ಚನ್ನಪಟ್ಟಣ (ಫೆ.04):  ಮಹಿಳೆಯೊಬ್ಬರಿಗೆ ವಾಟ್ಸಪ್‌ ಮೆಸೇಜ್‌ ಮಾಡಿದ ಎಂಬ ಕಾರಣಕ್ಕೆ ಯುವಕನಿಗೆ ಬಟ್ಟೆಬಿಚ್ಚಿ ಥಳಿಸಿರುವ ಘಟನೆ ತಾಲೂಕಿನ ಕೆಂಚಯ್ಯನದೊಡ್ಡಿ ಸಮೀಪ ನಡೆದಿದೆ.

ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ:  ತಾಲೂಕಿನ ಗೆಂಡೆಕಟ್ಟೆಗ್ರಾಮದ ಆನಂದ ಎಂಬ ಯುವಕ ಮಹಿಳೆಯೊಬ್ಬರಿಗೆ ವಾಟ್ಸಪ್‌ ಮೂಲಕ ಸಂದೇಶ ಕಳುಹಿಸಿದ್ದಾನೆ. ಈ ವಿಷಯವನ್ನು ಮಹಿಳೆ ಆಕೆಯ ಪ್ರಿಯಕರ ಯಲಚಿಪಾಳ್ಯ ಗ್ರಾಮದ ಗೋಪಾಲ ಎಂಬುವನಿಗೆ ಹೇಳಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುಪಿತಗೊಂಡ ಗೋಪಾಲ ತನ್ನ ಸ್ನೇಹಿತ ಭರತ್‌ ಜತೆಗೂಡಿ ಆನಂದನನ್ನು ಅಡ್ಡ ಹಾಕಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದಾನೆ.

ಬಸವನಬಾಗೇವಾಡಿ: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ, ಕಾರಣ? ...

ಹಲ್ಲೆ ನಡೆಸಿದ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆನಂದನನ್ನು ಬೈಕ್‌ನಲ್ಲಿ ಬೆತ್ತಲೆಯಾಗಿ ಕೂರಿಸಿಕೊಂಡು ಹೋಗುತ್ತಿರುವಾಗ, ಈತ ಕೆಂಚಯ್ಯನದೊಡ್ಡಿ ಬಳಿ ತಪ್ಪಿಸಿಕೊಂಡು ಹೋಗಿ ಸ್ನೇಹಿತನ ಮನೆಗೆ ಹೋಗಿ ಆತನ ಬಟ್ಟೆಹಾಕಿಕೊಂಡು ತನ್ನ ಮನೆಗೆ ಸೇರಿದ್ದಾನೆ.

ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾಕಷ್ಟುಚರ್ಚೆಗೆ ಎಡೆಮಾಡಿಕೊಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ನಡೆಸಿರುವ ಆರೋಪಿಗಳ ಪತ್ತೆಗಾಗಿ ಕ್ರಮಕೈಗೊಂಡಿದ್ದಾರೆ.