ಬೆಳೆಗೆ ಸೂಕ್ತ ಬೆಲೆ ಸಿಕ್ಕಾಗ ಅನ್ನದಾತನ ಬದುಕು ಹಸನು: ಶ್ರೀ
. ರೈತರಿಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಬೆಳೆದಂತಹ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ನಿಗದಿ ಮಾಡಿದಾಗ ಮಾತ್ರ ಅನ್ನದಾತನ ಬದುಕು ಹಸನಾಗಲು ಸಾಧ್ಯ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ : ನೀರಿನ ಸಮೃದ್ಧಿ ಇದ್ದರೂ ಕೃಷಿಯಲ್ಲಿ ರೈತರು ಆಸಕ್ತಿ ಕಳೆದುಕೊಳ್ಳುತ್ತಿರುವುದಕ್ಕೆ ಸರ್ಕಾರದ ಸೂಕ್ತ ಮಾರ್ಗದರ್ಶನದ ಕೊರತೆ ಕಾರಣ. ಇದೇ ರೀತಿ ರೈತರು ಆಹಾರ ಧಾನ್ಯಗಳ ಬೆಳೆಗಳನ್ನು ಬೆಳೆಯಲು ನಿರಾಸಕ್ತಿ ತೋರಿದರೆ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಲಿದೆ. ರೈತರಿಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಬೆಳೆದಂತಹ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ನಿಗದಿ ಮಾಡಿದಾಗ ಮಾತ್ರ ಅನ್ನದಾತನ ಬದುಕು ಹಸನಾಗಲು ಸಾಧ್ಯ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿ, ಸ್ಪಟಿಕಪುರಿ ಮಹಾ ಸಂಸ್ಥಾನ ಮಠದಲ್ಲಿ ಆಂಧ್ರ ಮಾಜಿ ಸಚಿವ ರಘುವೀರಾರೆಡ್ಡಿ ಹೊರತಂದಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ಸರ್ಕಾರದ ಅಗ್ಗದ ಯೋಜನೆಗಳು ಮನುಷ್ಯನನ್ನು ಮತ್ತಷ್ಟುಸೋಂಬೇರಿ ಮಾಡುತ್ತವೆ. ಮನುಷ್ಯನಿಗೆ ಉಚಿತ ಮೀನನ್ನು ಕೊಡುವುದು ಬಿಟ್ಟು ಮೀನು ಹಿಡಿಯುವ ಕೌಶಲ್ಯ ಕಲಿಸಿದರೆ ತಾನು ಶ್ರಮಜೀವಿ ಆಗುವುದರ ಜೊತೆಗೆ ಇತರರಿಗೆ ಪರಿಶ್ರಮದ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಸಹಕಾರಿಯಾಗುತ್ತದೆ. ತಂತ್ರಜ್ಞಾನ ಆಧಾರಿತ ಕೃಷಿಯ ಬಗ್ಗೆ ಸರ್ಕಾರಗಳು ಹೆಚ್ಚು ಗಮನ ಕೊಡುವ ಅವಶ್ಯಕತೆ ಇದ್ದು ಕಡಿಮೆ ನೀರಿನ ಪ್ರಮಾಣ, ಕಡಿಮೆ ಖರ್ಚು ಮಾಡಿ ಹೆಚ್ಚು ಲಾಭ ತರುವಂತಹ ಕೃಷಿಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಆಂಧ್ರ ಮಾಜಿ ಕೃಷಿ ಸಚಿವ ಹಾಗೂ ಎಪಿಸಿಸಿ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಎನ್. ರಘುವೀರ ರೆಡ್ಡಿ, ಮುಖಂಡರಾದ ಪ್ರಭಾಕರ ರೆಡ್ಡಿ, ಬಿ.ಎನ್. ಮೂರ್ತಿ, ಮಂದಲಹಳ್ಳಿ ನಾಗರಾಜು, ತ್ಯಾಗರಾಜು, ಲೋಕೇಶ್, ವರದರಾಜು, ರಂಗನಾಥ, ಬಿ.ಎ.ಹೊನ್ನೇಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.