ಕರ್ನಾಟಕದಲ್ಲಿ ರಾಜಕೀಯ ಪ್ರವಾಹದ ಅಲೆ ಶುರು: ಯಾರಿಗೆ ಒಲಿಯಲಿದೆ ಮಂತ್ರಿಗಿರಿ..?
* ಸಚಿವರು ಯಾರಾಗಲಿದ್ದಾರೆ ಎಂಬ ಕುರಿತು ಎಲ್ಲೆಡೆ ಚರ್ಚೆ
* ಕಾಗೇರಿ ವಿಧಾನಸಭಾಧ್ಯಕ್ಷ ಹುದ್ದೆಯಲ್ಲಿಯೇ ಮುಂದುವರಿಯುವ ಸಾಧ್ಯತೆ
* ಉತ್ತರ ಕನ್ನಡ ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಬಿಜೆಪಿ
ಕಾರವಾರ(ಜು.28): ಕೊರೋನಾ, ನೆರೆಹಾವಳಿ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಪ್ರವಾಹದ ಅಲೆಗಳು ದೂರದ ಉತ್ತರ ಕನ್ನಡಕ್ಕೂ ಅಪ್ಪಳಿಸುತ್ತಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಮೇಲೆ ಹೊಸ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ನಂತರ ನೂತನ ಸಚಿವ ಸಂಪುಟವೂ ರಚನೆಯಾಗಲಿದೆ. ಬಿಜೆಪಿ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಜಿಲ್ಲೆಯ ಐವರು ಶಾಸಕರು ಹಾಗೂ ಸಂಸದರು ಬಿಜೆಪಿಯಲ್ಲಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ವ್ಯಾಪಕವಾಗಿ ಮಾತುಕತೆ ನಡೆಯುತ್ತಿದೆ.
ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಸ್ಥಾನ ಸಿಗಲಿದೆಯೇ, ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿ ಮುಂದುವರಿಯಲಿದ್ದಾರೆಯೇ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ದೊರೆಯಲಿದೆಯೇ ಇಂತಹ ಮಾತುಕತೆ, ಚರ್ಚೆಗಳು ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿವೆ.
ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಈಗ ಯಾರೇ ಮುಖ್ಯಮಂತ್ರಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯುವುದು ಬಹುತೇಕ ಖಚಿತ. ಕಾರ್ಮಿಕ ಸಚಿವರಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವರಾಮ ಹೆಬ್ಬಾರ್ ಅವರ ಕಾರ್ಯವೈಖರಿ ಬಗ್ಗೆ ಎಲ್ಲಿಯೂ ಅಪಸ್ವರ ಕೇಳಿಬಂದಿಲ್ಲ. ಇದರಿಂದ ಹೆಬ್ಬಾರ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಪಕ್ಕಾ ಎಂದೇ ಅಭಿಪ್ರಾಯ ವ್ಯಕ್ತವಾಗಿದೆ.
ಯಲ್ಲಾಪುರ: ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಹೆಬ್ಬಾರ ಭೇಟಿ
ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೂ ಕೇಳಿಬಂದಿತ್ತು. ಪಕ್ಷ ನಿಷ್ಠೆ ಹಾಗೂ ನಿರಂತರವಾಗಿ ಆಯ್ಕೆಯಾಗುತ್ತಿರುವ ಕಾಗೇರಿ ಹೆಸರೂ ಕೂಡ ಕೆಲವು ದಿನಗಳಿಂದ ಮುಖ್ಯಮಂತ್ರಿ ಹುದ್ದೆಯ ಸುತ್ತ ಗಿರಕಿ ಹೊಡೆಯುತ್ತಲೇ ಇತ್ತು. ಆದರೆ ಸದ್ಯದ ಮಟ್ಟಿಗೆ ಕಾಗೇರಿ ಅವರು ವಿಧಾನಸಭಾಧ್ಯಕ್ಷ ಹುದ್ದೆಯಲ್ಲಿಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರ ಕಾರ್ಯವೈಖರಿ ಪಕ್ಷದ ಹೈಕಮಾಂಡಿಗೆ ತೃಪ್ತಿತಂದಿಲ್ಲ. ಜತೆಗೆ ಈಚೆಗೆ ನಡೆದ ಹಗರಣವೂ ಅವರ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಇದರಿಂದ ನೂತನ ಸಚಿವ ಸಂಪುಟದಲ್ಲಿ ಶಶಿಕಲಾ ಜೊಲ್ಲೆ ಅವರ ಹೆಸರನ್ನು ಕೈಬಿಡಲಾಗುತ್ತದೆ ಎನ್ನುವುದು ಬಲವಾಗಿ ಕೇಳಿಬರುತ್ತಿದೆ. ಹೀಗಾದಲ್ಲಿ ಕಾರವಾರ ಶಾಸಕಿ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇಬ್ಬರಲ್ಲಿ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತ. ಏಕೆಂದರೆ ಸಂಪುಟದಲ್ಲಿ ಒಬ್ಬರಾದರೂ ಮಹಿಳೆಯರಿಗೆ ಆದ್ಯತೆ ನೀಡಬೇಕಾಗಿದೆ.
ರೂಪಾಲಿ ನಾಯ್ಕ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯ, ವಿವಾದಗಳಿಲ್ಲದೆ ಪಕ್ಷ ನಿಷ್ಠೆಯಿಂದ ದುಡಿಯುತ್ತಿರುವ ಹಿನ್ನೆಲೆಯಲ್ಲಿ ರೂಪಾಲಿ ನಾಯ್ಕ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಒಲಿದರೂ ಅಚ್ಚರಿ ಇಲ್ಲ. ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಆನಂದ ಅಸ್ನೋಟಿಕರ್ ಹೀಗೆ ಜಿಲ್ಲೆಯಲ್ಲಿ ಇಬ್ಬರು ಸಚಿವರಾಗಿದ್ದರು. ಈ ಬಾರಿಯೂ ಇಬ್ಬರು ಸಚಿವರಾಗಲಿದ್ದಾರೆಯೇ ಎನ್ನುವ ಕುತೂಹಲ ಉಂಟಾಗಿದೆ.