ನವಗ್ರಾಮ ಮನೆಗಳ ಮರುಹಂಚಿಕೆ ಯಾವಾಗ? ತಾಲೂಕು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನಲಗುತ್ತಿರುವ ಸಂತ್ರಸ್ತರು ಜಿಲ್ಲಾಡಳಿತ ಅಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ಕೊಡದ ಅಧಿ​ಕಾ​ರಿ​ಗಳು

ಸಂಜೀವಕುಮಾರ ಹಿರೇಮಠ

 ಹೊಳೆಆಲೂರ (ಫೆ.19) : ಇಲ್ಲಿಗೆ ಸಮೀಪದ ಹೊಳೆ ಹಡಗಲಿ ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ನವಗ್ರಾಮಗಳ ಮನೆಗಳ ಮರು ಹಂಚಿಕೆ ಕುರಿತು ಒಮ್ಮತದ ಠರಾವು ಪಾಸು ಮಾಡಿ ಎಲ್ಲ ಪ್ರಕ್ರಿಯೆ ಮುಗಿಸಿದ್ದರೂ ಈ ವರೆಗೂ ಮನೆಗಳ ಮರುಹಂಚಿಕೆಯಾಗಿಲ್ಲ. ಫಲಾನುಭವಿಗಳು ಇದರಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ.

2007 ಹಾಗೂ 2009ರಲ್ಲಿ ಮಲಪ್ರಭಾ ಹಾಗೂ ಬೆಣ್ಣಿಹಳ್ಳ(Bennehalla)ದ ಪ್ರವಾಹಕ್ಕೆ ತುತ್ತಾದ ಅನೇಕ ಗ್ರಾಮಗಳಲ್ಲಿ ಹೊಳೆಆಲೂರ ಹೋಬಳಿಯ ಹೊಳೆಹಡಗಲಿ ಗ್ರಾಮವೂ ಒಂದು. ಆಗಿನ ಸರ್ಕಾರ ಸಂತ್ರಸ್ತರಿಗೆ(Victims) ನೆರವಾಗಲೆಂದು ನವಗ್ರಾಮ(Navagrama) ರಚಿಸಿ 305 ನೂತನ ಮನೆ ನಿರ್ಮಾಣ ಮಾಡಿತ್ತು. ಆದರೆ, 10-12 ವರ್ಷಗಳಿಂದ ಮನೆ ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ.

Koppal News: ಜನಾಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಲಾಗದು: ಸಿದ್ದರಾಮಯ್ಯ

ಸ್ಥಳೀಯ ಗ್ರಾಪಂ, ತಾಪಂ ಹಾಗೂ ಕಂದಾಯ ಇಲಾಖೆಯ ನೇತೃತ್ವದಲ್ಲಿ ಅನೇಕ ಬಾರಿ ಸಭೆ ನಡೆಸಿ, ಸಂತ್ರಸ್ತರಿಗೆ ಮನೆ ಹಕ್ಕುಪತ್ರ ವಿತರಿಸಿದ್ದರೂ ಮನೆ ಸಿಗದ ಸಂತ್ರಸ್ತರು ಇನ್ನೂ ಅನೇಕರಿದ್ದು ಅವರ ಕೂಗು ಯಾರಿಗೂ ಕೇಳದಾಗಿದೆ. ನೈಜ ಫಲಾನುಭವಗಳಿಗೆ ಮನೆ ಹಂಚಿಲ್ಲ. ಪಟ್ಟಾಬುಕ್‌ನಲ್ಲಿ ಹೆಸರಿದ್ದವರಿಗೂ ಮನೆ ಬಂದಿಲ್ಲ. ಒಬ್ಬ ಫಲಾನುಭವಿಯೇ ಪ್ರಭಾವ ಬಳಸಿ 6ರಿಂದ 8 ಮನೆಗಳ ಹಕ್ಕುಪತ್ರ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತ ಬಂದಿದ್ದಾರೆ. ಅದಕ್ಕೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ಈ ಕುರಿತು ಜಿಲ್ಲಾಧಿಕಾರಿ ತಾಲೂಕು ಆಡಳಿತಕ್ಕೆ ಪತ್ರ ಬರೆದಿದ್ದರೂ ರೋಣ ತಾಲೂಕು ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಹೊಳೆಹಡಗಲಿ ಗ್ರಾಪಂ ಸದಸ್ಯರು ಒಳಗೊಂಡು ಪ್ರಮುಖರು ವಾರಕ್ಕೊಮ್ಮೆ ರೋಣ, ಗದಗ ಕಚೇರಿಗೆ ಅಲೆದಾಡಿ, ಅಲೆದಾಡಿ ಬೇಸತ್ತುಹೋಗಿದ್ದಾರೆ. ಸತತ 12 ವರ್ಷಗಳಿಂದ ಗ್ರಾಮಸ್ಥರ ಗೋಳಿಗೆ ಮುಕ್ತಿ ಸಿಕ್ತಿಲ್ಲ. ಗ್ರಾಪಂ ಸದಸ್ಯರು ಕೈಲಾದ ಪ್ರಯತ್ನ ಮಾಡಿದ್ದಾರೆ. ಪಂಚಾಯಿತಿ ಠರಾವು ಪಾಸ್‌ ಮಾಡಿದ ಮೇಲೆ ಅದನ್ನು ಕಾರ್ಯರೂಪಕ್ಕೆ ತರುವುದು ಅಧಿಕಾರಿಗಳ ಕರ್ತವ್ಯ ಎಂದು ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಲೋಕಾಯುಕ್ತರಿಗೆ ದೂರು:

