Asianet Suvarna News Asianet Suvarna News

ಚನ್ನಪಟ್ಟಣಕ್ಕೆ ಮೈತ್ರಿ ಅಭ್ಯರ್ಥಿ ಯಾರು..? ಎಚ್‌ಡಿಕೆ ಸ್ಪಷ್ಟನೆ

ಇತ್ತೀಚೆಗೆ ಮಹಾನುಭಾವರು ಇಲ್ಲಿಗೆ ಬಂದು ಚನ್ನಪಟ್ಟಣ ನನ್ನ ಹೃದಯ ಎಂದು ಹೇಳಿಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಚನ್ನಪಟ್ಟಣದ ದಾರಿ ಗೊತ್ತಿರಲಿಲ್ಲವಾ, ಚನ್ನಪಟ್ಟಣಕ್ಕೆ ಅವರ ಕೊಡುಗೆ ಏನು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರೇದೇ ಕೇಂದ್ರ ಸಚಿವ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು.

Who is the alliance candidate for Channapatnam  HD Kumaraswamy clarification snr
Author
First Published Jun 24, 2024, 11:57 AM IST | Last Updated Jun 24, 2024, 12:19 PM IST

 ಚನ್ನಪಟ್ಟಣ : ಇತ್ತೀಚೆಗೆ ಮಹಾನುಭಾವರು ಇಲ್ಲಿಗೆ ಬಂದು ಚನ್ನಪಟ್ಟಣ ನನ್ನ ಹೃದಯ ಎಂದು ಹೇಳಿಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಚನ್ನಪಟ್ಟಣದ ದಾರಿ ಗೊತ್ತಿರಲಿಲ್ಲವಾ, ಚನ್ನಪಟ್ಟಣಕ್ಕೆ ಅವರ ಕೊಡುಗೆ ಏನು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರೇದೇ ಕೇಂದ್ರ ಸಚಿವ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಲೂಕಿನ ಬೈರಾಪಟ್ಟಣದ ಬಳಿ ಬಮೂಲ್ ಶಿಬಿರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರ ಹಾಗೂ ರಾಸು ಮರಣ ಪರಿಹಾರ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವರ ಸಹೋದರ ಜನಸಂಪರ್ಕ ಸಭೆ ಮಾಡಿದ್ದರಲ್ಲ ಅದು ಏನಾಯ್ತು. ಮೊನ್ನೆ ಬಂದು ಅವರು ಸುಮಾರು 15ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಸಚಿವರಾಗಿದ್ದಾರಲ್ಲ, ಆಗ ಅವರಿಗೆ ಚನ್ನಪಟ್ಟಣದ ನೆನಪಾಗಲಿಲ್ಲವೇ, ತಮ್ಮ ಅವಧಿಯಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಸಭೆ:

ನಾನು ಒಂದೇ ಒಂದು ಕೆಡಿಪಿ ಸಭೆ ನಡೆಸಿಲ್ಲ ಎನ್ನುತ್ತಾರೆ. ಮೊನ್ನೆ ಬಂದ ಇವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಹೊರಗಿಟ್ಟು ಬರುವಂತೆ ಸೂಚಿಸಿದ್ದಾರೆ. ಅದೇ ರೀತಿ ಮಾಧ್ಯಮದವರನ್ನು ಹೊರಗಿಟ್ಟು ಸಭೆ ಮಾಡಿದ್ದಾರೆ. ಅಧಿಕಾರಿಗಳಿಗೆ ಯಾವ ರೀತಿ ಮಾತನಾಡ್ತಾರೆ ಅಂತ ಗೊತ್ತಿದೆ. ನಾನು ಎಂದಾದರೂ ಈ ರೀತಿ ನಡೆದುಕೊಂಡಿದ್ದೇನಾ? ಇಂತವರ ಆಡಳಿತ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ಏನು ಮಾಡಲು ಆಗುವುದಿಲ್ಲ:

ಅದೆಲ್ಲೋ ಕಲ್ಲು ಹೊಡೆದುಕೊಂಡು ಕೂತಿದ್ದವರಿಗೆ ಈಗ ಚನ್ನಪಟ್ಟಣ ನೆನಪಾಗಿದೆ. ಜನ ಇದನ್ನ ಚನ್ನಪಟ್ಟಣ ಜನತೆ ನಂಬಬಾರದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ನಾನು ಬಂದ ಮೇಲೆ ಜಿಲ್ಲೆ ಅಭಿವೃದ್ಧಿಯಾಗಿದೆ. ನಮ್ಮ ಪಕ್ಷ, ದೇವೇಗೌಡರು ಹಾಗೂ ನನ್ನನ್ನು ಮುಗಿಸಲು ಇವರ ಯಾರು? ನಮ್ಮ ರಾಜಕೀಯ ಜೀವನ ಮುಗಿಸಲು ಶಕ್ತಿ ಏನಾದರೂ ಇದ್ದರೆ ಅದು ನಿಮ್ಮ ಕೈಯಲ್ಲಿ ಮಾತ್ರ. ಇಂತಹ ನೂರಾರು ಜನ ಬಂದರೂ ಏನು ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.

ಅಲ್ಪಸಂಖ್ಯಾತರ ವಿರುದ್ಧ ಆಕ್ರೋಶ:

ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಏಳೆಂಟು ಸಾವಿರ ಹೆಚ್ಚಳ ಮಾಡುವಂತೆ ಡಿಕೆಶಿ ಸೂಚಿಸಿದ್ದಾರೆ ಎಂದು ಯೋಗೇಶ್ವರ್ ನನಗೆ ತಿಳಿಸಿದರು. ತಮ್ಮ ವೋಟು ಹೆಚ್ಚಿಸಿಕೊಳ್ಳಲು ಅಣ್ಣತಮ್ಮಂದಿರು ಏನೂ ಮಾಡುತ್ತಿದ್ದಾರೆ. ದೇವೇಗೌಡರು ಹಾಗೂ ನನ್ನ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವ ರೀತಿ ಸಹಕಾರ ಕೊಟ್ಟಿದ್ದೇವೆ ಎಂದು ನೆನಪಿಸಿಕೊಳ್ಳಿ. ರಾಮನಗರದಲ್ಲಿ ಹಿಂದೆ ಮುಸ್ಲಿಂ ಕಾಲೋನಿ ಹೇಗಿತ್ತು? ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ನಾವು ಯಾವ ರೀತಿ ಅಭಿವೃದ್ಧಿ ಮಾಡಿದ್ದೀವಿ ಅದನ್ನ ನೆನಪಿಸಿಕೊಳ್ಳಿ ಎಂದು ಮುಸ್ಲಿಂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ಬೆಲೆ ಹೆಚ್ಚಿಸಬೇಕು:

ಹಾಲು ಉತ್ಪಾದಕರಿಗೆ ಹೆಚ್ವಿನ ಸಹಕಾರ ಬೇಕಾಗಿದೆ. ಪಕ್ಕದ ಗುಜರಾತ್ ನಲ್ಲಿ ಒಂದು ಲೀಟರ್‌ ಹಾಲಿಗೆ ೫೬ ರು. ಇದೆ. ಆದರೆ ನಮ್ಮಲ್ಲಿ ಇನ್ನೂ ೩೦ ರು. ನೀಡಲಾಗುತ್ತಿದೆ. ಈ ಸರ್ಕಾರ ಸುಮಾರು ೭೦೦ ಕೋಟಿ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಕಳೆದ ಆರೇಳು ತಿಂಗಳಿಂದ ಹಣ ಬಾರದೇ ಜನರಿಗೆ ತೊಂದರೆ ಆಗಿದೆ. ಕೇಂದ್ರವೂ ಸಹ ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ನಿಮ್ಮಿಂದ ಸಿಎಂ ಆದೆ:

ಈ ಬಾರಿ ಅನಿವಾರ್ಯವಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಚನ್ನಪಟ್ಟಣದ ಜನ ನನಗೆ ಆಶೀರ್ವಾದ ಮಾಡಿ ಸಿಎಂ ಮಾಡಿದರು. ದೊರೆತ ಅವಕಾಶ ಬಳಸಿಕೊಂಡು ರಾಜ್ಯದ ರೈತರ ೨೫ ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಈ ಜಿಲ್ಲೆಯ ಜನತೆ ರಾಜಕೀಯವಾಗಿ ಜನ್ಮ ಕೊಟ್ಟಿರೋದನ್ನ ನಾನು ಬದುಕಿರೋವರೆಗೂ ಮರೆಯಲ್ಲ ಎಂದರು.

ಜನರ ನಿರೀಕ್ಷೆ ಭಯ ಹುಟ್ಟಿಸಿದೆ:

ಸಿ.ಪಿ.ಯೋಗೇಶ್ವರ್ ಹಾಗೂ ನಾನು ಎರಡು ಬಾರಿ ವಿರುದ್ಧವಾಗಿ ಚುನಾವಣೆ ಮಾಡಿದ್ದೀವಿ. ಈಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೊತೆಯಾಗಿ ಕೆಲಸ ಮಾಡ್ತಿದ್ದೀವಿ. ನಾನು ಕೇಂದ್ರದಲ್ಲಿ ಮಂತ್ರಿ ಆದ ಮೇಲೆ ನಿತ್ಯ ಮನೆಯ ಬಳಿ ಸಾವಿರಾರು ಜನ ಬರ್ತಿದ್ದಾರೆ. ಜನ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಇದು ಭಯಮೂಡಿಸಿದೆ. ಬಹಳ ಜನರಿಗೆ ನಾನು ಕೃಷಿ ಸಚಿವ ಆಗಬೇಕು ಅಂತ ಆಸೆ ಇತ್ತು. ಆದರೆ ಮೋದಿಯವರು ಎರಡು ದೊಡ್ಡ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ. ಇದು ಕಠಿಣವಾದ ಹಾಗೂ ಸವಾಲಿನ ಮಾರ್ಗ. ರಾಜ್ಯದ ಆಡಳಿತ ಒಂದು ರೀತಿ, ಆದರೆ ಕೇಂದ್ರದ ಆಡಳಿತವೇ ವೇರೆ. ನಾನು ಆಡಳಿತಕ್ಕೆ ಹೊಂದಾಣಿಕೆ ಆಗಬೇಕಾದರೆ ಸ್ವಲ್ಪ ಸಮಯ ಬೇಕು. ರಾಜ್ಯದ ಕೆಲಸಗಳ ಬಗ್ಗೆ ಗಮನಹರಿಸಲು ಸಮಯ ಬೇಕು. ನಾನು ಎಲ್ಲೇ ಇದ್ರೂ ನನ್ನ ಹೃದಯ ನನ್ನ ಮನಸ್ಸು ಇಲ್ಲೇ ಇರುತ್ತೆ ಎಂದರು.

ನಮ್ಮನ್ನು ಮುಗಿಸಲು ಇವರು ಷಡ್ಯಂತ್ರ ರಚಿಸಿದ್ದಾರೆ. ಇತ್ತೀಚೆಗೆ ನಡೆದ ಕೆಲ ವಿದ್ಯಮಾನಗಳ ಕುರಿತು ಮಾಜಿ ಪ್ರಧಾನಿ ದೇವೇಗೌಡರನ್ನು ಹಾಗೂ ನನ್ನನು ಎಳೆದು ತರುತ್ತಿದ್ದು, ಇದಕ್ಕೆ ನಾವೇನು ಮಾಡಲಾಗುತ್ತದೆ. ಆ ವಿಚಾರ ಕುರಿತು ಕಾನೂನು ತೀರ್ಮಾನ ತೆಗೆದುಕೊಳ್ಳುತ್ತದೆ. ಅಂತೆಯೇ ಚಿತ್ರನಟನ ಬಂಧನಕ್ಕೆ ನಾನು ಸೂಚಿಸಿದ್ದೆ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭ್ಯರ್ಥಿ ಗೊಂದಲ ಬೇಡ

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರೇ ಅಭ್ಯರ್ಥಿ ಅಗಬಹುದು! ಅಥವಾ ಜೆಡಿಎಸ್ ಅಭ್ಯರ್ಥೀನೇ ನಿಲ್ಲಬಹುದು. ಆದರೆ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ. ಅಭ್ಯರ್ಥಿ ಆಯ್ಕೆ ಬಗ್ಗೆ ನಾವು ಕೂತು ಚರ್ಚಿಸುತ್ತೇವೆ. ನಿಖಿಲ್ ಈಗಾಗಲೇ ಎರಡು ಬಾರಿ ಸೋತು ನೋವು ತಿಂದಿದ್ದಾನೆ. ಆ ನೋವು ನನಗೆ ಮಾತ್ರ ಗೊತ್ತು. ಆದರೆ ಕಾರ್ಯಕರ್ತರು ಮಾತ್ರ ಗೊಂದಲ ಮಾಡಿಕೊಳ್ಳದೆ ಕೆಲಸ ಮಾಡಿ.

