Asianet Suvarna News Asianet Suvarna News

ಕೊಪ್ಪಳ: ಹನುಮಸಾಗರಕ್ಕೆ ತಾಲೂಕು ಭಾಗ್ಯ ಸಿಗುವುದು ಎಂದು?

ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಹೆಗ್ಗಳಿಕೆ| ಅಧಿಕಾರಕ್ಕೆ ಬಂದರೆ ತಾಲೂಕು ಮಾಡುವುದಾಗಿ ಹೇಳಿದ್ದ ಬಿಎಸ್‌ವೈ| ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಗತಿಸಿದರೂ ಈ ಕುರಿತು ಪ್ರಸ್ತಾಪ ಮಾಡದೆ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣ| 

When Create Hanumasagara Town Taluk in Koppal District
Author
Bengaluru, First Published Dec 26, 2019, 8:15 AM IST
  • Facebook
  • Twitter
  • Whatsapp

ಏಕನಾಥ ಜಿ. ಮೆದಿಕೇರಿ

ಹನುಮಸಾಗರ[ಡಿ.26]: ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ಹನುಮಸಾಗರ ತಾಲೂಕು ಕೇಂದ್ರಕ್ಕೆ ಎಲ್ಲ ಅರ್ಹತೆ ಹೊಂದಿದ್ದರೂ ಇತ್ತ ತಾಲೂಕು ಆಗದೆ, ಅತ್ತ ಪಟ್ಟಣವಾಗದೆ ಗ್ರಾಮವಾಗಿ ಉಳಿದಿದ್ದು, ಆಡಳಿತ ನನೆಗುದಿಗೆ ಬಿದ್ದಿದೆ.

ತಾಲೂಕು ಹೋರಾಟ ಸಮಿತಿಯಿಂದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು. ವಿಧಾನಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಬಿ.ಎಸ್‌. ಯಡಿಯೂರಪ್ಪ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ಅವರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಗತಿಸಿದರೂ ಈ ಕುರಿತು ಪ್ರಸ್ತಾಪ ಮಾಡದೆ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಈ ಹಿಂದೆ ಸಾಕಷ್ಟು ಬಾರಿ ಸಮಿತಿಯಿಂದ ಮನವಿ ಹಾಗೂ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸದೆ ಇರುವುದರಿಂದ ಆಡಳಿತಕ್ಕೆ ಹಿನ್ನಡೆಯಾಗಿದೆ. ಈ ಮೊದಲು ಹೋರಾಟದಲ್ಲಿ ಶ್ರಮಿಸಿದ ಸಾಕಷ್ಟುವ್ಯಕ್ತಿಗಳು ತಮ್ಮ ಪ್ರಯತ್ನಕ್ಕೆ ಫಲವಿಲ್ಲದೆ ಮತ್ತೆ ಹೋರಾಟ ನಡೆಸಲು ನಿರಾಸಕ್ತಿ ತೋರಿಸುತ್ತಿದ್ದಾರೆ.

ಹನುಮಸಾಗರ ವ್ಯಾಪ್ತಿ:

1.20 ಲಕ್ಷ ಜನಸಂಖ್ಯೆ, 4 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 12 ತಾಲೂಕು ಪಂಚಾಯಿತಿ, 14 ಗ್ರಾಮ ಪಂಚಾಯಿತಿಗಳು, 83ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಶೈಕ್ಷಣಿಕವಾಗಿ, ವಾಣಿಜ್ಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿದೆ. ತಾಲೂಕು ಕೇಂದ್ರಕ್ಕೆ ಗಡಿ ಭಾಗದ ಗ್ರಾಮಗಳು ಸರ್ಕಾರದ ಕೆಲಸಗಳನ್ನು ಹೊತ್ತು ಹೋಗಬೇಕಾದರೆ 80ರಿಂದ 90 ಕಿಮೀ ಕ್ರಮಿಸಬೇಕು. ಇಂತಹ ಸನ್ನಿವೇಶದಲ್ಲಿ ಆಡಳಿತ ಹಿತದೃಷ್ಟಿಯಿಂದ ತಾಲೂಕು ಕೇಂದ್ರ ಅವಶ್ಯಕವಿದೆ.

ಪ್ರವಾಸಿ ತಾಣಗಳು:

ಕಲ್ಯಾಣ ಕರ್ನಾಟಕದ ಏಕೈಕ ಜಲಪಾತವಾದ ಕಪೀಲತೀರ್ಥ, ಬೆಟ್ಟದ ಮೇಲೆ ಅಭಿನವ ತಿರುಪತಿ ಖ್ಯಾತಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಚೆಂದಾಲಿಂಗೇಶ್ವರ ದೇವಸ್ಥಾನ, ಸೋಮಶಂಕರ ದೇವಸ್ಥಾನ, ಪವನ ಶಕ್ತಿಯ ವಿದ್ಯುತ್‌ ಘಟಕಗಳು ಗ್ರಾಮದ ಬೆಟ್ಟದಲ್ಲಿ ಕಾಣುತ್ತವೆ. ತಾಲೂಕಿನ ಗಡಿಭಾಗದಲ್ಲಿ ಪಿಂಕ್‌ ಗ್ರಾನೈಟ್‌ ಉದ್ಯಮ ಇದ್ದು, ದೇಶದಲ್ಲಿ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇಲ್ಲಿನ ಗ್ರಾನೈಟ್‌ ಸರಬರಾಜುವಾಗುತ್ತದೆ. ಇದರೊಂದಿಗೆ ಕೃಷಿಯಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಸರಬರಾಜುವಾಗುವ ವೀಳ್ಯೆದೆಲೆ, ಕೈಮಗ್ಗದ ಇಳಕಲ್‌ ಸೀರೆ ಹೀಗೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ಉದ್ಯಮಗಳನ್ನು ಕಾಣಬಹುದು.

ಸಾಂಸ್ಕೃತಿಕ, ಶೈಕ್ಷಣಿಕ ಹಿನ್ನೆಲೆ:

ನಾಟಕಕಾರಾದ ಎಚ್‌.ಟಿ. ಅರಸ್‌, ಸರೋಜಮ್ಮ ಧುತ್ತರಗಿ, ಪಿ.ಬಿ. ಧುತ್ತರಗಿ, ರೇಡಿಯೋ ನಾಟಕಕರಾದ ಎನ್‌.ಪಿ. ಕುಲಕರ್ಣಿ ಅವರು ಇದೇ ಗ್ರಾಮದವರಾಗಿದ್ದಾರೆ. ಇದೇ ಗ್ರಾಮದಲ್ಲಿ ರಂಗಭೂಮಿ ತಂಡದ ತಾಲೀಮು ಘಟಕಗಳು, ಸಂಗೀತ, ಚಿತ್ರಕಲೆ ಹೇಳುವಂತಹ ಸಂಸ್ಥೆಗಳು ಗ್ರಾಮದಲ್ಲಿ ಕಾಣುತ್ತೇವೆ. ಇದರೊಂದಿಗೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಗ್ರಾಮದಲ್ಲಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾನಾ ಇಲಾಖೆಯ ಅಂಚೆ, ದೂರವಾಣಿ, ಪೊಲೀಸ್‌ ಇಲಾಖೆ, ಪಶು ಚಿಕಿತ್ಸೆ, ಸಮುದಾಯ ಆಸ್ಪತ್ರೆ, ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕ್‌ಗಳು ಹೀಗೆ ಹಲವಾರು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಹನುಮಸಾಗರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಲಕ್ಷಾಂತರ ಜನರ ಅಂಬೋಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಗ್ರಾಮಕ್ಕೆ ಆಗಮಿಸಿದ ವೇಳೆ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಾಗಿ ಸದ್ಯದಲ್ಲಿಯೇ ಸಮಿತಿಯನ್ನು ಮುಖ್ಯಮಂತ್ರಿ ಭೇಟಿಗೆ ಕರೆದೊಯ್ಯಲಾಗುವುದು ಎಂದು ಹೋರಾಟ ಸಮಿತಿ ಸದಸ್ಯ ಶ್ರೀನಿವಾಸ ಜಹಗೀರದಾರ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ್‌ ಭಯ್ಯಾಪೂರ ಅವರು, ಈಗಾಗಲೇ ಹೋರಾಟ ಸಮಿತಿಗೆ ದಾಖಲೆಗಳನ್ನು ತರಲು ಮಾಹಿತಿ ನೀಡಲಾಗಿದೆ. ದಾಖಲೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios