ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಭಾವಿ ಮುಖ್ಯಮಂತ್ರಿ ಎನ್ನುತ್ತಲೇ ತಮ್ಮ ಆಶೀರ್ವಚನ ಆರಂಭಿಸಿದ ಮೈಸೂರು ಕನಕಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್‌ ಮಾಡಿದರು

ಕೆ.ಆರ್‌.ಪೇಟೆ: (ನ.31): ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಭಾವಿ ಮುಖ್ಯಮಂತ್ರಿ ಎನ್ನುತ್ತಲೇ ತಮ್ಮ ಆಶೀರ್ವಚನ ಆರಂಭಿಸಿದ ಮೈಸೂರು ಕನಕಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್‌ ಮಾಡಿದರು.

ಕೆ.ಆರ್‌.ಪೇಟೆ (KR pete) ಪಟ್ಟಣದ ಪುರಸಭೆ ಪಕ್ಕದ ಮೈದಾನದಲ್ಲಿ ಆಯೋಜಿಸಿದ್ದ 535ನೇ ಕನಕ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಆಶೀರ್ವಚನ ನೀಡಿ ಮಾತನಾಡಿದರು.

ಎಲ್ಲಿ ಭಕ್ತರಿರುತ್ತಾರೂ ಅಲ್ಲಿ ಭಗವಂತನಿರುತ್ತಾನೆ. ಎಲ್ಲಿ ಭಗವಂತನಿರುತ್ತಾನೂ ಅಲ್ಲಿ ಭಕ್ತರಿರುತ್ತಾರೆ. ಹಾಗೆಯೇ ಸಿದ್ದರಾಮಯ್ಯ ಇರುತ್ತಾರೋ ಅಲ್ಲಿ ನಮ್ಮ ಸಮಾಜವಿರುತ್ತದೆ. ಎಲ್ಲಿ ನಮ್ಮ ಸಮಾಜವಿರುತ್ತದೆಯೋ ಅಲ್ಲಿ ಸಿದ್ದರಾಮಯ್ಯ ಇರುತ್ತಾರೆ. ಸಿದ್ದರಾಮಯ್ಯ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಸಿದ್ದರಾಮಯ್ಯ ನಮ್ಮೆಲ್ಲರ ಪಾಲಿಗೆ ಆಧುನಿಕ ಕನದಾಸ, ಆಧುನಿಕ ಸಂಗೊಳ್ಳಿ ರಾಯಣ್ಣ, ಆಧುನಿಕ ಚಂದ್ರಗುಪ್ತ ಮೌರ್ಯ, ಆಧುನಿಕ ಅಶೋಕ ಸಾಮ್ರಾಟ, ಆಧುನಿಕ ಅಂಬೇಡ್ಕರ್‌ ಮತ್ತು ಆಧುನಿಕ ದೇವರಾಜ ಅರಸು ಎಂದು ಬಣ್ಣಿಸಿದರು.

ಬಿಜೆಪಿಗರ ಕಾಲದಲ್ಲಿ ನಿಂತು ಹೋಗಿರುವ ಅನ್ನಭಾಗ್ಯ, ವಿದ್ಯಾಸಿರಿ ಮುಂತಾದ ಭಾಗ್ಯಗಳು ಮತ್ತೆ ಚಾಲನೆಗೆ ಬರಬೇಕಾದರೆ ಸಿದ್ದರಾಮಯ್ಯ ಮತ್ತೊಂದು ಸಾರಿ ನಾಡಿನ ಮುಖ್ಯಮಂತ್ರಿಯಾಗಬೇಕು. ಅಂಬೇಡ್ಕರ್‌ ಮತ್ತು ಸಿದ್ದರಾಮಯ್ಯ ನವ ಭಾರತವನ್ನು ಬೆಳಗುವ ಸೂರ್ಯ ಚಂದ್ರರಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಹೆಚ್‌.ಸಿ.ಮಹದೇವಪ್ಪ ಕನಕದಾಸರ ಬಗ್ಗೆ ಮಾತನಾಡಿದರಲ್ಲದೆ ಶೋಷಿತ ಸಮುದಾಯಗಳ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಮತ್ತೆ ನಾಡಿನ ಮುಖ್ಯಮಂತ್ರಿಯಾಗಬೇಕೆಂದರು. ಶಾಸಕ ಬೈರತಿ ಸುರೇಶ್‌, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ರಾಜ್ಯ ಪ್ರದೇಶ ಕಾಂಗ್ರೆಸ್‌ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಹಲವರು ಮಾತನಾಡಿದರು.

