2008- ಎಸ್.ಎ. ರಾಮದಾಸ್ (ಬಿಜೆಪಿ)
2013- ಎಂ.ಕೆ. ಸೋಮಶೇಖರ್ (ಕಾಂಗ್ರೆಸ್)
2018- ಎಸ್.ಎ. ರಾಮದಾಸ್ (ಬಿಜೆಪಿ)