ಜ.10ರಿಂದ ಕೆಆರ್‌ಎಸ್ ನಾಲೆಗಳಿಗೆ ನೀರು: ಸಚಿವ ಚಲುವರಾಯಸ್ವಾಮಿ
ಬೇಸಿಗೆ ಅವಧಿಯಲ್ಲಿ ಅಲ್ಪಾವಧಿ ಬೆಳೆ ಬೆಳೆಯಲು ಅನುಕೂಲವಾಗುವಂತೆ ಜ.10ರಿಂದ ಕೆಆರ್‌ಎಸ್ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಜ.08): ಬೇಸಿಗೆ ಅವಧಿಯಲ್ಲಿ ಅಲ್ಪಾವಧಿ ಬೆಳೆ ಬೆಳೆಯಲು ಅನುಕೂಲವಾಗುವಂತೆ ಜ.10ರಿಂದ ಕೆಆರ್‌ಎಸ್ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅತಿಥಿಗೃಹದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಾವಧಿ ಬೆಳೆ ಬೆಳೆಯಲು ಕಟ್ಟು ಪದ್ಧತಿಯಡಿ ನಾಲ್ಕು ಕಟ್ಟು ನೀರು ಹರಿಸುವುದಕ್ಕೆ ನಿರ್ಧರಿಸಲಾಗಿದೆ. ಕಾಲ ಮಿತಿಯೊಳಗೆ ಅಲ್ಪಾವಧಿ ಬೆಳೆ ನಾಟಿ ಮಾಡಲು ರೈತರು ಮುಂದಾಗಬೇಕು. ವಿಳಂಬ ಮಾಡಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು.
ಎರಡೂ ಬೆಳೆಗೆ ನೀರು ಕೊಡಲು ನಮ್ಮ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ವರುಣನ ಕೃಪೆ ಹೇಗಿರುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಹೀಗಾಗಿ ಬೇಗ ಒಟ್ಟಲು ಹಾಕಿ, ಅಲ್ಪಾವಧಿ ಬೆಳೆ ನಾಟಿ ಮಾಡಿ. ೧೮ ದಿನ ನೀರು ಬಿಡುವುದು ೧೨ ದಿನ ನಿಲ್ಲಿಸುವ ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದರು. ಕಳೆದ ಸಲ ಸಂಕ್ರಾಂತಿಗೆ ಆತಂಕದಿಂದಲೇ ನೀರು ಬಿಡಲಾಗಿತ್ತು. ಆದರೆ, ಈ ಬಾರಿ ಆ ರೀತಿಯ ಆತಂಕ ಇಲ್ಲ. ಸಂಕ್ರಾಂತಿ ವೇಳೆಗೆ ನೀರು ಬಿಡುತ್ತೇವೆ. ನೀರು ಸ್ಥಗಿತ ಮಾಡಿದ ಸಮಯದಲ್ಲಿ ನಾಲೆಗಳ ಮುಂದುವರೆದ ಕಾಮಗಾರಿ ನಡೆಸಲಾಗುವುದು ಎಂದರು.
ಚಲುವರಾಯಸ್ವಾಮಿಗೆ ಅಧಿಕಾರ, ಹಣದ ಮದ ಬಡವರ ಕಷ್ಟ, ವಾಸ್ತವಾಂಶ ಅರ್ಥವಾಗಲ್ಲ: ಎಚ್‌ಡಿಕೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಕೆ ಟೀಕಿಸಿರುವ ಬಗ್ಗೆ ಕೇಳಿದಾಗ, ಬ್ರದರ್ಸ್‌ಗೆ ನಮ್ಮನ್ನು ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ನಮ್ಮ ಬ್ರದರ್ ಸಂಕಟ ಪಡುತ್ತಿದ್ದಾರೆ. ಅವರಿಗೆ ಯಾರಾದರೂ ಸಮಾಧಾನ ಹೇಳಬೇಕು. ಸರ್ಕಾರ ಬೀಳುತ್ತೆ, ತೆಗೆಯುತ್ತೇವೆ ಎನ್ನುವುದು ಒಳ್ಳೆಯದಲ್ಲ. ಹೆಚ್ಡಿಕೆ ಸಮಾಧಾನಪಡಿಸುವ ಮೆಡಿಸನ್ ನಮ್ಮ ಬಳಿ ಇಲ್ಲ ಎಂದು ನಯವಾದ ಮಾತುಗಳಿಂದ ತಿವಿದರು. ೫೦ ಸಾವಿರ ಮತಗಳ ಅಂತರದಿಂದ ನಾನು ಸೋತಾಗಲೂ ಕುಮಾರಸ್ವಾಮಿ ವಿರುದ್ಧ ಮಾತನಾಡಲಿಲ್ಲ. ಅವರು ಮುಖ್ಯಮಂತ್ರಿಯಾದಾಗಲೂ ಅವರ ಆಡಳಿತವನ್ನು ಟೀಕೆ ಮಾಡಲಿಲ್ಲ. ಆದರೆ, ಕುಮಾರಸ್ವಾಮಿ ಅವರಿಗೆ ನಮ್ಮನ್ನ ನೋಡಿ ಸಹಿಸಲು ಆಗುತ್ತಿಲ್ಲ. ನನ್ನನ್ನು ಅವರು ಬದ್ಧ ವೈರಿ ಎಂದರು. ನಾನು ನನ್ನ ಸ್ನೇಹಿತರು, ಬ್ರದರ್ ಅಂತಾನೇ ಹೇಳುತ್ತೇನೆ. ರಾಜ್ಯದಲ್ಲಿ ಸಿಎಂ ಆಗಿದ್ದವರು, ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲವೆಂದರೆ ನಾವೇನು ಹೇಳೋಣ ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗನ ಪರ ಜನರ ಬಳಿ ಮತ ಕೇಳಲಿಲ್ಲ. ದೇವೇಗೌಡರೂ ಮೊಮ್ಮಗನ ಪರ ಮತ ಕೇಳಲಿಲ್ಲ. ಸಿದ್ದರಾಮಯ್ಯ ಸರ್ಕಾರ ತೆಗೆಯುತ್ತೇವೆ ಅಂತ ಮಾತ್ರ ಹೇಳುತ್ತಾ ಪ್ರಚಾರ ಮಾಡಿದರು. ಇದನ್ನು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರೇ ಹೇಳಿದ್ದಾರೆ ಎಂದು ವಿವರಿಸಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ೭ಕ್ಕೆ ೬ ಕ್ಷೇತ್ರ ಗೆದ್ದಿದ್ದೇವೆ. ಮೊದಲಿಂದಲೂ ಜಿಲ್ಲೆಗೆ ೨ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ. ಈ ಕುರಿತು ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ನುಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಮತ್ತಿತರರಿದ್ದರು.
೧೫ ನೀರು ಹರಿಸಿ ೮ ದಿನ ನಿಲ್ಲಿಸಲು ಕೆಂಪೂಗೌಡ ಆಗ್ರಹ: ಕೆಆರ್‌ಎಸ್ ಜಲಾಶಯದಿಂದ ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ೧೫ ದಿನ ನೀರು ಹರಿಸಿ ೮ ದಿನಗಳ ಕಾಲ ನೀರು ನಿಲುಗಡೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದ್ದಾರೆ. ಕೆಆರ್‌ಎಸ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜ.೧೦ರಿಂದ ೧೮ ದಿನಗಳ ಕಾಲ ನೀರು ಹರಿಸಿ ೧೨ ದಿನ ನೀರು ನಿಲುಗಡೆ ಮಾಡುವ ತೀರ್ಮಾನ ಮಾಡಲಾಗಿದೆ. ಹೀಗೆ ಮಾಡುವುದರಿಂದ ಬೆಳೆಗಳು ಒಣಗುತ್ತವೆ. ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುವುದಿಲ್ಲ. ಅದಕ್ಕಾಗಿ ೧೮ ದಿನದ ಬದಲಾಗಿ ೧೫ ದಿನಗಳ ಕಾಲವೇ ನೀರು ಕೊಡಲಿ.
ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಸಚಿವ ಚಲುವರಾಯಸ್ವಾಮಿ
೧೨ ದಿನ ನೀರು ನಿಲ್ಲಿಸುವ ಬದಲು ೮ ದಿನ ಮಾತ್ರ ನೀರು ನಿಲ್ಲಿಸಿದರೆ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರಕಿದಂತಾಗುತ್ತದೆ ಎಂದು ಹೇಳಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಗೆ ಈ ಮೊದಲು ರೈತ ಮುಖಂಡರನ್ನೂ ಕರೆಯುತ್ತಿದ್ದರು. ಆಗ ನಾವು ಸಲಹೆ, ಅಭಿಪ್ರಾಯ ನೀಡುತ್ತಿದ್ದೆವು. ಇತ್ತೀಚೆಗೆ ರಾಜಕಾರಣಿಗಳು ಸಭೆಗೆ ನಮ್ಮನ್ನು ಕರೆಯುವುದನ್ನು ಬಿಟ್ಟಿದ್ದಾರೆ. ಸಚಿವರು, ಶಾಸಕರೇ ಸೇರಿಕೊಂಡು ಸಭೆ ನಡೆಸಲಿ. ಆದರೆ, ನೀರನ್ನು ಯಾವ ರೀತಿ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ, ಬೆಳೆಗಳನ್ನು ಉಳಿವಿಗೆ ಎಷ್ಟು ದಿನ ನೀರು ಹರಿಸಿ ನಿಲ್ಲಿಸಿದರೆ ಒಳ್ಳೆಯದು ಎಂಬ ಬಗ್ಗೆ ಆಲೋಚಿಸಬೇಕು. ಅಧಿಕಾರಿಗಳ ನಿರ್ಧಾರದಂತೆ ಸಭೆ ತೀರ್ಮಾನ ಮಾಡಿದರೆ ರೈತರಿಗೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ್ದಾರೆ.