ಎಸ್ಟಿ ಮೀಸಲಾತಿ ವಿಚಾರ: ಆ ಸಮುದಾಯಕ್ಕೆ ನ್ಯಾಯ ಕೊಡಲು ಹಾವಿನ ಹುತ್ತಕ್ಕೆ ಕೈಹಾಕಲು ನಾನು ಸಿದ್ಧ: ಸಿಎಂ
ಜನರನ್ನು ವೋಟ್ ಬ್ಯಾಂಕ್ ಎಂದು ನಾವು ತಿಳಿದುಕೊಂಡಿಲ್ಲ. ನಾವು ಮಾಡಿರುವ ಕೆಲಸ, ಕಾರ್ಯಕ್ರಮ ನಿಮ್ಮ ಮುಂದಿಟ್ಟಿದ್ದೇವೆ. ನಮ್ಮ ರಿಪೋರ್ಚ್ ಕಾರ್ಡ್ ನೋಡಿ ಸಕಾರಾತ್ಮಕವಾಗಿ ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ (ಮಾ.11) : ಜನರನ್ನು ವೋಟ್ ಬ್ಯಾಂಕ್ ಎಂದು ನಾವು ತಿಳಿದುಕೊಂಡಿಲ್ಲ. ನಾವು ಮಾಡಿರುವ ಕೆಲಸ, ಕಾರ್ಯಕ್ರಮ ನಿಮ್ಮ ಮುಂದಿಟ್ಟಿದ್ದೇವೆ. ನಮ್ಮ ರಿಪೋರ್ಚ್ ಕಾರ್ಡ್ ನೋಡಿ ಸಕಾರಾತ್ಮಕವಾಗಿ ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಿಮಗೆ ದೊಡ್ಡ ಹೃದಯವಿದೆ. ಎಲ್ಲರಿಗೂ ನೀವು ಅವಕಾಶ ಕೊಡುತ್ತೀರಿ. ನಾವು ಮಾಡಿರುವ ಕೆಲಸವನ್ನು ನಿಮ್ಮ ಮುಂದಿಟ್ಟಿದ್ದೇವೆ. ಇನ್ನು ಕೂಡ ಇಡುತ್ತೇವೆ. ಎಲ್ಲ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಎಲ್ಲ ವರ್ಗದ ಜನರಿಗೆ ನೀಡುತ್ತೇವೆ. ದುಡಿಯುವ ವರ್ಗಕ್ಕೆ ಸಂಪೂರ್ಣ ಗೌರವ ನೀಡುವ ಕಾರ್ಯ ಸರ್ಕಾರ ಮಾಡುತ್ತಿದೆ. ಬೇರೆಯವರು ಅಧಿಕಾರಕ್ಕೆ ಬಂದಾಗ ಏನು ಮಾಡಿದ್ದಾರೆ ಎಂಬುದು ನಿಮ್ಮ ಅನುಭವಕ್ಕಿದೆ. ಈ ಜನರನ್ನು ನಾವು ವೋಟ್ ಬ್ಯಾಂಕ್ ಆಗಿ ತಿಳಿದುಕೊಂಡಿಲ್ಲ. ಮಾಲಕರು ಎಂದು ತಿಳಿದುಕೊಂಡು ನಾವು ಅವರ ಸೇವಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಹಾವೇರಿಯಲ್ಲಿ ಪಶು ಆಹಾರ ಘಟಕ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ
ಜನರ ಬೇಕು ಬೇಡಿಕೆ, ಸಮಸ್ಯೆ ಅರಿತು ನಾವು ಯೋಜನೆ ಜಾರಿಗೆ ತಂದಿದ್ದೇವೆ. ಖಜಾನೆಯಲ್ಲಿ ದುಡ್ಡಿದ್ದು ಜನರು ಬಡವರಾಗಿದ್ದರೆ ಅದು ಉತ್ತಮ ವ್ಯವಸ್ಥೆಯಲ್ಲ. ಜನರು ಶ್ರೀಮಂತರಾಗಿ ತೆರಿಗೆ ತುಂಬಿ ಶ್ರೀಮಂತ ಸರ್ಕಾರವಾಗಬೇಕು. ಪ್ರಜಾಪ್ರಭುತ್ವ ಯಶಸ್ಸಿಗೆ ವ್ಯಕ್ತಿ ಆಧಾರಿತ ಆಡಳಿತದ ಬದಲಾಗಿ ವ್ಯವಸ್ಥೆ ಆಧಾರಿತ ಆಡಳಿತ ಬರಬೇಕು. ಕೆಲವರು ನನ್ನನ್ನು ಸಿಎಂ ಮಾಡಲು ಮತ ಕೊಡಿ ಎಂದು ಕೇಳುತ್ತಾರೆ. ನಾನು ಪೀಪಲ್ ಪೊಲಿಟಿಕ್ಸ್ ನಂಬಿದ್ದೇನೆಯೇ ಹೊರತು ಪವರ್ ಪಾಲಿಟಿಕ್ಸ್ ಅಲ್ಲ ಎಂದು ಹೇಳಿದರು.
ಹಾವಿನ ಹುತ್ತಕ್ಕೆ ಕೈ ಹಾಕಲು ಹೆದರಲ್ಲ:
ನಮ್ಮ ಸರ್ಕಾರದಿಂದ ದುಡಿಯುವ ವರ್ಗಕ್ಕೆ, ಮಹಿಳೆಯರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಯೋಜನೆ ಜಾರಿಗೆ ತಂದಿದ್ದೇವೆ. ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಿಸುವುದು 40 ವರ್ಷದ ಬೇಡಿಕೆಯಾಗಿತ್ತು. ನಾವು ಮೀತಿಲಾತಿ ಹೆಚ್ಚಿಸುವಾಗ ನಮ್ಮನ್ನು ಅನುಮಾನದಿಂದ ನೋಡಿದರು. ಕಾನೂನುಬದ್ಧವಾಗಿಲ್ಲ ಎಂದು ವಾದಿಸಿದರು. ಆದರೆ, ಅದಕ್ಕೆ ಪಾರ್ಲಿಮೆಂಟ್‌ನಲ್ಲಿ ಒಪ್ಪಿಗೆಯ ಮುದ್ರೆ ದೊರೆತು ದೇಶಕ್ಕೆ ಮಾದರಿಯಾಗುತ್ತದೆ ಎಂದು ಬೊಮ್ಮಾಯಿ, ಮೀಸಲಾತಿ ಹೆಚ್ಚಳ ಜೇನುಗೂಡಿಗೆ ಕೈಹಾಕಿದಂತೆ ಎಂದು ಕಿವಿಯಲ್ಲಿ ಬಂದು ಹೇಳುತ್ತಿದ್ದರು. ಆ ಸಮುದಾಯಕ್ಕೆ ನ್ಯಾಯ ಕೊಡಲು ಹಾವಿನ ಹುತ್ತಕ್ಕೂ ಕೈ ಹಾಕಲು ನಾನು ತಯಾರಿದ್ದೇನೆ ಎಂದು ಹೇಳಿದೆ. ಇದು ನಮ್ಮ ನಿಲುವು ಎಂದರು.
ಉಕ ಮಂಡಳಿ ಸ್ಥಾಪನೆ:
ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಈ ಭಾಗದ ಮೆಘಾ ಯೋಜನೆಗಳನ್ನು ಈ ಮಂಡಳಿಯ ಮೂಲಕವೇ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಕಾರ್ಯಕೈಗೊಂಡಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದ ಐದುವರೆ ಕೋಟಿ ಜನರಿಗೆ ಒಂದಿಲ್ಲೊಂದು ಯೋಜನೆ ತಲುಪಿಸಿದ್ದೇವೆ. ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಿಸಿದ್ದೇವೆ ಎಂದು ಹೇಳಿದರು.
ಕೈಕಾಲು ಮುಗಿತೀನ್ರಿ ಕೆಲಸದಿಂದ ತೆಗಿಬ್ಯಾಡ್ರಿ : ಪಿಡಿಓ ಮುಂದೆ ಅಂಗಲಾಚಿದ ದಲಿತ ಮಹಿಳೆ
ಬಿತ್ತನೆ ಬೀಜಕ್ಕೆ ಮುಂಗಡ:
ಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕೆ ರೈತರಿಗೆ . 10 ಸಾವಿರ ನೆರವು ನೀಡುವ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ 67 ಲಕ್ಷ ರೈತರಿಗೆ ಈ ಲಾಭದೊರಕಿಸಿ ಕೊಡಲಾಗುವುದು. ರೈತರಿಗೆ ಮೊಟ್ಟಮೊದಲ ಬಾರಿಗೆ ವಿಮೆ ಜಾರಿಗೆ ತರಲಾಗಿದೆ. . 180 ಕೋಟಿ ಇನ್ಸೂರೆನ್ಸ್ ರೈತರ ಪರವಾಗಿ ಸರ್ಕಾರವೇ ತುಂಬಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ, ಕೃಷಿ ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.