ಬೆಳಗಾವಿ(ಸೆ.30): ಉಪ ಚುನಾವಣೆಗೆ ಅನರ್ಹ ಶಾಸಕರಿಗೆ ಟಿಕೇಟ್ ನೀಡುವ ವಿಚಾರ ಶಾಸಕ ಉಮೇಶ ಕತ್ತಿಯವರಾಗಲಿ ಅಥವಾ ನಾವಾಗಲಿ ತೀರ್ಮಾನ ಮಾಡುವುದಿಲ್ಲ, ಅದಕ್ಕೆ ಬಿಜೆಪಿ ಹೈಮಾಂಡ್ ಇದೆ. ಹೈಕಮಾಂಡ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮದೇ ಪಕ್ಷದ ಶಾಸಕ ಉಮೇಶ ಕತ್ತಿ ಅವರಿಗೆ ಟಾಂಗ್ ನೀಡಿದ್ದಾರೆ. 

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಬಿಜೆಪಿ ಶಾಸಕ ಉಮೇಶ ಕತ್ತಿ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಅವರ ದಾರಿ ಅವರು ನೋಡಿಕೊಳ್ಳಲಿ ಎಂಬ ಹೇಳಿಕೆಗೆ ಸವದಿ ಅವರು ಪ್ರತಿಕ್ರಿಯೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಹೈಕಮಾಂಡ್‌ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರು ಸ್ಪರ್ಧಿಸುತ್ತಾರೆ. ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಹೊರತು ಉಮೇಶ ಕತ್ತಿ ಆಗಲಿ ಅಥವಾ ನಾವಾಗಲಿ ತೀರ್ಮಾನ ಮಾಡುವುದಿಲ್ಲ ಎಂದರು. 

ಇನ್ನು ಅನರ್ಹ ಬೆಳಗಾವಿ ಜಿಲ್ಲೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಕುರಿತು ಸವದಿ ಅವರ ಮಾಡಿರುವ ನಿಂದನೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಕುಮಟಳ್ಳಿ ಪರ ಶನಿವಾರ ಮಾತನಾಡಿದ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿ ಎಂ ಲಕ್ಷ್ಮಣ ಸವದಿ ಅವರು, ಬಹಳ ಹಳೆಯ ವಿಡಿಯೋ. ಅದನ್ನು ಈಗ ವೈರಲ್ ಮಾಡಿದ್ದಾರೆ. ನಮ್ಮ ಪರವಾಗಿ ಸತೀಶ ಜಾರಕಿಹೊಳಿ ಅವರು ಬ್ಯಾಟಿಂಗ್ ಮಾಡಿದ್ರೂ ಸ್ವಾಗತ. ವಿರೋಧ ಮಾಡಿದವರಿಗೂ ಸ್ವಾಗತ ಮಾಡುತ್ತೇನೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು. 

ಸಿಎಂ ಯಡಿಯೂರಪ್ಪ ಮತ್ತೆ ಬೆಳಗಾವಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಹಂಚಿಕೆ ಕುರಿತು ಸಭೆ ನಡೆಸುವ ವಿಚಾರವಾಗಿ ಸತೀಶ ಜಾರಕಿಹೊಳಿ ಅವರು ಸಭೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಹಣ ತನ್ನಿ ಎಂದು ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸವದಿ ಅವರು, ವಿರೋಧ ಪಕ್ಷದಲ್ಲಿದ್ದವರು ನಮ್ಮನ್ನ ಹೊಗಳಲು ಇರುವುದಿಲ್ಲ. ನಮ್ಮನ್ನ ತೆಗೆಳಲೇಬೇಕು. ವಿರೋಧ ಪಕ್ಷದಲ್ಲಿದ್ದುಕೊಂಡು ಅವರ ಕೆಲಸ ಅವರು ಮಾಡುತ್ತಿದ್ದಾರೆ. ಆಡಳಿತದ ಪಕ್ಷದಲ್ಲಿದ್ದುಕೊಂಡು ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.

ನೆರೆ ಪರಿಹಾರ ಕೆಲಸಕ್ಕೆ ಹಣದ ಕೊರತೆ ಇಲ್ಲ:

ನೆರೆ ಪರಿಹಾರಕ್ಕೆ ಕೊಡಲು ಹಣದ ಕೊರತೆ ನಮ್ಮ ಸರ್ಕಾರಕ್ಕೆ ಇಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಗೆ 500 ಕೋಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಆ ನಂತರ ಹಣ ಕಳುಹಿಸಿಕೊಡುತ್ತೆ. ನಮ್ಮಲ್ಲಿ ಇರುವ ಹಣದಲ್ಲಿ ಕೆಲಸ ಆರಂಭಿಸಿದ್ದೇವೆ ಎಂದರು. 

ಡಿಸಿಎಂ ಸವದಿ- ರಮೇಶ ಒಂದೇ ವಿಮಾನದಲ್ಲಿ ಪ್ರಯಾಣ: 

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅನರ್ಹ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜತೆಗೆ ಅಳಿಯ ಅಂಬಿರಾವ್ ಅವರು ಒಂದೇ ವಿಮಾನದಲ್ಲಿ ಭಾನುವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು. ಸುದ್ದಿಗಾರರ ಯಾವುದೇ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ದಿಢೀರ್‌ನೆ ಬೆಂಗಳೂರಿಗೆ ಹೊರಟರು. ಇದೇ ಮೊದಲ ಬಾರಿ ಅಳಿಯ ಅಂಬಿರಾವ್ ಪಾಟೀಲ ಅವರನ್ನು ಕರೆದುಕೊಂಡು ಬೆಂಗಳೂರಿಗೆ ಪ್ರಯಾಣಿಸಿದರು.