'ಬಳ್ಳಾರಿ ಪಾಲಿಕೆ ಮೇಲೆ ಕಾಂಗ್ರೆಸ್ ಧ್ವಜ ಹಾರಾಡುವುದು ಖಚಿತ'
ಟಿಕೆಟ್ ನೀಡಿಕೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ| 5ನೇ ವಾರ್ಡಿನ ಅಭ್ಯರ್ಥಿ ಬಡವನಾಗಿದ್ದಾನೆ. ಆದರೆ, ಆತನನ್ನು ಗೆಲ್ಲಿಸಲು ಸ್ಥಳೀಯ ಜನರೇ ಹಣ ನೀಡಲು ಮುಂದೆ ಬಂದಿದ್ದಾರೆ| ಈ ಕುರಿತು ಕೆಪಿಸಿಸಿ ಜತೆ ಚರ್ಚಿಸಿಯೇ ಸೂಕ್ತ ನಿರ್ಧಾರ: ಕಾಂಗ್ರೆಸ್ ನಾಯಕರು|
ಬಳ್ಳಾರಿ(ಏ.21): ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಅಲ್ಲಂ ವೀರಭದ್ರಪ್ಪ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ಅವರು ಕಾಂಗ್ರೆಸ್ ಪಕ್ಷ ಪಾಲಿಕೆಯ ಅಧಿಕಾರ ಹಿಡಿದರೆ ಅಭಿವೃದ್ಧಿಯಾಗುವುದು ಖಚಿತ ಎಂದರು.
ಈಗಾಗಲೇ ಜಿಲ್ಲಾ ಖನಿಜ ನಿಧಿಯಿಂದ ನಗರದ 120 ರಸ್ತೆಗಳ ಡಾಂಬರೀಕರಣ ನಡೆಯುತ್ತಿದೆ. ನಗರದ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ಅಗತ್ಯತೆ ಇದೆ. 24*7 ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ನಗರದಲ್ಲಿ ವಿದ್ಯುತ್ ಚಿತಾಗಾರ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಟಿಕೆಟ್ ನೀಡಿಕೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. 5ನೇ ವಾರ್ಡಿನ ಅಭ್ಯರ್ಥಿ ಬಡವನಾಗಿದ್ದಾನೆ. ಆದರೆ, ಆತನನ್ನು ಗೆಲ್ಲಿಸಲು ಸ್ಥಳೀಯ ಜನರೇ ಹಣ ನೀಡಲು ಮುಂದೆ ಬಂದಿದ್ದಾರೆ. ಹೀಗಾಗಿಯೇ 5ನೇ ವಾರ್ಡಿನ ಅಭ್ಯರ್ಥಿಯನ್ನು ಬದಲಾಯಿಸಲಾಯಿತು. ಈ ಕುರಿತು ಕೆಪಿಸಿಸಿ ಜತೆ ಚರ್ಚಿಸಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಬಿಜೆಪಿಗೆ ಸೇರ್ಪಡೆ
ಈ ಬಾರಿ ಪಾಲಿಕೆಯ ಚುನಾವಣೆಯಲ್ಲಿ ವಿದ್ಯಾವಂತರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಒಬ್ಬೇ ಒಬ್ಬ ಅನಕ್ಷರಸ್ಥ ಅಭ್ಯರ್ಥಿ ಕಾಂಗ್ರೆಸ್ ಪಟ್ಟಿಯಲ್ಲಿಲ್ಲ. 39 ಅಭ್ಯರ್ಥಿಗಳಲ್ಲಿ 15 ಜನ ಪದವೀಧರರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 3 ಜನ ಪಿಯುಸಿ ಶಿಕ್ಷಣ ಪಡೆದವರಿದ್ದಾರೆ. 12 ಜನರು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಜನಪರ ಕೆಲಸ ಮಾಡಿಕೊಂಡು ಉತ್ತಮ ಹೆಸರು ಮಾಡಿದವರನ್ನೇ ಚುನಾವಣೆಯ ಅಭ್ಯರ್ಥಿಯನ್ನಾಗಿಸಲಾಗಿದೆ. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಎಲ್ಲ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನಪರ ಆಡಳಿತ ನೀಡಲು ಸಿದ್ಧರಿದ್ದೇವೆ ಎಂದು
ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಲಾಕ್‌ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರವಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕೊರೋನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಲಭ್ಯವಾಗಬೇಕು. ಬೆಡ್, ಆಕ್ಸಿಜನ್, ಐಸಿಯು, ವೆಂಟಿಲೇಟರ್‌ಗಳ ವ್ಯವಸ್ಥೆ ಸಮರ್ಪಕವಾಗಿರಬೇಕು. ಈ ದಿಸೆಯಲ್ಲಿ ಸರ್ಕಾರ ಯೋಚನೆ ಮಾಡಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿಗಳು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿದರು. ಅದರಿಂದ ಯಾವ ವೈರಸ್ ಹೋಗಲಿಲ್ಲ. ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿದರೆ ಕೊರೋನಾ ಹೋಗುವುದಿಲ್ಲ. ರೋಗ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಅನಿಲ್‌ಲಾಡ್, ಜೆ.ಎಸ್.ಆಂಜಿನೇಯಲು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.