Asianet Suvarna News Asianet Suvarna News

ಜನತೆಯ ಆಶೀರ್ವಾದದಿಂದ ನಮಗೇ ಅಧಿಕಾರ:ಎಚ್‌ಡಿಕೆ

ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ ಶನಿವಾರ ನಗರದ ಗ್ರಾಮ ದೇವತೆ ಶ್ರೀ ಕೆಂಪಮ್ಮದೇವಿಗೆ ಪೂಜೆ ಸಲ್ಲಿಸಿ ದೇವಾಲಯದಿಂದ ಪಕ್ಷದ ವರಿಷ್ಠರಾದ ಹೆಚ್‌.ಡಿ. ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

 We are empowered by the blessings of the people: HDK  snr
Author
First Published Apr 16, 2023, 8:36 AM IST | Last Updated Apr 16, 2023, 8:36 AM IST

  ತಿಪಟೂರು :  ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ ಶನಿವಾರ ನಗರದ ಗ್ರಾಮ ದೇವತೆ ಶ್ರೀ ಕೆಂಪಮ್ಮದೇವಿಗೆ ಪೂಜೆ ಸಲ್ಲಿಸಿ ದೇವಾಲಯದಿಂದ ಪಕ್ಷದ ವರಿಷ್ಠರಾದ ಹೆಚ್‌.ಡಿ. ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಗರದ ಐಬಿ ಸರ್ಕಲ್‌ ಬಳಿ ಜನತೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ. ಐದು ವರ್ಷಗಳ ಆಡಳಿತ ಮಾಡಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಕಮಿಷನ್‌ ದಂಧೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ ಜನಪರ, ರೈತಪರ ಕಾಳಜಿಯುಳ್ಳ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದ್ದು, ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ವಿಂಟಾಲ್‌ ಕೊಬ್ಬರಿಗೆ 15ಸಾವಿರ ರು. ನಿಗದಿ ಮಾಡುತ್ತೇನೆ. ರೈತಪರ, ಜನಪರ ಕಾಳಜಿ ಇಲ್ಲದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಮತಹಾಕದೆ ರೈತರಿಗಾಗಿ ಶ್ರಮಿಸುತ್ತಿರುವ ಜೆಡಿಎಸ್‌ಗೆ ಮತಹಾಕುವ ಮೂಲಕ ಇಲ್ಲಿನ ಅಭ್ಯರ್ಥಿ ಶಾಂತಕುಮಾರ್‌ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ ಮಾತನಾಡಿ ನಾನು ಮಾಡುತ್ತಿರುವ ಜನಸೇವೆಯೇ ನನಗೆ ಶ್ರೀರಕ್ಷೆಯಾಗಿದ್ದು ಮತ್ತಷ್ಟುಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯ ಪ್ರವೇಶ ಪಡೆದಿದ್ದು ಪಕ್ಷದ ವರಿಷ್ಠ ಹೆಚ್‌.ಡಿ. ಕುಮಾರಸ್ವಾಮಿ ಖುದ್ದು ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದಿರುವುದು ಹೆಚ್ಚಿನ ಶಕ್ತಿ ಬಂದಂತಾಗಿದೆ. ಜೆಡಿಎಸ್‌ ಪಕ್ಷ ಜನಸಾಮಾನ್ಯರ ಪಕ್ಷವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಶತಾಯಗತಾಯ ಜೆಡಿಎಸ್‌ನ್ನು ಅಧಿಕಾರಕ್ಕೆ ತರುವ ಮೂಲಕ ಹೆಚ್‌.ಡಿ.ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ತಾಲೂಕಿನಾದ್ಯಂತ ಪ್ರಚಾರ ಕಾರ್ಯ ಬರದಿಂದ ಸಾಗುತ್ತಿದ್ದು, ಹಗಲಿರುಳು ಮತದಾರರನ್ನು ಭೇಟಿ ಮಾಡಿ ನಮ್ಮ ಪಕ್ಷದ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ಇಲ್ಲಿನ ಜನತೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎರೆಡೆರಡು ಬಾರಿ ಅವಕಾಶ ಕೊಟ್ಟಿದ್ದು, ಈ ಬಾರಿ ನನಗೊಂದು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜೆಡಿಎಸ್‌ಗೆ ಜೈಕಾರ ಕೂಗುತ್ತಾ ಸಾಗಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಗುರುಮೂರ್ತಿ, ಪ್ರಶಾಂತ್‌, ಮಹಿಳಾ ಮುಖಂಡರಾದ ರೇಖಾಅನೂಪ್‌ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಅಮುಲ್‌ ಉತ್ಪನ್ನ ಮಾರಲು ಬಿಡೆವು

ಇದೀಗ ಗುಜರಾತಿನ ಅಮುಲ್‌ನೊಂದಿಗೆ ಕರ್ನಾಟಕದ ಕೆಎಂಎಫ್‌ ನಂದಿನಿ ಸಂಸ್ಥೆಯನ್ನು ವಿಲೀನ ಮಾಡಲು ಪ್ರಯತ್ನಿಸುತ್ತಿರುವುದು ಲಕ್ಷಾಂತರ ಹಾಲು ಉತ್ಪಾದಕರಿಗೆ ದ್ರೋಹ ಮಾಡಿದಂತೆ, ಯಾವುದೇ ಕಾರಣಕ್ಕೂ ಈ ವಿಲೀನ ಪ್ರಕ್ರಿಯೆಗೆ ಮಾಡಲು ಬಿಡುವುದಿಲ್ಲ. ಅಲ್ಲದೇ, ಅಮುಲ್‌ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಲು ಬಿಡುವುದಿಲ್ಲ ಎಂದು ಎಚ್‌.ಡಿ ಕುಮಾರಸ್ವಾಮಿ ಹೇಳಿದರು.

 ಬಿಜೆಪಿ ಸರ್ಕಾರವು ಕೊಬ್ಬರಿಗೆ ಬೆಂಬಲ ನೀಡದೇ ಇದ್ದು, ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 15 ಸಾವಿರ ರು. ನಿಗದಿ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳಿಗೆ ಜನಸಾಮಾನ್ಯನ, ರೈತರ ಅಭಿವೃದ್ಧಿ ಬೇಕಾಗಿಯೇ ಇಲ್ಲ. ಇವರುಗಳ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Latest Videos
Follow Us:
Download App:
  • android
  • ios