ಮರು ಸರ್ವೇ, ಮನೆ ಹಕ್ಕುಪತ್ರಗಳ ಮರುಹಂಚಿಕೆ ಮಾಡಲು ನಿರ್ಧರಿಸಿ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಿ ತಾಪಂಗೆ ವರದಿ ಕೊಟ್ಟಿದ್ದು, ಜಿಲ್ಲಾಧಿಕಾರಿ ಕಚೇರಿಯಿಂದಲೂ ತಹಸೀಲ್ದಾರ್‌ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ತಟಸ್ಥ ನಿಲುವಿನಿಂದ ಮರುಹಂಚಿಕೆ ಸಮೀಕ್ಷೆ ವಿಳಂಬವಾಗುತ್ತಿದೆ ಎಂದು ಜನರು ಆರೋಪಿಸುತ್ತಾರೆ. ಲೋಕಾಯುಕ್ತರಿಗೂ ದೂರು ನೀಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಗ್ರಾಮದ ಯುವಕ ಸಂಗನಗೌಡ ಕೆಂಚನಗೌಡ್ರ ಹೇಳಿದರು.

ಚುನಾವಣಾ ಬಹಿಷ್ಕಾರ ಎಚ್ಚರಿಕೆ:

ಪಂಚಾಯಿತಿಯ ಠರಾವು, ಜಿಲ್ಲಾಧಿಕಾರಿ ಕಚೇರಿಯ ನಿರ್ದೇಶನದಂತೆ ಶೀಘ್ರ ಮನೆಹಂಚಿಕೆ ಸಮಸ್ಯೆ ಇತ್ಯರ್ಥ ಮಾಡದಿದ್ದರೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಗ್ರಾಪಂ ಸದಸ್ಯರಾದ ರೇಣುಕಾ ಪಡಿಯಪ್ಪನವರ, ನಿಂಗಪ್ಪ ದಂಡಿನ, ಯುವಕರಾದ ಸಂಗನಗೌಡ ಕೆಂಚನಗೌಡ್ರ, ರುದ್ರಪ್ಪ ಮುದಿಯಪ್ಪನವರ ಹಾಗೂ ಇನ್ನೂ ಅನೇಕ ಗ್ರಾಮಸ್ಥರು ತಹಸೀಲ್ದಾರ್‌ಗೆ ಸಮಸ್ಯೆ ಮನವರಿಕೆ ಮಾಡಿ ಇತ್ಯರ್ಥ ಮಾಡಿಕೊಡಬೇಕೆಂದು ನಿರಂತರ ಸಂಪರ್ಕದಲ್ಲಿದ್ದರೂ ಪ್ರಯೋಜನವಾಗುತ್ತಿಲ್ಲ. ಅವರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ಹಾಕಿದರೆ ಅವರು ಜಿಲ್ಲಾಡಳಿತದ ಕಡೆಗೆ ಬೆರಳು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಹೆಣ ಬೀಳೋದನ್ನೇ ಕಾಯುವ ಬಿಜೆಪಿ ಒಂದು ಭಯೋತ್ಪಾದಕ ಪಕ್ಷ : ಬಿಕೆ ಹರಿಪ್ರಸಾದ್‌

ಆಶ್ರಯ ನಿವಾಸಿಗಳಿಗಾಗಿ ನಿರ್ಮಿಸಲಾಗಿರುವ ಮನೆಗಳ ಮರುಹಂಚಿಕೆ ನಡೆಸುವಂತೆ ಎಲ್ಲ ಸದಸ್ಯರ ನೇತೃತ್ವದಲ್ಲಿ ಸಭೆ ಸೇರಿ ಠರಾವು ಪಾಸ್‌ ಮಾಡಿ ತಾಲೂಕು ಆಡಳಿತಕ್ಕೆ ಕಳುಹಿಸಲಾಗಿದೆ. ಆದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ರೇಣುಕಾ ಪಾಟೀಲ, ಗ್ರಾಪಂ ಅಧ್ಯಕ್ಷೆ, ಅಮರಗೋಳ ಗ್ರಾಪಂ

ಈಗಾಗಲೇ ಈ ಕುರಿತು ತಹಸೀಲ್ದಾರ್‌ಗೆ ಹಾಗೂ ಜಿಪಂ, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಶ್ರಯ ಮನೆಗಳನ್ನು ಹಂಚಿಕೆ ಮಾಡುವುದು ತಹಸೀಲ್ದಾರ್‌, ಕಂದಾಯ ಇಲಾಖೆ ವ್ಯಾಪಿಗೆ ಬರಲಿದೆ. ಈ ಕುರಿತು ಮತ್ತೊಂದು ಸಾರಿ ಪ್ರಸ್ತಾವನೆ ಸಲ್ಲಿಸಲಾಗುವುದು.

ಸಂತೋಷ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