ಮಯೂರ ಹೆಗಡೆ

ಹುಬ್ಬಳ್ಳಿ(ಜು.23):  ನಿನ್ನೆ ಕೊಟ್ಟ ಹೋಂ ವರ್ಕ್ ಏಕೆ ಮಾಡಿಲ್ಲ? ಮಾಡಿದ ಲೆಕ್ಕ ತಪ್ಪಾಗಿದೆ, ಇನ್ನೊಮ್ಮೆ ಬರೆ. ಏನಾದ್ರೂ ಡೌಟ್‌ ಇದೆಯಾ? ಹೀಗೆ ಶಿಕ್ಷಕರು ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕ್ಲಾಸ್‌ ರೂಂನಲ್ಲಿ ಅಲ್ಲ, ವಾಟ್ಸಾಪ್‌ ಗ್ರೂಪ್‌ನಲ್ಲಿ! ಹಾಗಂತ ಇದು ನಡೆಯುತ್ತಿರುವುದು ಯಾವುದೋ ಖಾಸಗಿ ಶಾಲೆಗಳಲ್ಲ. ಜಿಲ್ಲಾ ಶಿಕ್ಷಣ ಇಲಾಖೆಯ ಹೊಸ ಐಡಿಯಾದಂತೆ ಸರ್ಕಾರಿ ಶಾಲೆಗಳ ಶಿಕ್ಷಕರು ರಚಿಸಿದ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ.

ಹೌದು. ಕೋವಿಡ್‌-19 ಹಿನ್ನೆಲೆಯಲ್ಲಿ ಇನ್ನೂ ತರಗತಿಗಳು ಆರಂಭವಾಗಿಲ್ಲ. ಆದರೆ, ಬೋಧನೆ ನಡೆಸದೆ ವಿಧಿಯಿಲ್ಲ. ಹೇಗಿದ್ದರೂ ಚಂದನ ವಾಹಿನಿಯಲ್ಲಿ ಪ್ರತಿದಿನ ಪಾಠ ನಡೆಯುತ್ತಿದೆ. ಅದಕ್ಕೆ ಜೊತೆಯಾಗಿ ಧಾರವಾಡ ಜಿಲ್ಲೆಯಲ್ಲಿ ಇನ್ನೊಂದು ಹೆಜ್ಜೆ ಇಡಲಾಗುತ್ತಿದೆ.

ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಅಂದರೆ 1-5ನೇ ತರಗತಿ ವಿದ್ಯಾರ್ಥಿಗಳನ್ನು ಬಿಟ್ಟು, ಉಳಿದಂತೆ ಆಯಾ ಶಾಲೆಗಳಲ್ಲಿ ತರಗತಿವಾರು ನಲಿಕಲಿ ಅಥವಾ ಆಯಾ ಶಾಲೆ, ತರಗತಿ ಹೆಸರಲ್ಲಿ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಧಾರವಾಡ, ಹುಬ್ಬಳ್ಳಿ ಸೇರಿ ಎಲ್ಲ ತಾಲೂಕುಗಳಲ್ಲಿ ಈ ರೀತಿ ಗ್ರೂಪ್‌ ರಚಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಶೇ. 30ರಷ್ಟು ಶಾಲೆಗಳ ಗ್ರೂಪ್‌ ರಚನೆ ಪೂರ್ಣಗೊಂಡಿದ್ದು, ಇನ್ನು ರಚಿಸಲಾಗುತ್ತಿದೆ ಎಂದು ಡಿಡಿಪಿಐ ಮೋಹನ್‌ಕುಮಾರ ಹಂಚಾಟೆ ತಿಳಿಸಿದ್ದಾರೆ.

ಆನ್‌ಲೈನ್‌ ಕ್ಲಾಸ್‌: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್‌ ಮೀಟ್‌ ತರಗತಿ

ಮಕ್ಕಳಿಗೆ ಹೋಂ ವರ್ಕ್ ನೀಡುವುದು, ತಪ್ಪಿದಲ್ಲಿ ತಿದ್ದುವುದು, ಮತ್ತೆ ಸರಿಯಾಗಿ ಬರೆದು ತೋರಿಸುವಂತೆ ಹೇಳುವುದು, ಮಕ್ಕಳ ಸಮಸ್ಯೆ ಕೇಳುವುದನ್ನು ವಾಟ್ಸಾಪ್‌ನಲ್ಲಿ ಮಾಡುತ್ತಿದ್ದಾರೆ. ಮಕ್ಕಳು ಪಟ್ಟಿಯಲ್ಲಿ ಬರೆದ ಹೋಂ ವರ್ಕ್‌ನ ಫೋಟೋ ತೆಗೆದು ಗ್ರೂಪ್‌ನಲ್ಲಿ ಹಾಕುತ್ತಾರೆ. ಅದನ್ನು ಶಿಕ್ಷಕರು ಪರಿಶೀಲಿಸಿ ತಿದ್ದುತ್ತಾರೆ. ಇದಲ್ಲದೆ ಮಕ್ಕಳಿಗೆ ಪ್ರಶ್ನೆ ಕೇಳುವುದು, ಕಂಠಪಾಠ ಒಪ್ಪಿಸುವುದು, ಹೊಸ ಶಿಕ್ಷಕರು ಬಂದಿದ್ದರೆ ಅವರ ಪರಿಚಯ ಮಾಡುವುದು ಇಂಥದ್ದನ್ನೆಲ್ಲ ಗೂಗಲ್‌ ಮೀಟ್‌, ವಾಟ್ಸಾಪ್‌ ವಿಡಿಯೋ ಮೂಲಕ ವೆಬಿನಾರ್‌ ಮಾಡುತ್ತಿದ್ದಾರೆ.

ಅಲ್ಲದೆ, ಮಕ್ಕಳು ಚಂದನ ಟಿವಿಯಲ್ಲಿ ಪ್ರಸಾರವಾಗುವ ಪಾಠ ಕೇಳುತ್ತಿದ್ದಾರಾ? ಎಷ್ಟು ಹೊತ್ತು ಮನೆಯಲ್ಲಿ ಓದುತ್ತಾರೆ ಎಂಬ ಬಗ್ಗೆ ಪಾಲಕರಿಂದ ಶಿಕ್ಷಕರು ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಸಧ್ಯಕ್ಕೆ ಒಂದು ತಿಂಗಳ ಸೇತುಬಂಧ ಅಂದರೆ ಹಿಂದಿನ ತರಗತಿಗಳ ಪಾಠ ನಡೆಯುತ್ತಿದೆ. ಅದಾದ ಬಳಿಕ ಪ್ರಸಕ್ತ ತರಗತಿಗಳ ಪಠ್ಯದ ಬೋಧನೆ ಶುರುವಾಗಲಿದೆ.

ಗ್ರೂಪ್‌ನಲ್ಲಿ ಪಾಲಕರು ಇರುವುದರಿಂದ ಅವರು ಕೂಡ ಮಕ್ಕಳಿಗೆ ಸಹಾಯ ಮಾಡಬಲ್ಲರು. ಒಂದು ವೇಳೆ ತಂದೆ, ತಾಯಿಯ ವಾಟ್ಸಾಪ್‌ ಇಲ್ಲದಿದ್ದರೆ, ಅಕ್ಕಪಕ್ಕದ ಮನೆಯವರ ಸಹಕಾರ ಕೋರಲು ತಿಳಿಸಿದ್ದೇವೆ. ಇಂಟರ್‌ನೆಟ್‌ ಸಮಸ್ಯೆ ಇದ್ದರೆ ಟೆಕ್ಸ್ಟ್‌ಮೆಸೆಜ್‌ ಮೂಲಕ ಸಂಪರ್ಕಿಸಲು ತಿಳಿಸಿದ್ದೇವೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಶಿಕ್ಷಕರು ಮಕ್ಕಳ ಮನೆಗೆ ಹೋಗಲಾಗುತ್ತಿಲ್ಲ. ಜು. 24ರ ಬಳಿಕ ನೇರವಾಗಿ ಮಕ್ಕಳನ್ನು ಭೇಟಿಯಾಗಿ ಅವರಿಗೆ ತಿಳಿವಳಿಕೆ ನೀಡಲಾಗುವುದು. ಇನ್ನು ಜಿಲ್ಲೆಯಲ್ಲಿಯೆ ಈ ಕುರಿತಂತೆ ಮಾರ್ಗಸೂಚಿ ಸಿದ್ಧಪಡಿಸಲು ಚಿಂತನೆ ನಡೆಸಿದ್ದೇವೆ ಡಿಡಿಪಿಐ ಹಂಚಾಟೆ.

ಹುಬ್ಬಳ್ಳಿ ಗ್ರಾಮೀಣ ಬಿಇಒ ಎಸ್‌.ಎಂ. ಹುಡೇದಮನಿ ಮಾತನಾಡಿ, 200 ಶಿಕ್ಷಕರಿಗೆ ಈ ಕುರಿತಂತೆ ತರಬೇತಿ ನೀಡಲಾಗಿದೆ. ಇವರು ಬುಧವಾರದಿಂದ ಆನ್‌ಲೈನ್‌ ಪಾಠವನ್ನೂ ಮಾಡಲಿದ್ದಾರೆ. ಗೊಂದಲ ಬಗೆಹರಿಸಲಿದ್ದಾರೆ ಎಂದರು.

ವಾಟ್ಸಾಪ್‌ ಗ್ರೂಪ್‌ ಮಕ್ಕಳ ಸಂಪರ್ಕ ಸಾಧಿಸುವ ಹೊಸ ಪ್ರಯೋಗ ಮಾಡಿದ್ದೇವೆ. ಜಿಲ್ಲೆಯಲ್ಲಿ ಶೇ. 30ರಷ್ಟು ಶಾಲೆಗಳ ತರಗತಿವಾರು ಗ್ರೂಪ್‌ ರಚಿಸಿದ್ದು, ಮಕ್ಕಳಿಗೆ ಹೋಂ ವರ್ಕ್ ನೀಡುವುದು, ತಿದ್ದಿ ಸೂಚನೆ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಡಿಡಿಪಿಐ ಮೋಹನ್‌ಕುಮಾರ ಹಂಚಾಟೆ ಅವರು ತಿಳಿಸಿದ್ದಾರೆ.