ಅಸಮರ್ಥ ಬಿಜೆಪಿ ಸರ್ಕಾರ: ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಮುಖ್ಯವಲ್ಲ. ಬದಲಾಗಿ ದೇಶದ ಹಿತಚಿಂತನೆ ಮುಖ್ಯ. ದೇಶದ ಮತ್ತು ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆ. ನಿಮ್ಮ ಹಿತಕಾಯುವ ಸರ್ಕಾರ ನಮಗೆ ಬೇಕು. ಅಭಿವೃದ್ಧಿಯ ಜೊತೆಗೆ ದಲಿತರು, ರೈತರು ಮತ್ತು ಶೋಷಿತರನ್ನು ಗಮನದಲ್ಲಿಟ್ಟು ಕೆಲಸ ಮಾಡುವ ಸರ್ಕಾರ ನಮಗೆ ಬೇಕು. ಜಾತಿ-ಧರ್ಮದ ತಳಹದಿಯಲ್ಲಿ ಸರ್ಕಾರ ರಚನೆಯಾದರೆ ಅದು ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಚಲುವರಾಯಸ್ವಾಮಿ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ 50 ವರ್ಷಗಳಷ್ಟುಮುಂದಿತ್ತು. ಇದೀಗ 50 ವರ್ಷಗಳಷ್ಟುಹಿಂದೆ ಬಿದ್ದಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಜನಪರ ಆಲೋಚನೆಯ ನಾಯಕರಿದ್ದಾರೆ. ಒಂದೇ ಒಂದು ರಸ್ತೆ ಗುಂಡಿಯನ್ನೂ ಮುಚ್ಚಲಾರದಷ್ಟುಅಸಮರ್ಥ ಸರ್ಕಾರ ರಾಜ್ಯದಲ್ಲಿದೆ. ಇಂತಹ ಸರ್ಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.

ಸಾಮಾಜಿಕ ನ್ಯಾಯದ ಕೆಲಸ: ನರೇಂದ್ರಸ್ವಾಮಿ

ತಮ್ಮ ಅಧಿಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ನ್ಯಾಯದ ಕೆಲಸ ಮಾಡಿದವರು ನಮ್ಮ ಸಿದ್ದರಾಮಯ್ಯ. ಸಿದ್ದರಾಮಯ್ಯ ಮತ್ತೆ ನಾಡಿನ ಮುಖ್ಯಮಂತ್ರಿಯಾಬೇಕು. ನಮ್ಮ ನಾಯಕರು ರಾಜ್ಯವಾಳುವ ಸಂದರ್ಭದಲ್ಲಿ ಮುಂದಿನ ವರ್ಷ ಮಳವಳ್ಳಿಯಲ್ಲಿ ಪಕ್ಷಾತೀತವಾಗಿ ಕನಕ ಜಯಂತಿ ಆಚರಿಸಬೇಕು.

- ಪಿ.ಎಂ.ನರೇಂದ್ರಸ್ವಾಮಿ ಕೆಪಿಸಿಸಿ ಉಪಾಧ್ಯಕ್ಷ

ಸ್ವಾಭಿಮಾನ ತಂದುಕೊಟ್ಟಸಿದ್ದರಾಮಯ್ಯ: ರೇವಣ್ಣ

ಕನಕ ಜಯಂತಿ ಕುರುಬ ಸಮುದಾಯದ ಸಂಘಟನೆಗೆ ವೇದಿಕೆಯಾಗಿದೆ. ಕುರುಬ ಸಮುದಾಯ ಸಂಘಟಿತರಾದ ಕಾರಣದಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಕುರುಬರು ಕೂಡಿ ಕೆಟ್ಟರು ಎನ್ನುವ ಗಾದೆ ಮಾತಿತ್ತು. ಅದನ್ನು ಸುಳ್ಳು ಮಾಡಿದವರು ಸಿದ್ದರಾಮಯ್ಯ. ಕುರುಬರಿಗೆ ಸ್ವಾಭಿಮಾನ ತಂದು ಕೊಟ್ಟವರು ಸಿದ್ದರಾಮಯ್ಯ. ಕುರುಬರು ಕೂಡಿ ಬೆಳೆದಿದ್ದಾರೆ ಎಂದು ಸಮಾಜಕ್ಕೆ ಸಾರಿರುವ ಸಿದ್ದರಾಮಯ್ಯ ಕುರುಬರಿಗೆ ಸ್ವಾಭಿಮಾನ ತಂದುಕೊಟ್ಟವರು. ಸಿದ್ದರಾಮಯ್ಯ ಈಗ ಕೇವಲ ಕುರುಬರ ನಾಯಕರಲ್ಲ. ಸಮಾಜದ ಎಲ್ಲ ಸಮುದಾಯಗಳ ಶೋಷಿತರ ಪ್ರತಿನಿಧಿ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲೇಬೇಕು ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.