ಹುಮನಾಬಾದ್‌ನ ಐತಿಹಾಸಿಕ ಬಾಲಾಜಿ ಮಂದಿರದ ಪುನರ್ ನಿರ್ಮಾಣ ಕಾಮಗಾರಿ ವೇಳೆ ಗರ್ಭಗುಡಿಯ ಕೆಳಭಾಗದಲ್ಲಿ ಬಾವಿಯ ಆಕಾರದ ಆಳವಾದ ತಗ್ಗು ಪತ್ತೆಯಾಗಿದೆ. ಇದರಿಂದ ಪುರಾತನ ದೇವಸ್ಥಾನದ ನೆಲದ ಅಡಿಯಲ್ಲಿ ಗುಪ್ತ ನಿಧಿ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದರ ಸತ್ಯಾಸತ್ಯತೆ ತಿಳಿಯಲು ಪುರಾತತ್ವ ಇಲಾಖೆಯ ಪರಿಶೀಲನೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹುಮನಾಬಾದ್: ಐತಿಹಾಸಿಕ ಬಾಲಾಜಿ ಮಂದಿರದ ಪುನರ್ ನಿರ್ಮಾಣ ಕಾಮಗಾರಿ ವೇಳೆ ಗರ್ಭಗುಡಿಯ ಕೆಳಭಾಗದಲ್ಲಿ ಬಾವಿಯ ಆಕಾರದ ಆಳವಾದ ತಗ್ಗು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪುರಾತನ ದೇವಸ್ಥಾನದ ನೆಲದ ಅಡಿಯಲ್ಲಿ ಗುಪ್ತ ನಿಧಿ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ವಿಷಯ ಪಟ್ಟಣಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣದಲ್ಲಿರುವ ಐತಿಹಾಸಿಕ ಬಾಲಾಜಿ ಮಂದಿರವು ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಸಿ-ಗ್ರೇಡ್ ಗೆ ಸೇರಿದ ದೇವಸ್ಥಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ, ಅಯೋಧ್ಯೆ ಮಾದರಿಯಲ್ಲಿ ದೇವಸ್ಥಾನವನ್ನು ಪುನರ್‌ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ.

ಪುರಾತನ ದೇವಸ್ಥಾನದ ನೆಲದ ಅಡಿಯಲ್ಲಿ ಗುಪ್ತ ನಿಧಿ ಇರುವ ಶಂಕೆ

ದೇವಸ್ಥಾನದ ಅಭಿವೃದ್ಧಿಗಾಗಿ ಬಸವರಾಜ ಪಾಟೀಲ ಪರಿವಾರದಿಂದ ವೈಯಕ್ತಿಕವಾಗಿ 26 ಲಕ್ಷ ರು. ದೇಣಿಗೆ ನೀಡುವುದಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಭರವಸೆ ನೀಡಿದ್ದರು. ರಾಜ್ಯ ಸರ್ಕಾರದಿಂದ 30 ಲಕ್ಷ ರು. ಅನುದಾನ ಮಂಜೂರಾಗಿದೆ ಎಂದು ಶಾಸಕರು ಈ ಹಿಂದೆ ನಡೆದ ಬಹಿರಂಗ ಸಭೆಯಲ್ಲಿ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇವಸ್ಥಾನವನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿತ್ತು. ದಸರಾ ಹಬ್ಬದ ಬಳಿಕ ಪುನರ್ ನಿರ್ಮಾಣ ಕಾಮಗಾರಿಗಾಗಿ ಸುಮಾರು ಎಂಟು ಅಡಿ ಆಳದ ಗುಂಡಿ ತೋಡುವ ಸಂದರ್ಭದಲ್ಲಿ ಗರ್ಭಗುಡಿಯ ಕೆಳಭಾಗದಲ್ಲಿ ಬಾವಿಯ ಆಕಾರದ ತೆಗ್ಗು ಕಾಣಿಸಿಕೊಂಡಿದೆ. ಈ ಬೆಳವಣಿಗೆಯು ದೇವಸ್ಥಾನದ ಪುರಾತನ ಇತಿಹಾಸದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಬಾಲಾಜಿ ದೇವಸ್ಥಾನ

ಬಾಲಾಜಿ ಮಂದಿರವು 17ನೇ ಶತಮಾನಕ್ಕೆ ಸೇರಿದ ಪುರಾತನ ದೇಗುಲವೆಂದು ಹೇಳಲಾಗುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಪುನರ್‌ನಿರ್ಮಾಣದ ಹಿನ್ನೆಲೆಯಲ್ಲಿ ಭೂಮಿಯನ್ನು ಅಗೆದ ಸಂದರ್ಭದಲ್ಲಿ ಈ ರಚನೆ ಪತ್ತೆಯಾಗಿದೆ. ಗರ್ಭಗುಡಿ ಇದ್ದ ಸ್ಥಳದ ಕೆಳಭಾಗದಲ್ಲೇ ಬಾವಿಯ ಆಕಾರದ ತಗ್ಗು ಕಾಣಿಸಿಕೊಂಡಿರುವುದು ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಬಾಲಾಜಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಹಾಗೂ ಪಟ್ಟಣದ ವಿವಿಧೆಡೆ ಗುಪ್ತ ನಿಧಿ ಇರುವ ಸಾಧ್ಯತೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ, ಪತ್ತೆಯಾಗಿರುವ ರಚನೆಯು ನಿಜವಾಗಿಯೂ ಗುಹೆಯೇ, ಪುರಾತನ ಬಾವಿಯೇ ಅಥವಾ ಮತ್ತಾವುದೇ ಐತಿಹಾಸಿಕ ನಿರ್ಮಾಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ರೀತಿ, ಅಲ್ಲಿ ಗುಪ್ತ ನಿಧಿ ಇರುವುದಕ್ಕೂ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ.

ಐತಿಹಾಸಿಕ ಮಹತ್ವ ಹೊಂದಿರುವ ದೇವಸ್ಥಾನದ ಕೆಳಭಾಗದಲ್ಲಿ ಇಂತಹ ರಚನೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಸ್ಥಳೀಯರ ಪ್ರಕಾರ, ಈವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

ಪುರಾತನ ರಚನೆಯ ಸ್ವರೂಪ, ಅದರ ಕಾಲಮಾನ ಹಾಗೂ ಐತಿಹಾಸಿಕ ಮಹತ್ವವನ್ನು ಪತ್ತೆ ಹಚ್ಚಲು ತಜ್ಞರ ಪರಿಶೀಲನೆ ಅಗತ್ಯವಾಗಿದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿಯವರೆಗೆ ಪತ್ತೆಯಾಗಿರುವ ಸ್ಥಳವನ್ನು ಸುರಕ್ಷಿತವಾಗಿರಿಸಿ, ಯಾವುದೇ ಹಾನಿಯಾಗದಂತೆ ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.