ಸಿದ್ದರಾಮಯ್ಯ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ: ಪ್ರತಾಪ್ ಸಿಂಹ
ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗ್ತೀವಿ ಎನ್ನುತ್ತಿರುವವರಿಗೆ ಕ್ಷೇತ್ರ ಹುಡುಕಾಡುವ ದೈನೇಸಿ ಸ್ಥಿತಿ ಏಕೆ ಬಂತು? ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಮೈಸೂರು (ಡಿ.11): ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗ್ತೀವಿ ಎನ್ನುತ್ತಿರುವವರಿಗೆ ಕ್ಷೇತ್ರ ಹುಡುಕಾಡುವ ದೈನೇಸಿ ಸ್ಥಿತಿ ಏಕೆ ಬಂತು? ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಮೊದಲು ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Election) ನಾವು ಯಾವುದೇ ಪ್ರಚಾರ ಮಾಡದಿದ್ದರೂ ಕುಳಿತುಕೊಂಡೇ ಗೆಲ್ಲುತ್ತೇವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಕೋಲಾರಕ್ಕೆ ಹೋಗಲೋ, ವರುಣಕ್ಕೆ ಹೋಗಲೋ ಎನ್ನುತ್ತಿರುವ ಸಿದ್ದರಾಮಯ್ಯ, ವರುಣ ಕ್ಷೇತ್ರದ ಸಣ್ಣ ಸಣ್ಣ ಹಳ್ಳಿಗಳಿಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವರುಣ ಬಿಟ್ಟು ಬೇರೆಲ್ಲಿಂದಾದರೂ ಸ್ಪರ್ಧಿಸಲಿ. ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧಿಸಿ ಗೆಲ್ಲಲಿ. ಪ್ರತಿ ಚುನಾವಣೆಯಲ್ಲೂ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಡುವ ವ್ಯಕ್ತಿಯ ಮಾತಿಗೆ ಹೆಚ್ಚಿನ ಮನ್ನಣೆ ಕೊಡುವ ಅಗತ್ಯವಿಲ್ಲ ಎಂದರು.
ಗುಜರಾತ್‌ನಲ್ಲಿ ಕಳೆದ 27 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಇತಿಹಾಸದಲ್ಲೇ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಸಿದ್ದಾರೆ. ದೇಶದ ನಾಯಕ ಮೋದಿಯವರ ನಾಯಕತ್ವದ ಮೇಲೆ ಅಚಲವಾದ ವಿಶ್ವಾಸ ತೋರಿಸಿದ್ದಾರೆ. ಮೋದಿಯವರು ಕರ್ನಾಟಕಕ್ಕೆ ಬಂದಾಗಲೂ ಅವರ ಅಭಿಮಾನಿಗಳ ದೊಡ್ಡ ಗುಣ ಅವರ ಪರ ಧ್ವನಿ ಎತ್ತುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಮಂದಿಯನ್ನು ಕರ್ನಾಟಕದ ಜನ ಮೋದಿ ಅವರ ಹೆಸರಿನಲ್ಲಿ ಗೆಲ್ಲಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಜನರು ಮುಂದುವರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ..?
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಹಿಂದೆ ಸರಿದರಾ ಎನ್ನುವ ಅನುಮಾನ ಕಂಡುಬರುತ್ತಿದೆ. ವರುಣಾ ಮತ್ತು ಕೋಲಾರದಲ್ಲಿ ಬೂತ್ ಮಟ್ಟದಲ್ಲಿ ಸಮೀಕ್ಷೆ ಮಾಡುತ್ತಿರುವ ಸಿದ್ದರಾಮಯ್ಯ ಅವರ ಆಪ್ತರು ಸಿದ್ದು ಪರ ಅಲೆ ಇದೆಯೇ ಎಂದು ಸರ್ವೇ ಮಾಡಿದ್ದಾರೆ. ಅಂತಿಮವಾಗಿ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ಬಂದಿದೆ. ಜೊತೆಗೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರವೇ ಅದೃಷ್ಟದ ಕ್ಷೇತ್ರವೆಂದು ಅವರ ಪುತ್ರ ಯತೀಂದ್ರ ಅವರು ಸಲಹೆ ನೀಡಿದ್ದಾರೆ.
ಮುಂಬರುವ ವಿಧಾನಸಬಾ ಚುನಾವಣೆ ವೇಳೆ ಕ್ಷೇತ್ರವನ್ನು ಹುಡುಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ವರುಣಾ, ಕೋಲಾರ, ಕುಷ್ಟಗಿ, ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಕೇಳಿಬಂದಿತ್ತು. ಆದರೆ, ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಬ್ಬರಿಗೆ ಕೇವಲ ಒಂದು ಟಿಕೆಟ್ ನೀಡುವ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಆಪ್ತರು ಕಿಡಿಕಾರಿದ್ದರು. ಆದರೆ, ಈಗ ಕೋಲಾರ ಮತ್ತು ವರುಣಾ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಸಿದ್ದಪರ ಇರುವ ಅಲೆಯನ್ನು ಸಮೀಕ್ಷೆ ಮಾಡಲಾಗಿದೆ. ಈ ವೇಳೆ ಕೋಲಾರದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಹೀಗಾಗಿ, ಕೋಲಾರವನ್ನು ಬಿಟ್ಟು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಆಪ್ತರಿಂದ ಸಿದ್ದರಾಮಯ್ಯ ಅವರಿಗೆ ಸಲಹೆ ಬಂದಿದೆ.
Karnataka Politics : ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ : ಸ್ವಾಮೀಜಿ
ಕೋಲಾರದ ಸಮಸ್ಯೆ ಬಗ್ಗೆ ಮುನಿಯಪ್ಪ ಮನವರಿಕೆ: ಈಗಾಗಲೇ ಕೋಲಾರ ಪ್ರವಾಸ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ಎಲ್ಲ ನಾಯಕರ ಬೆಂಬಲ ಸಿಕ್ಕಿರಲಿಲ್ಲ. ಈ ವೇಳೆ ಸ್ಥಳೀಯ ಪ್ರಬಲ ಮುಖಂಡ ಕೆ.ಎಚ್. ಮುನಿಯಪ್ಪ ಕೂಡ ಹಾಜರಾಗದೇ ಫೋನ್‌ನಲ್ಲಿ ಮಾತನಾಡಿದ್ದರು. ಜೊತೆಗೆ, ಕೋಲಾರ ಜಿಲ್ಲೆಯಲ್ಲಿ ಸ್ಥಳೀಯ ನಾಯಕರ ನಡುವೆ ಹೊಂದಾಣಿಕೆ ಕೊರತೆಯಿದ್ದು, ಅದನ್ನು ಸರಿಪಡಿಸುವಂತೆಯೂ ಸಲಹೆ ನೀಡಿದ್ದರು. ಇಡೀ ಕ್ಷೇತ್ರದಲ್ಲಿ ಮಾಡಿದ ಸಮೀಕ್ಷೆಯಿಂದ ಮತ್ತಷ್ಟು ಸಮಸ್ಯೆಗಳು ಕಂಡುಬಂದಿದ್ದು, ಇಲ್ಲಿ ಸ್ಪರ್ಧೆ ಮಾಡುವುದು ಬೇಡವೆನ್ನುವ ನಿರ್ಧಾರಕ್ಕೆ ಬರಲಾಗಿದೆ. ಕೋಲಾರ ಹೊರತುಪಡಿಸಿ ಬೇರೆ ಕ್ಷೇತ್ರಗಳ ಬಗ್ಗೆಯೂ ಸರ್ವೆ ಮಾಹಿತಿ ಪಡೆಯಲಾಗುತ್ತಿದ್ದು, ಕೊಪ್ಪಳದ ಕುಷ್ಟಗಿ ಬಗ್ಗೆ ಸರ್ವೇ ವರದಿ ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ರಾಜ್ಯ ವಿವಿಧ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ವರುಣ ಕ್ಷೇತ್ರವೇ ಸೂಕ್ತ ಎಂಬ ಅಭಿಪ್ರಾಯವನ್ನು ಆಪ್ತರು ಹೊರ ಹಾಕಿದ್ದಾರೆ.
ವರುಣಾ ಕ್ಷೇತ್ರ ಅದೃಷ್ಟದ ಕ್ಷೇತ್ರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರವೇ ಅದೃಷ್ಟದ ಪ್ರದೇಶವಾಗಿದೆ. ಇಲ್ಲಿ ಸ್ಪರ್ಧೆ ಮಾಡಿ ಗೆದ್ದಾಗ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಸಿಕ್ಕಿದೆ. ಈಗಲೂ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯ ಅರ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಜಾತಿ ಹಾಗೂ ಪಕ್ಷದ ದೃಷ್ಟಿಯಿಂದ ನೋಡಿದರೆ ಹಲವಾರು ಕ್ಷೇತ್ರಗಳು ಸೇಫ್ ಇವೆ. ಇದು ಅವರ ಕೊನೆ ಚುನಾವಣೆ ಆಗಿದ್ದರಿಂದ ವರುಣಾದಿಂದ ನಿಲ್ಲಲಿ ಎನ್ನುವುದು ಆಸೆ. ಅಪ್ಪ ವರುಣಾಗೆ ಬಂದರೆ ನಾನು ಸ್ಪರ್ಧೆ ಮಾಡಲ್ಲ. ಅಪ್ಪನಿಗಾಗಿ ದುಡಿಯುತ್ತೇನೆ. ಸಿದ್ದರಾಮಯ್ಯ ತಮ್ಮ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಈಗಲೂ ಸಿದ್ದರಾಮಯ್ಯ ಗೆದ್ದರೆ ಮುಖ್ಯಮಂತ್ರಿ ಆಗುವ ಅವಕಾಶಗಳಿವೆ. ವರುಣಾ ಕ್ಷೇತ್ರದಲ್ಲಿ ನಿಂತಾಗೆಲ್ಲ ಅವರಿಗೆ ಅಧಿಕಾರ ಸಿಕ್ಕಿದೆ. ಹಾಗಾಗಿ ಈ ಬಾರಿಯೂ ಸಿಗಬಹುದು ಎಂದು ಮುಖ್ಯಮಂತ್ರಿ ಕೂಗಿಗೆ ಯತೀಂದ್ರ ಧ್ವನಿಗೂಡಿಸಿದ್ದಾರೆ.