ಬೆಂಗಳೂರು (ಆ.19): ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಟ ಮುಂದುವರೆಯಲಿದ್ದು, ಈ ಜಿಲ್ಲೆಗಳಲ್ಲಿ ಆ.19ರಿಂದ 23ರವರೆಗೆ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಂಭವವಿರುವ ‘ಯೆಲ್ಲೊ ಅಲರ್ಟ್‌’ನ ಎಚ್ಚರಿಕೆ ನೀಡಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಈ ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ನೀಡಲಾಗಿದೆ.

ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ...

ಇನ್ನು ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಆ.19ರಿಂದ ಆ.22ರವರೆಗೆ ಮುಂಗಾರಿನ ಅಬ್ಬರ ತಗ್ಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ. ಗರಿಷ್ಠ 27 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡ ಕವಿದ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ..

ಬಿದ್ದ ಮಳೆ ಪ್ರಮಾಣ:

ಉಡುಪಿಯ ಕೊಲ್ಲೂರು 12 ಸೆಂ.ಮೀ, ಆಗುಂಬೆ 10, ಚಿಕ್ಕಮಗಳೂರಿನ ಕಮ್ಮರಡಿ 9, ದಕ್ಷಿಣ ಕನ್ನಡದ ಸುಬ್ರಮಣ್ಯ 8, ಶಿವಮೊಗ್ಗ ಜಿಲ್ಲೆಯ ಶಿರಾಳಿ ಮತ್ತು ಹೊಸನಗರ ತಲಾ 7, ಚಿಕ್ಕಮಗಳೂರಿನ ಶೃಂಗೇರಿ, ಶಿವಮೊಗ್ಗದ ಹುಂಚದಕಟ್ಟೆತಲಾ 6, ಉತ್ತರ ಕನ್ನಡದ ಕದ್ರಾ, ಉಡುಪಿಯ ಸಿದ್ದಾಪುರ, ಚಿಕ್ಕಮಗಳೂರಿನ ಕೊಪ್ಪ, ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.