ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು[ಜೂ.23]: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪ್ರತ್ಯೇಕ ‘ಹಸಿ ಕಸ’ ವಿಲೇವಾರಿ ಟೆಂಡರ್‌ ವಿಚಾರದಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ನಡುವಿನ ಗೊಂದಲ ಪರಿಹಾರವಾಗದ ಹಿನ್ನೆಲೆಯಲ್ಲಿ ಇಡೀ ಟೆಂಡರ್‌ ಪ್ರಕ್ರಿಯೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಅಲ್ಲದೆ ಹಸಿ ಕಸ ಟೆಂಡರ್‌ ಕುರಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವಿರುವ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವರದಿ ಪಡೆದುಕೊಂಡ ನಂತರ ಈ ಟೆಂಡರ್‌ನ ಭವಿಷ್ಯವನ್ನು ನಗರಾಭಿವೃದ್ಧಿ ಇಲಾಖೆಯೇ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಹಸಿ ಕಸ ಟೆಂಡರ್‌ ವಿಚಾರಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮತ್ತು ಜನಪ್ರತಿನಿಗಳು ನಡುವೆ ಭಾರೀ ಜಟಾಪಟಿ ನಡೆದಿತ್ತು. ಸದಸ್ಯರ ಮತ್ತು ಅಧಿಕಾರಿಗಳ ಸಮನ್ವತೆಗಾಗಿ ಮೇಯರ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಪಾಲಿಕೆ ಮೂರು ಪಕ್ಷದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಮೂರ್ನಾಲ್ಕು ಸಭೆ ಸಹ ಮಾಡಲಾಗಿತ್ತು. ಎರಡು-ಮೂರು ಪಾಲಿಕೆ ಮಾಸಿಕ ಸಭೆಯಲ್ಲಿಯೂ ಟೆಂಡರ್‌ ವಿಷಯದ ಕುರಿತು ಭಾರೀ ಚರ್ಚೆಯಾಗಿದ್ದರೂ ಒಮ್ಮತ ಮೂಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಬಿಬಿಎಂಪಿ ಅಧಿಕಾರಿಗಳಿಗೆ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಗೌರವ ಕೊಡುವಂತೆ ತಾಕೀತು ಮಾಡಲು ಮನವಿ ಮಾಡಿದ್ದರು. ಈ ಮನವಿ ಆಧಾರದ ಮೇಲೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಮೇಯರ್‌, ಉಪಮೇಯರ್‌, ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲೇ ಟೆಂಡರ್‌ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಹೆಚ್ಚುವರಿ ಆಯುಕ್ತ ರಂದೀಪ್‌ ಅವರಿಗೆ ಸೂಚಿಸಿದ್ದರು.

ಅದರಂತೆ ರಂದೀಪ್‌, ಹಸಿಕಸ ವಿಲೇವಾರಿಗೆ ಟೆಂಡರ್‌ಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮ, ಭಾಗವಹಿಸಿದ ಗುತ್ತಿಗೆದಾರರ ಸಂಖ್ಯೆ, ಟೆಂಡರ್‌ ಮೊತ್ತ, ಏಕೆ ಹಸಿಕಸ ವಿಲೇವಾರಿಗೆ ಮಾತ್ರ ಟೆಂಡರ್‌ ಆಹ್ವಾನಿಸಲಾಗಿದೆ?, ಪಾಲಿಕೆ ಸದಸ್ಯರ ವಿರೋಧ ಏಕೆ?, ಮೇಯರ್‌ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ನಡೆದ ಚರ್ಚಾ ವಿವರ, ಒಣ ಕಸ ಮತ್ತು ಸಗಟು ತ್ಯಾಜ್ಯ ವಿಲೇವಾರಿ ಹೊರೆ ಹೊತ್ತರೆ ಪಾಲಿಕೆಗೆ ಆಗುವ ಹೊರೆ ಪ್ರಮಾಣ ಎಷ್ಟು?, ಅವಶ್ಯಕವಾಗುವ ಹೆಚ್ಚುವರಿ ಸಂಸ್ಕರಣಾ ಘಟಕ ಸೇರಿದಂತೆ ಪೂರ್ಣ ಮಾಹಿತಿಯನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಹಸಿಕಸ ಟೆಂಡರ್‌ ಮುಂದುವರಿಸಬೇಕಾ ಅಥವಾ ಪಾಲಿಕೆ ಸದಸ್ಯರು ಹೇಳುವಂತೆ ಹಸಿ, ಒಣ ಹಾಗೂ ಸಗಟು ತ್ಯಾಜ್ಯ ವಿಲೇವಾರಿಗೆ ಒಟ್ಟಾಗಿ ಒಂದೇ ಟೆಂಡರ್‌ ಆಹ್ವಾನಿಸಬೇಕಾ ಎಂಬುದನ್ನು ತೀರ್ಮಾನಿಸಲಿದೆ. ಒಂದು ವೇಳೆ ಸರ್ಕಾರ ಒಣ, ಹಸಿ ಮತ್ತು ಸಗಟು ತ್ಯಾಜ್ಯ ವಿಲೇವಾರಿಗೆ ಒಂದೇ ಟೆಂಡರ್‌ ಕರೆಯುವಂತೆ ಬಿಬಿಎಂಪಿಗೆ ಸೂಚಿಸಿದರೆ ಹಸಿ ಕಸ ಟೆಂಡರ್‌ ರದ್ದಾಗಲಿದ್ದು, ಹೊಸದಾಗಿ ಹಸಿ, ಒಣ ಮತ್ತು ಸಗಟು ತ್ಯಾಜ್ಯ ವಿಲೇವಾರಿಗೆ ಗುತ್ತಿಗೆಯನ್ನು ಬಿಬಿಎಂಪಿ ಆಹ್ವಾನಿಸಬೇಕಾಗುತ್ತದೆ.

ಮನೆ ಮನೆಯಿಂದ ಹಸಿ ಕಸ ವಿಲೇವಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ರಸ್ತೆಯಲ್ಲಿ ಬಿದ್ದ ಕಸ ತೆಗೆಯುವವರು ಯಾರು?. ಅಲ್ಲದೇ ಹಸಿ ಕಸಕ್ಕೆ ಒಬ್ಬ ಗುತ್ತಿಗೆದಾರ, ಒಣ ಕಸ ಒಬ್ಬ ಹಾಗೂ ಸಗಟು ಕಸ ಒಬ್ಬ ಗುತ್ತಿಗೆದಾರರ ಮೇಲ್ವಿಚಾರಣೆ ಕಷ್ಟ. ಒಬ್ಬನೇ ಗುತ್ತಿಗೆದಾರರಿಗೆ ಎಲ್ಲ ಗುತ್ತಿಗೆ ನೀಡಿದರೆ, ಮೇಲ್ವಿಚಾರಣೆ ಸುಲಭವಾಗಲಿದೆ ಎಂಬುದು ನನ್ನ ಅಭಿಪ್ರಾಯ. ಈ ಅಭಿಪ್ರಾಯವನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಸಭೆಯಲ್ಲಿ ತಿಳಿಸಿದ್ದೇವೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮೇಯರ್‌.

ಟೆಂಡರ್‌ ಅನುಮೋದನೆ ಬಾಕಿ ಇತ್ತು

ಐದಾರು ವರ್ಷದ ಬಳಿಕ ಪಾಲಿಕೆ ಕಳೆದ ನವೆಂಬರ್‌ನಲ್ಲಿ ಹಸಿಕಸ ವಿಲೇವಾರಿ ಟೆಂಡರ್‌ ಆಹ್ವಾನಿಸಲಾಗಿತ್ತು. ಹಲವಾರು ಅಡೆತಡೆ ನಿವಾರಿಸಿಕೊಂಡು ಬಂದ ಟೆಂಡರ್‌ ಪ್ರಕ್ರಿಯೆ ತಾಂತ್ರಿಕ ಬಿಡ್‌ ಪರಿಶೀಲನೆ ಪೂರ್ತಿಗೊಂಡಿದೆ. ಪಾಲಿಕೆ ಸಭೆ ಮತ್ತು ಸರ್ಕಾರದ ಅನುಮೋದನೆ ದೊರೆಯಬೇಕಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಜಟಾಪಟಿಯಿಂದಾಗಿ ಈ ವಿಚಾರ ಇದೀಗ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಹೋಗಿದೆ.