ಕೇರಳದಲ್ಲಿ ವೆಸ್ಟ್‌ನೈಲ್ ಜ್ವರ ಹೆಚ್ಚಳ: ಚಾಮರಾಜನಗರ ಚೆಕ್ ಪೋಸ್ಟ್‌ನಲ್ಲಿ ಹೈ ಅಲರ್ಟ್!
ನೆರೆಯ ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರದ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ ಗಡಿಯಾದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ತಾಲೂಕು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಬಳಿಯ ಕಾಡಂಚಿನ ಗ್ರಾಮಗಳ ಜನರಿಗೆ ವೆಸ್ಟ್‌ನೈಲ್ ಬಗ್ಗೆ ಆರೋಗ್ಯ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ.
ಗುಂಡ್ಲುಪೇಟೆ (ಮೇ.20): ನೆರೆಯ ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರದ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದ ಗಡಿಯಾದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ತಾಲೂಕು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಬಳಿಯ ಕಾಡಂಚಿನ ಗ್ರಾಮಗಳ ಜನರಿಗೆ ವೆಸ್ಟ್‌ನೈಲ್ ಬಗ್ಗೆ ಆರೋಗ್ಯ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ತಾಲೂಕಿನ ಮದ್ದೂರು, ಮದ್ದೂರು ಕಾಲೋನಿ, ಕಗ್ಗಳದಹುಂಡಿ, ಬೇರಂಬಾಡಿ, ಬೀಚನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ಮನೆ ಮನೆಗೆ ತೆರಳಿ ವೆಸ್ಟ್ ನೈಲ್ ಸೋಂಕು ಜ್ವರದ ಬಗ್ಗೆ ತಪಾಸಣೆ ನಡೆಸಿ, ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಟಾಂ ಟಾಂ ಶಬ್ದ: ವೆಸ್ಟ್ ನೈಲ್ ಸೋಂಕು ಜ್ವರ ವೈರಾಣುವಿನಿಂದ ಬರುವ ರೋಗವಾಗಿದ್ದು, ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಧಿಕ ಜ್ವರ, ತಲೆನೋವು, ಮೈಕೈ ನೋವು, ಕೀಲು ನೋವು, ಕುತ್ತಿಗೆ ಬಿಗಿತ, ನಡುಕ, ಸೆಳೆತ ಮತ್ತು ಸ್ನಾಯು ದೌರ್ಬಲ್ಯ ಉಂಟಾದವರು ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಕಾಡಂಚಿನ ಹಳ್ಳಿಗಳಲ್ಲಿ ಟಾಂ ಟಾಂ ಮೂಲಕ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ವೆಸ್ಟ್ ನೈಲ್ ಸೋಂಕಿಗೆ ಗ್ರಾಮಸ್ಥರು ಆತಂಕ ಪಡದೆ ಮುಂಜಾಗ್ರತಾ ಕ್ರಮಗಳಿಂದ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದ ಜಾಗೃತಿ: ಕೇರಳದಲ್ಲಿ ವೆಸ್ಟ್ ನೈಲ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಕಾಡಂಚಿನ ಗ್ರಾಮಸ್ಥರಲ್ಲಿ ಸೋಂಕು ನಿಲ್ಲುವ ತನಕ ಜಾಗೃತಿ ಮೂಡಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಶ ಹೇಳಿದರು. ಕನ್ನಡಪ್ರಭದೊಂದಿಗೆ ಮಾತನಾಡಿ, ವೆಸ್ಟ್ ನೈಲ್ ಸೋಂಕು ಇಲ್ಲಿಯ ತನಕ ಕಂಡು ಬಂದಿಲ್ಲ. ಬರೋದು ಕೂಡ ಡೌಟು ಆದರೆ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದರು. ಹಂಗಳ, ಕಗ್ಗಳದಹುಂಡಿ, ಬರಗಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಜನರಲ್ಲಿ ಜ್ವರ ಬಂದರೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿ ತಂಡ ಮನವಿ ಮಾಡುತ್ತಿದ್ದಾರೆ ಎಂದರು.
West Nile Fever: ಕೇರಳಕ್ಕೆ ಜ್ವರ ಬಂದ್ರೆ, ಕರ್ನಾಟಕಕ್ಕೆ ಶೀತ ಆಗುತ್ತೆ: ಏನಿದು ವೆಸ್ಟ್ ನೈಲ್ ಆತಂಕ!
ಭಯ ಬೇಡ ಟಿಎಚ್‌ಒ: ವೆಸ್ಟ್ ನೈಲ್ ಸೋಂಕಿನ ಬಗ್ಗೆ ಜನರಲ್ಲಿ ಭಯ ಬೇಡ, ಜನರ ಜೊತೆಗೆ ಆರೋಗ್ಯ ಇಲಾಖೆ ಸದಾ ನಿಮ್ಮೊಂದಿಗೆ ಇರಲಿದೆ. ಸೋಂಕು ಎದುರಿಸಲು ಆರೋಗ್ಯ ಇಲಾಖೆ ಸಜ್ಜುಗೊಂಡಿದೆ ಎಂದರು.