ಚಿತ್ರದುರ್ಗ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಎನ್‌.ಚಂದ್ರಪ್ಪ ಹೆಸರು ಘೋಷಣೆಯಾದರೆ ಅದನ್ನು ತಾವು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

 ಪಾವಗಡ : ಚಿತ್ರದುರ್ಗ ಲೋಕಸಭಾ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಎನ್‌.ಚಂದ್ರಪ್ಪ ಹೆಸರು ಘೋಷಣೆಯಾದರೆ ಅದನ್ನು ತಾವು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಇದರ ಬೆನ್ನಲೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ. ಚಿತ್ರದುರ್ಗ ಲೋಕಸಭಾ ಕೇತ್ರ ಎಸ್‌ಸಿಗೆ ಮೀಸಲಿದ್ದು, ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಓಡಾತ್ತಿದೆ. ಇವರೇ ಅಭ್ಯರ್ಥಿಯಾದರೆ ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಭೋವಿ ಸಮಾಜಕ್ಕೆ ಅದ್ಯತೆ ನೀಡಿ ಎಂದು ಕೆಪಿಸಿಸಿಗೆ ಮನವಿ ಮಾಡಲಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೇ ಸಮಾಜಕ್ಕೆ ನೋವುಂಟಾಗಲಿದೆ. ವಿಧಾನಸಭೆ ಚುನಾವ‍ಣೆಯ ವೇಳೆ ನಡೆದುಕೊಂಡ ರೀತಿ ಬಗ್ಗೆ ಇಲ್ಲಿನ ಆನೇಕ ಮಂದಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಆಸಮಾಧಾನವಿದೆ. ಮಾದಿಗ ಸಮುದಾಯಕ್ಕೆ ಟಿಕೆಟ್‌ ಕೊಡುವುದಾ ದರೆ ಬಿ.ಎನ್‌.ಚಂದ್ರಪ್ಪರನ್ನು ಹೊರತುಪಡಿಸಿ ಈ ಸಮಾಜದಲ್ಲಿ ಇನ್ನೂ ಆನೇಕ ಮಂದಿ ಇದ್ದಾರೆ. ಅವರಲ್ಲಿ ಗುರ್ತಿಸಿ ಟಿಕೆಟ್‌ ಕೊಡಿ ಎಂದರು.

ಬಿ.ಎನ್‌.ಚಂದ್ರಪ್ಪ ಮಾದಿಗ ಸಮುದಾಯಕ್ಕೆ ಸೇರಿಲ್ಲ ಎಂಬವುದರ ಬಗ್ಗೆ ಗೊಂದಲವಿದೆ. ಸಂಶಯಗಳು ಸ್ಪಷ್ಟವಾಗಬೇಕಿದೆ. ನಾನು ಕಾಂಗ್ರೆಸ್‌ ತತ್ವ, ಸಿದ್ಧಾತಗಳಿಗೆ ಬದ್ಧವಾಗಿದ್ದು, ಹೈಕಮಾಂಡ್‌ ಆದೇಶ ಪಾಲಿಸುತ್ತೇನೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಪರ ನನ್ನ ನಿಲುವು ಇದೆ. ಕಾಂಗ್ರೆಸ್‌ಗೆ ಮತ ನೀಡುತ್ತೇನೆ. ಬೇರೆ ಯಾವುದೇ ವಿಚಾರದ ಬಗ್ಗೆ ನನ್ನ ಸಹಕಾರ ಇರುವುದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.

ಇದೇ ವೇಳೆ ತಾಲೂಕು ಕಾಂಗ್ರೆಸ್‌ ಮುಖಂಡರಾದ ಶಂಕರರೆಡ್ಡಿ, ಮೈಲಪ್ಪ, ಮಾಜಿ ತಾಪಂ ಅಧ್ಯಕ್ಷ ಐ.ಜಿ.ನಾಗರಾಜ್‌, ಗುತ್ತಿಗೆದಾರ ಆರ್‌.ಎ.ಹನುಮಂತರಾಯಪ್ಪ, ಮಾಜಿ ಪುರಸಭೆ ಅಧ್ಯಕ್ಷ ಅನಿಲ್‌ ಅಂಡೇ, ಯುವ ಮುಖಂಡ ಕನ್ನಮೇಡಿ ಸುರೇಶ್‌ ಇದ್ದರು.