-ಕುಮಾರಸ್ವಾಮಿ, ಕೇಂದ್ರ ಸಚಿವರು

ಅಧಿಕಾರಿಗಳ ವಿರುದ್ಧ ಎಚ್‌ಡಿಕೆ ಆಕ್ರೋಶ!

ಅಧಿಕಾರಿಗಳು ಅಣ್ಣತಮ್ಮಂದಿರಿಗೆ ಗುಲಾಮಗಿರಿ ಮಾಡುವುದನ್ನು ಬಿಟ್ಟು ಜನರ ಕೆಲಸ ಮಾಡಿ. ಗುಲಾಮರಾಗಲು ಒಂದು ಇತಿಮಿತಿ ಇದೆ ಎಂಬುದನ್ನು ಮರೆಯಬೇಡಿ. ನಾವೇನು ರಾಜಕೀಯದಿಂದ ನಾಳೆ ಬೆಳಗ್ಗೆ ನಿವೃತ್ತಿ ಹೊಂದುವುದಿಲ್ಲ. ಮುಂದಿನ ದಿನಗಳಲ್ಲಿ ನಮಗೂ ರಾಜ್ಯದಲ್ಲಿ ಅಧಿಕಾರ ಸಿಗುತ್ತದೆ. ಆಗ ಈ ಅಧಿಕಾರಿಗಳು ನನ್ನ ಕೈಗೆ ಸಿಗುವುದಿಲ್ಲವಾ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇವರು ಬಂದು ಹೇಳಿದರು ಎಂದು ಅಧಿಕಾರಿಗಳು ಈಗ ಕೆಲಸ ಮಾಡಲು ನಿಂತಿದ್ದಾರೆ. ಅಧಿಕಾರಿಗಳು ಗುಲಾಮತನ ಎಷ್ಟು ವರ್ಷ ನಡೆಸುತ್ತಾರೆ ಎಂದು ನೋಡುತ್ತೇನೆ. ಈ ರಾಜ್ಯದ ಜನ ನಮ್ಮನ್ನು ಉಳಿಸುತ್ತಾರೆ. ನಮಗೂ ಅಧಿಕಾರ ಸಿಗುತ್ತದೆ, ಆಗ ನೀವು ನನ್ನ ಕೈಗೆ ಸಿಗುತ್ತೀರಾ. ಈ ಎಚ್ಚರಿಕೆಯನ್ನು ಇಡೀ ರಾಜ್ಯದ ಅಧಿಕಾರಿಗಳಿಗೆ ನೀಡುತ್ತಿದ್ದೇನೆ ಎಂದರು.

ನಾನು ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ನನ್ನ ನಡುವಳಿಕೆಯನ್ನು ಅವರು ನೋಡಿದ್ದಾರೆ. ಇವತ್ತು ಯಾವ ರೀತಿ ನಡುವಳಿಕೆ ನಡೆಯುತ್ತಿದೆ ಎಂದು ನೋಡಿದ್ದೇನೆ. ನಮ್ಮ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿಲ್ಲ. ಈಗ ನಡೆಯುತ್ತಿರುವುದೇ ಬೇರೆ. ಈ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ನೋಡುತ್ತಿದ್ದೇನೆ. ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂದು ಅಧಿಕಾರಿಗಳು ಕರಪತ್ರ ಹಿಡಿದ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಇದನ್ನು ಚುನಾವಣೆಗೆ ಮುಂಚೆಯೇ ಹಂಚಿದ್ದರೆ ಇನ್ನು ೧೦ಸಾವಿರ ಮತ ಹೆಚ್ಚಾಗುತ್ತಿತ್ತು ಎಂದು ವ್ಯಂಗ್ಯವಾಡಿದರು.

ಪೊಡಿ, ಇ-ಖಾತೆ ಕತೆ ನೋಡಿದ್ದೇನೆ. ಮೊನ್ನೆಯಿಂದ ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇವರು ಬಂದು ಹೇಳಿದ ಮೇಲೆ ಕೆಲಸ ಮಾಡಬೇಕಾ?. ಹಿಂದೆ ಕಚೇರಿಗೆ ಬಂದ ಜನರಿಗೆ ಲಂಚಕ್ಕೆ ಪೀಡಿಸುತ್ತಿದ್ದ ಅಧಿಕಾರಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಹಿಂದೆ ಕೆಲಸ ಮಾಡಬೇಡಿ ಎಂದು ಯಾರು ತಡೆದಿದ್ದರೂ. ಇವರು ಹೆದರಿಸಿದರು ಎಂದು ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios