ಬೆಂಗಳೂರು(ಅ.07): ಕೊರೋನಾ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ಉಪ ಚುನಾವಣೆಗೆ 297 ತಾತ್ಕಾಲಿಕ ಮತಗಟ್ಟೆತೆರೆಯಲಾಗುತ್ತಿದ್ದು, 68 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಉಪ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಮಂಗಳವಾರ ಬಸವೇಶ್ವರ ನಗರದ ಬಿ.ಆರ್‌.ಅಂಬೇಡ್ಕರ್‌ ಕ್ರೀಡಾ ಸಂಕೀರ್ಣದ ಕಚೇರಿ ಸ್ಟ್ರಾಂಗ್‌ ರೂಂನಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳ ಸಿದ್ಧತೆಯ ಕಾರ್ಯವನ್ನು ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ದ್ವಿಗುಣಗೊಳಿಸಲಾಗುತ್ತಿದೆ. ಹೀಗಾಗಿ, ಮತಗಟ್ಟೆಗಳ ಸಂಖ್ಯೆ 678ಕ್ಕೆ ಹೆಚ್ಚಿಸಲಾಗಿದೆ. ಈ ಪೈಕಿ 297 ತಾತ್ಕಾಲಿಕ ಮತಗಟ್ಟೆಆರಂಭಿಸಲಾಗುತ್ತಿದೆ. ಇನ್ನು 68 ಮತಗಟ್ಟೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ವಿವರಿಸಿದರು. ಕೊರೋನಾ ಸೋಂಕು ಭೀತಿ ಇರುವುದರಿಂದ ಕಿರಿದಾದ ಪ್ರದೇಶದಲ್ಲಿರುವ 68 ಮತಗಟ್ಟೆಗಳ ಸ್ಥಳ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಒಂದು ಮತಗಟ್ಟೆಗೆ ಎರಡು ಯಂತ್ರದಂತೆ ಒಟ್ಟು 1,356 ಬ್ಯಾಲೆಟ್‌ ಯೂನಿಟ್ಸ್‌ , 1,356 ಕಂಟ್ರೋಲ್‌ ಯೂನಿಟ್ಸ್‌ ಹಾಗೂ 1,356 ವಿವಿ ಪ್ಯಾಟ್‌ ಯಂತ್ರಗಳ ತಪಾಸಣೆ ಕಾರ್ಯ ನ.10ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಆರ್‌.ಆರ್‌.ನಗರ ಎಲೆಕ್ಷನ್‌ ತಡೆಗೆ ಸುಪ್ರೀಂ ನಕಾರ

1,356 ಯಂತ್ರಗಳಲ್ಲಿ ವಿವಿಪ್ಯಾಟ್‌ 678 ಜೊತೆಗೆ ಶೇ.50 ರಷ್ಟು ಹೆಚ್ಚುವರಿಯಾಗಿ ಬಳಸಲಾಗುತ್ತದೆ ಹಾಗೂ ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ ಯಂತ್ರಗಳನ್ನು ಶೇ. 140 ರಷ್ಟು ಹೆಚ್ಚುವರಿಯಾಗಿ ಬಳಸಲಾಗುತ್ತದೆ. ಈ ರೀತಿ ಹೆಚ್ಚುವರಿಯಾಗಿ ಬಳಸಿದ ಸಾಧನಗಳನ್ನು ರಾರ‍ಯಂಡಮ್‌ ಆಗಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಿ ಮತಗಟ್ಟೆಗಳಿಗೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ವೇಳೆ ವಿಶೇಷ ಆಯುಕ್ತರು(ಆಡಳಿತ) ಜೆ.ಮಂಜುನಾಥ್‌, ಸ್ಟ್ರಾಂಗ್‌ ರೂಂ ನೋಡಲ್‌ ಅಧಿಕಾರಿ ಕೆಂಪೇಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.