Asianet Suvarna News Asianet Suvarna News

ಪಠ್ಯದ ಕಲಿಕೆಯನ್ನಷ್ಟೇ ಶಿಕ್ಷಣ ಎಂಬ ಭ್ರಮೆ ನಮ್ಮಲ್ಲಿದೆ : ಶ್ರೀ ವೀರೇಶಾನಂದ ಸ್ವಾಮೀಜಿ

ಸಾಮಾನ್ಯವಾಗಿ ಪಠ್ಯದ ಕಲಿಕೆಯನ್ನಷ್ಟೇ ಶಿಕ್ಷಣ ಎಂಬ ಭ್ರಮೆ ನಮ್ಮಲ್ಲಿದೆ. ಆದರೆ, ಜೀವನದುದ್ದಕ್ಕೂ ಪ್ರತಿ ಹೆಜ್ಜೆಯಲ್ಲೂ ವಿವಿಧ ರೀತಿಯ ಶಿಕ್ಷಣ ಪಡೆಯುತ್ತೇವೆ ಎಂಬ ಸತ್ಯವನ್ನು ಮರೆಯಬಾರದು ಎಂದು ತುಮಕೂರು ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ತಿಳಿಸಿದರು.

We have the illusion that only the learning of the text is education: Sri Veereshananda Swamiji snr
Author
First Published Dec 23, 2023, 8:33 AM IST

  ಮೈಸೂರು:  ಸಾಮಾನ್ಯವಾಗಿ ಪಠ್ಯದ ಕಲಿಕೆಯನ್ನಷ್ಟೇ ಶಿಕ್ಷಣ ಎಂಬ ಭ್ರಮೆ ನಮ್ಮಲ್ಲಿದೆ. ಆದರೆ, ಜೀವನದುದ್ದಕ್ಕೂ ಪ್ರತಿ ಹೆಜ್ಜೆಯಲ್ಲೂ ವಿವಿಧ ರೀತಿಯ ಶಿಕ್ಷಣ ಪಡೆಯುತ್ತೇವೆ ಎಂಬ ಸತ್ಯವನ್ನು ಮರೆಯಬಾರದು ಎಂದು ತುಮಕೂರು ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಆದರ್ಶ ಸೇವಾ ಸಮಿತಿಯು ಗುರುವಾರ ಆಯೋಜಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಗುರು ಶಿಕ್ಷಣ ನೀಡಿದರೆ, ಬಳಿಕ ಸ್ನೇಹಿತ, ನಮ್ಮ ಶ್ರಮ ಹಾಗೂ ಜೀವನಾನುಭವದಿಂದ ಶಿಕ್ಷಣ ಪಡೆಯುತ್ತೇವೆ. ವಿಶ್ವವಿದ್ಯಾಲಯದ ಪದವಿಗಷ್ಟೇ ಶಿಕ್ಷಣವನ್ನು ಸೀಮಿತಗೊಳಿಸಿದಿರಿ. ಜೀವನದುದ್ದಕ್ಕೂ ಕಲಿಕೆ ಮುಂದುವರೆಸಿದರೆ ಸಾಮಾನ್ಯನೂ ಅಸಮಾನ್ಯನಾಗಲು ಸಾಧ್ಯ ಎಂದರು.

ಪ್ರಸ್ತುತ ಸಮಾಜದಲ್ಲಿ ಮನುಷ್ಯ ತನ್ನ ಪರಿಸರ ಹೇಗಿದೆ, ಇತರರ ಸಮಸ್ಯೆಗಳು ಯಾವುವು ಎಂಬುದನ್ನಷ್ಟೇ ಚಿಂತಿಸುತ್ತಾನೆ. ಯಾವಾಗ ನಾವು ನಮ್ಮ ಬಗ್ಗೆ ಅರಿತುಕೊಳ್ಳುವಲ್ಲಿ ಯಶಸ್ವಿಯಾಗುತ್ತೇವೆಯೂ ಅಂದಿಗೆ ಜೀವನದ ಯಶಸ್ಸು ನಮ್ಮದಾಗುತ್ತದೆ. ಇಲ್ಲದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ. ಆತ್ಮವಂಚನೆಯು ಅನ್ಯರ ವಂಚನೆಗಿಂತಲೂ ಘೋರವಾದದ್ದು. ಹೀಗಾಗಿ, ನಮ್ಮನ್ನ ಅರಿಯುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಭಾರತದ ಪರಂಪರೆಯು ಶತಮಾನಗಳಿಂದ ಶಾಶ್ವತವಾಗಿ ಉಳಿದಿದೆ. ವೇದ, ಉಪನಿಷತ್ತುಗಳಲ್ಲಿ ಸತ್ಯಾಂಶವಿದ್ದ ಕಾರಣ ಇಲ್ಲಿಯವರೆಗೂ ಅದರಲ್ಲಿ ಯಾವುದೇ ತಿದ್ದುಪಡಿಯಾಗಿಲ್ಲ. ಮನುಷ್ಯನಿಗೆ ಸಾವಿರಾರು ವರ್ಷಗಳಿಗಾಗುವ ಮಾರ್ಗದರ್ಶನದ ತತ್ವಗಳು ಅದಲ್ಲಿವೆ. ಅವುಗಳ ಪಾಲನೆಯಿಂದಾಗಿ ದೇಶದಲ್ಲಿ ಸಮೃದ್ಧತೆ ನೆಲೆಸಿದೆ. ಹೀಗಾಗಿ, ಪರಂಪರೆಯನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು ಎಂದರು.

ನಮ್ಮ ಹಿಂದಿನ ಇತಿಹಾಸವನ್ನು ಅರಿತು, ಅವನ್ನು ಪ್ರಸ್ತುತ ಸಮರ್ಥವಾಗಿ ನಿರ್ವಹಿಸಿ, ಯೋಗ್ಯವಾದದ್ದನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಕ್ರಿಯೆಯೇ ರಾಷ್ಟ್ರ ಜಾಗೃತಿ. ನಾಳಿನ ನಾಗರಿಕತೆಯ ಬಗ್ಗೆ ಅರಿತು ದೂರದರ್ಶಿ ಯೋಚನೆಯಲ್ಲಿ ಬದುಕಿದಾಗ ಮುಂದಿನ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸಲು ಸಾಧ್ಯ ಎಂದು ಅವರು ಹೇಳಿದರು.

ನಿವೃತ್ತ ನ್ಯಾಯಾಧೀಶ ಎನ್‌. ಕುಮಾರ್‌, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌, ಮುಖಂಡರಾದ ಅನಂತ ಜೋಷಿ, ಸುಬ್ಬರಾವ್‌, ವೆಂಕಟಕೃಷ್ಣಯ್ಯ, ಕೆ.ವಿ. ನಾಗರಾಜ್‌, ವಿಜಯಲಕ್ಷ್ಮೀ ಬಾಲೆಕುಂದ್ರು ಮೊದಲಾದವರು ಇದ್ದರು.

Follow Us:
Download App:
  • android
  • ios