ರಾಜ್ಯದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ : ಭಾರೀ ಮಳೆ ಎಚ್ಚರಿಕೆ
- ರಾಜ್ಯದಲ್ಲಿ ಮುಂದಿನ 24 ಗಂಟೆ ಗುಡುಗು ಸಹಿತ 20 ಸೆಂ.ಮೀ ಗಿಂತ ಅಧಿಕ ಪ್ರಮಾಣದಲ್ಲಿ ಮಳೆ
- ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ
ಬೆಂಗಳೂರು (ಜು.24) : ರಾಜ್ಯದಲ್ಲಿ ಮುಂದಿನ 24 ಗಂಟೆ ಗುಡುಗು ಸಹಿತ 20 ಸೆಂ.ಮೀ ಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಂಭವವಿದೆ. ಹೀಗಾಗಿ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಬಾರ ಕುಸಿತದಲ್ಲಿ ಶುಕ್ರವಾರ ಇನ್ನಷ್ಟು ಏರಿಕೆಯಾಗಿದೆ. ಜತೆಗೆ ಮಹಾರಾಷ್ಟ್ರ ಹಾಗು ಕರ್ನಾಟಕ ಕರಾವಳಿ ಭಾಗದ ಅರಬ್ಬಿ ಸಮುದ್ರದ ಮೆಲ್ಲೈ ಸುಳಿಗಾಳಿ ತೀವ್ರಗೊಂಡಿದೆ. ಇದರ ಪ್ರಭಾವದಿಂದ ರಾಜ್ಯಾದ್ಯಂತ ಜು 24 ರ ವರೆಗೆ ವ್ಯಾಪಕ ಮಳೆ ಸುರಿದರೆ, ನಂತರ ಮಳೆ ತೀವ್ರತೆ ತಾತ್ಕಾಲಿಕವಾಗಿ ಕಡಿಮೆ ಆಗಲಿದೆ. ಆಗ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣದಿಂದ ಭಾರಿ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆ-ಪ್ರವಾಹಕ್ಕೆ ಕೊಚ್ಚಿ ಹೋಯ್ತು ಮನೆ, ಜಾನುವಾರು; ಬದುಕು ಬೀದಿಪಾಲು!
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 20 ಸೆಂ,ಮೀಗಿಂತ ಹೆಚ್ಚು ಮಳೆ ಬೀಳಲಿದ್ದು, ಈ ಜಿಲ್ಲೆಗಳಿಗೆ ಶನಿವಾರ ಜು.24 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ನಂತರ ಮಳೆ ತುಸು ಕಡಿಮೆಯಾಗುವ ಕಾರಣಕ್ಕೆ ಜು.25ಕ್ಕೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗು ಮಲೆನಾಡಿನ ಭಾಗಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗೆ ಜು.24ಕ್ಕೆ ಅತೀ ಭಾರೀ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಗದಗ, ಕಲಬುರಗಿ, ಹಾವೇರಿ, ಯಾದಗಿರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜು. 25ರ ನಂತರ ಈ ಭಾಗದಲ್ಲಿ ಮಳೆ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದೆ.