* ಸಿಎಂ ಸ್ಥಾನ​ಕ್ಕಾಗಿ ಕೊನೆ ವರೆಗೂ ಹೋರಾಟ ನಡೆಸಿದ ಅರ​ವಿಂದ ಬೆಲ್ಲದ* ಶಂಕರ ಪಾಟೀಲ ಮುನೇನಕೊಪ್ಪ ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ*  ಸುಮ್ಮನೆ ಕೂತಿಲ್ಲ ಬೆಲ್ಲದ  

ಹುಬ್ಬಳ್ಳಿ(ಜು.29):  ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಬೊಮ್ಮಾಯಿ ಸಂಪುಟದಲ್ಲಿ ಯಾರಾರ‍ಯರು ಇರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಬೊಮ್ಮಾಯಿ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವ​ರ​ದು.

ಶಂಕರ ಪಾಟೀಲ ಮುನೇನಕೊಪ್ಪ ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ. ಇಬ್ಬೂ ಮೊದಲು ಜನತಾದಳದಲ್ಲಿದ್ದವರು. ಬೊಮ್ಮಾಯಿ ಅವರೊಂದಿಗೆ ಬಿಜೆಪಿ ಸೇರಿ ನವಲಗುಂದ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದಾರೆ. 2008ರಲ್ಲಿ ಪಕ್ಷಕ್ಕೆ ಬಂದರೂ ಪಕ್ಷ ನಿಷ್ಠೆಗೆ ಹೆಸರಾದವರು. ಕಳಸಾ-ಬಂಡೂರಿ, ಕುಡಿಯುವ ನೀರಿಗಾಗಿ ನಡೆದ ಹಲವು ಹೋರಾಟಗಳಲ್ಲಿ ಬೊಮ್ಮಾಯಿ ಅವರೊಂದಿಗೆ ಹೆಜ್ಜೆ ಹಾಕಿದವರು ಇವರು. ಶಾಸಕರಾದ ಮೇಲೂ ತಮ್ಮ ಹೋರಾಟವನ್ನು ಮಾತ್ರ ಬಿಟ್ಟಿರಲಿಲ್ಲ. ಹಿಂದೆ ತಾವು ಯಾವ ಬೇಡಿಕೆ ಇಟ್ಟು ಹೋರಾಟ ಮಾಡಿದ್ದರೂ ಅವುಗಳನ್ನು ಶಾಸಕರಾಗಿ ಈಡೇರಿಸಲು ಶ್ರಮಿಸುತ್ತಿದ್ದಾರೆ. ನವಲಗುಂದ ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಪಕ್ಷದ ಹಿರಿಯ ಮುಖಂಡರಾದ ಜಗದೀಶ ಶೆಟ್ಟರ್‌ ಹಾಗೂ ಪ್ರಹ್ಲಾದ ಜೋಶಿ ಅವರ ಆಪ್ತರಾಗಿದ್ದಾರೆ.

ಇದೀಗ ತಮ್ಮ ರಾಜಕೀಯ ಗುರುವೇ ಮುಖ್ಯಮಂತ್ರಿಯಾಗಿರುವ ಕಾರಣ ಸಹಜವಾಗಿ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಸಂಪುಟ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ, ನಗರ ಮೂಲಸೌಲಭ್ಯ ಹಾಗೂ ಒಳಚರಂಡಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮುನೇನಕೊಪ್ಪ ಅವರಿಗೆ ಈ ಸಲ ಸಂಪುಟದಲ್ಲಿ ಸ್ಥಾನ ದೊರೆಯಬೇಕೆಂಬ ಒತ್ತಾಸೆ ಅವರ ಬೆಂಬಲಿಗರದು.

ಸಿಎಂ ರೇಸ್‌ನಲ್ಲಿದ್ದ ಅರವಿಂದ್ ಬೆಲ್ಲದ್ ದಿಢೀರ್ ಬಸವರಾಜ ಬೊಮ್ಮಾಯಿ ಭೇಟಿ

ಬೆಲ್ಲ​ದಗೆ ಸಿಗು​ವುದೇ ಮಂತ್ರಿ ಸ್ಥಾನ!

ಇನ್ನೇನು ಅರ​ವಿಂದ ಬೆಲ್ಲದ ಅವರಿಗೆ ಮುಖ್ಯಮಂತ್ರಿ ಪಟ್ಟದೊರ​ಕಿತು ಎನ್ನು​ವ​ಷ್ಟ​ರಲ್ಲಿ ಕೊನೆ ಕ್ಷಣ​ದಲ್ಲಿ ಅವರ ಅದೃ​ಷ್ಟ ಕೈಹಿಡಿಯ​ಲಿಲ್ಲ. ಈಗ ಮಂತ್ರಿ ಸ್ಥಾನ​ವ​ನ್ನಾ​ದರೂ ಪಡೆ​ಯುವ ಹಂಬ​ದ​ಲ್ಲಿ​ದ್ದಾರೆ ಬೆಲ್ಲದ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿ​ರುವ ಅರವಿಂದ ಬೆಲ್ಲದ, ಎರಡು ಬಾರಿ ಶಾಸ​ಕ​ರಾ​ಗಿ​ದ್ದಾರೆ. ಸದ್ಯ ಧಾರ​ವಾಡ ಜಿಲ್ಲೆಯ ಬಿಜೆಪಿ ಜಿಲಾ​ಧ್ಯ​ಕ್ಷರೂ ಹೌದು. ಆರ್‌​ಎ​ಸ್ಸೆಸ್‌ ಹಿನ್ನೆ​ಲೆ ಹಾಗೂ ಬಿಜೆಪಿ ವರಿ​ಷ್ಠರೊಂದಿಗೆ ಆತ್ಮೀಯ ಸಂಬಂಧ ಹೊಂದಿ​ರು​ವು​ದ​ರಿಂದ ಒಂದೂ ಬಾರಿ ಮಂತ್ರಿ ಆಗದೇ ಇದ್ದರೂ ಮುಖ್ಯ​ಮಂತ್ರಿ ಸ್ಥಾನಕ್ಕೆ ಶತಾ​ಯ-ಗತಾಯ ಪ್ರಯತ್ನ ನಡೆ​ಸುವ ಮೂಲಕ ರಾಜ್ಯಾದ್ಯಂತ ಪರಿಚಿತರಾದರು.

ಸುಮ್ಮನೆ ಕೂತಿಲ್ಲ ಬೆಲ್ಲದ:

ನಾಲ್ಕು ಬಾರಿ ಶಾಸ​ಕ​ರಾದ ಚಂದ್ರ​ಕಾಂತ ಬೆಲ್ಲದ ಅವರ ಪುತ್ರ ಅರ​ವಿಂದ ಬೆಲ್ಲದ ಮುಖ್ಯ​ಮಂತ್ರಿ ಸ್ಥಾನ ಕೈ ತಪ್ಪಿ ಹೋಯಿತು ಎಂದು ಸುಮ್ಮನೆ ಕೂತಿಲ್ಲ. ಮತ್ತೆ ಬಿಜೆಪಿ ವರಿ​ಷ್ಠರ ಬೆನ್ನು ಬಿದ್ದಿ​ದ್ದಾರೆ. ಸದ್ಯ ಬೆಂಗ​ಳೂ​ರಿ​ನ​ಲ್ಲಿಯೇ ಇರುವ ಬೆಲ್ಲದ ದೂರ​ವಾಣಿ ಮೂಲಕ ಮಂತ್ರಿ ಸ್ಥಾನ​ಕ್ಕಾಗಿ ಮೊರೆ ಇಡು​ತ್ತಿ​ದ್ದಾರೆ. ದೆಹ​ಲಿ​ಯಿಂದ ಕರೆ ಬಂದರೆ ಮತ್ತೊಮ್ಮೆ ದೆಹಲಿಗೆ ಹೋಗಿ ವರಿ​ಷ್ಠರ ಮೂಲಕ ಮಂತ್ರಿ ಸ್ಥಾನ ಗಿಟ್ಟಿ​ಸಿ​ಕೊ​ಳ್ಳಲು ತೆರೆ ಮರೆ​ಯಲ್ಲಿ ಬೆಲ್ಲದ ಪ್ರಯತ್ನ ನಡೆ​ಸಿ​ದ್ದಾರೆ ಎಂದು ಮೂಲ​ಗಳು ತಿಳಿಸಿವೆ.

ತಮ್ಮ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಯಾವುದೇ ತರಹದ ಕಪ್ಪು ಚುಕ್ಕೆ ಹೊಂದಿರದ ಬೆಲ್ಲದ ಸಮಯ, ಸಂದರ್ಭ ಬಂದಾಗ ಕೇಂದ್ರ ಸರ್ಕಾರದ ನಾಯಕರೊಂದಿಗೆ ಧಾರವಾಡ ಅಭಿವೃದ್ಧಿ ಪರವಾಗಿ ಅನೇಕ ಬಾರಿ ಮಾತುಕತೆ ನಡೆಸಿ ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಈಗ ಮಂತ್ರಿ ಸ್ಥಾನ​ವ​ನ್ನಾ​ದರೂ ಕೊಡ​ಬೇಕು ಎಂದು ಬೆಲ್ಲದ ಅಭಿ​ಮಾನಿ ಬಸ​ವ​ರಾಜ ಗರಗ ಆಗ್ರ​ಹಿ​ಸಿ​ದ್ದಾರೆ.

ಸುಮಾರು ಕಳೆದ ಒಂದು ತಿಂಗ​ಳಿಂದ ರಾಜ​ಕೀಯ ಬೆಳ​ವ​ಣಿ​ಗೆ​ಯಿಂದಾಗಿ ಬೆಂಗ​ಳೂರು ನಿವಾ​ಸಿ​ಯಾ​ಗಿ​ರುವ ಅರ​ವಿಂದ ಬೆಲ್ಲದ ಅವರ ಸತತ ಪ್ರಯ​ತ್ನದ ಫಲವಾಗಿ ನೂತ​ನ ಮುಖ್ಯ​ಮಂತ್ರಿ ಬಸ​ವರಾಜ ಬೊಮ್ಮಾಯಿ ಅವರ ಸಚಿವ ಸಂಪು​ಟ​ದಲ್ಲಿ ಮಂತ್ರಿ ಸ್ಥಾನ ಪಡೆ​ಯು​ವ​ರೇ ಎಂಬು​ದನ್ನು ಕಾದು ನೋಡ​ಬೇ​ಕಿ​ದೆ.